ಕಲಬುರಗಿ: ಜೇವರ್ಗಿ ಪಟ್ಟಣದಲ್ಲಿ ಅನ್ಯಕೋಮಿನ ಯುವಕನ ಚುಡಾಯಿಸುವಿಕೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಮಹಾಲಕ್ಷ್ಮಿ ಅವರ ಮನೆಗೆ ಕ್ಷೇತ್ರದ ಶಾಸಕ ಡಾ.ಅಜಯಸಿಂಗ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಾಲಕಿಯ ತಂದೆ ಯಶವಂತರಾಯ್ ಬಿರಾದಾರ ಹಾಗೂ ಮನೆ ಮಂದಿಯೊಂದಿಗೆ ಮಾತುಕತೆ ನಡೆಸಿದ ಶಾಸಕರು, ಘಟನೆಯ ಬಗ್ಗೆ ವಿಷಾದಿಸಿದರು. ನಿಮ್ಮ ಸಂಕಷ್ಟದ ಈ ಗಳಿಗೆಯಲ್ಲಿ ಸರ್ಕಾರ ಹಾಗೂ ತಾವು ಜೊತೆಗಿರುವುದಾಗಿ ಭರವಸೆ ನೀಡಿದರು.
‘ಘಟನೆಯ ಬಗ್ಗೆ ಸಿ.ಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಚರ್ಚಿಸುತ್ತೇನೆ. ಜತೆಗೆ ಸರ್ಕಾರದಿಂದ ಪರಿಹಾರಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ. ವೈಯಕ್ತಿಕವಾಗಿಯೂ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಜಶೇಖರ್ ಸೀರಿ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂ ಪಟೇಲ್ ಇಜೇರಿ, ಸೋಮಣ್ಣ ಕಲಾ, ಕಾಶಿರಾಯ ಗೌಡ ಯಲಗೋಡ, ಚಂದ್ರಶೇಖರ ಹರನಾಳ ಇದ್ದರು.
ಪೊಲೀಸ್ ಗಸ್ತು–ಸೂಚನೆ: ಇದೇ ಸಂದರ್ಭದಲ್ಲಿ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳೊಂದಿಗೂ ಮಾತನಾಡಿದ ಶಾಸಕ ಡಾ.ಅಜಯಸಿಂಗ್ ಅವರು ಜೇವರ್ಗಿ ಹಾಗೂ ಯಡ್ರಾಮಿ ಸೇರಿದಂತೆ ಪಟ್ಟಣ ಹಾಗೂ ದೊಡ್ಡ ಊರಿನ ಶಾಲೆ, ಕಾಲೇಜು ಹಾಗೂ ಬಾಲಕಿಯರ ಹಾಸ್ಟೆಲ್‌ಗಳ ಸುತ್ತಮುತ್ತ ಹಗಲು, ರಾತ್ರಿ ಪೊಲೀಸ್ ಗಸ್ತು ಇರುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.