ADVERTISEMENT

ಕಲಬುರಗಿ: ₹9.30 ಲಕ್ಷ ಮೌಲ್ಯದ ಆಭರಣ ಕಳವು

ಅನಾರೋಗ್ಯಕ್ಕೀಡಾದ ಅತ್ತೆ ಆರೋಗ್ಯ ವಿಚಾರಿಸಲು ಹೋದಾಗ ನಡೆದ ಕಳ್ಳತನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 4:54 IST
Last Updated 7 ಅಕ್ಟೋಬರ್ 2025, 4:54 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಕಲಬುರಗಿ: ನಗರದ ಮಾಲಗತ್ತಿ ಕ್ರಾಸ್‌ ಸಮೀಪದ ಅಮನ್‌ ನಗರದಲ್ಲಿರುವ ಮನೆಯೊಂದರ ಕೀಲಿ ಮುರಿದ ಕಳ್ಳರು, ₹ 9.30 ಲಕ್ಷ ಮೌಲ್ಯದ ಚಿನ್ನ–ಬೆಳ್ಳಿ ಆಭರಣ ಹಾಗೂ ₹ 27 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ.

ಲಾರಿ ಮೆಕ್ಯಾನಿಕ್‌ ಸಯ್ಯದ್‌ಗೌಸ್‌ ಪಾಶಾ ಚಿನ್ನ–ಬೆಳ್ಳಿ ಆಭರಣ ಹಾಗೂ ನಗದು ಕಳೆದುಕೊಂಡವರು.

‘ಅನಾರೋಗ್ಯಕ್ಕೀಡಾದ ಅತ್ತೆ ಆರೋಗ್ಯ ವಿಚಾರಿಸಲು ಕುಟುಂಬ ಸಮೇತ ಅಕ್ಟೋಬರ್‌ 4ರಂದು ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದೆವು. ಅಕ್ಟೋಬರ್‌ 5ರಂದು ಬೆಳಿಗ್ಗೆ 10 ಗಂಟೆಗೆ ಬಂದಾಗ ಮನೆಯ ಮುಖ್ಯ ಬಾಗಿಲು ತೆರೆದಿತ್ತು. ಮನೆಗೆ ಹಾಕಿದ್ದ ಕೀಲಿ ಮುರಿದ ಕಳ್ಳರು, ಮನೆಯಲ್ಲಿದ್ದ ಅಂದಾಜು ₹ 9 ಲಕ್ಷ ಮೌಲ್ಯದ 99 ಗ್ರಾಂ ಬಂಗಾರದ ವಿವಿಧ ಆಭರಣ, ₹ 30 ಸಾವಿರ ಮೌಲ್ಯದ 30 ಗ್ರಾಂ ಬೆಳ್ಳಿ  ಆಭರಣ ಹಾಗೂ ₹ 27 ಸಾವಿರ ನಗದು ಕದಿದ್ದಾರೆ’ ಎಂದು ಸಯ್ಯದ್‌ಗೌಸ್ ಪಾಶಾ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೀತಿಸುತ್ತಿದ್ದ ಯುವಕನ ಮೇಲೆ ಹಲ್ಲೆ

ಪ್ರೀತಿ ಮಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯ ಕಡೆಯವರು ಯುವಕರೊಬ್ಬರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆರೆಬೋಸಗಾದ ನಿವಾಸಿ ರೇವಣಸಿದ್ಧೇಶ್ವರ ಪೂಜಾರಿ ಹಲ್ಲೆಗೆ ಒಳಗಾದ ಯುವಕ.

‘ಮಾತನಾಡಲು ಕೆರೆ ಬೋಸಗಾ ಕ್ರಾಸ್‌ ಸಮೀಪದ ಖಾಲಿ ಜಾಗಕ್ಕೆ ಕರೆಯಿಸಿ ಕಲ್ಲು, ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ರೇವಣಸಿದ್ಧೇಶ್ವರ ಪೂಜಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಐದು ಮಂದಿ ವಿರುದ್ಧ ನಗರದ ಸಬರ್ಬನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಪೀಟ್‌ ಜೂಜಾಟ: ₹ 36 ಸಾವಿರ ಜಪ್ತಿ

ಕಲಬುರಗಿ ಹೊರವಲಯದ ತಾಜ್‌ಸುಲ್ತಾನಪುರದಿಂದ ಜಂಬಗಾ (ಬಿ) ಗ್ರಾಮದತ್ತ ಹೋಗುವ ರಸ್ತೆ ಪಕ್ಕದ ಜಮೀನಿನಲ್ಲಿ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಪಣಕ್ಕೆ ಹಚ್ಚಿದ್ದ ₹ 9,200 ಸೇರಿದಂತೆ ಒಟ್ಟು ₹ 36,220 ಅನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಒಂಬತ್ತು ಆರೋಪಿಗಳ ವಿರುದ್ಧ ನಗರದ ಸಬರ್ಬನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.