ADVERTISEMENT

ಕಲಬುರಗಿ: ಚಿನ್ನದಾಸೆಗೆ ₹31 ಲಕ್ಷ ಕಳೆದುಕೊಂಡ ವೃದ್ಧ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 6:27 IST
Last Updated 28 ನವೆಂಬರ್ 2025, 6:27 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಕಲಬುರಗಿ: ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ನಂಬಿಸಿದ ಸೈಬರ್‌ ವಂಚಕರು ಸರ್ಕಾರಿ ಶಾಲೆ ನಿವೃತ್ತ ಶಿಕ್ಷಕರೊಬ್ಬರಿಂದ ₹31 ಲಕ್ಷ ಪಡೆದು ವಂಚಿಸಿದ್ದಾರೆ.

ಕಲಬುರಗಿ ಆದರ್ಶ ನಗರದ ನಿವಾಸಿ, 70 ವರ್ಷದ ಮಾರುತಿ ಕಾಳನೂರಕರ ವಂಚನೆಗೆ ಒಳಗಾದವರು.

ADVERTISEMENT

‘ನನಗೆ ಇಬ್ಬರು ಮಕ್ಕಳಿದ್ದು, ಅವರ ಮದುವೆಗಾಗಿ ಚಿನ್ನ ಖರೀದಿಸಲು ಆಗಾಗ ಅಂತರ್ಜಾಲದಲ್ಲಿ ಬಂಗಾರದ ದರ ಪರಿಶೀಲಿಸುತ್ತಿದ್ದೆ. ಹೀಗೆ ಒಮ್ಮೆ ಪರಿಶೀಲಿಸುವಾಗ ಮುಂಬೈನಿಂದ ಸಾನ್ವಿ ಚವ್ಹಾಣ್‌ ಎಂಬುವರಿಂದ ನನಗೊಂದು ವಾಟ್ಸ್‌ಆ್ಯಪ್‌ ಕರೆ ಬಂತು. ತಾನೊಬ್ಬ ಹೋಲ್‌ಸೇಲ್‌ ಚಿನ್ನದ ವ್ಯಾಪಾರಿಯಾಗಿದ್ದು, ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಚಿನ್ನ ಮಾರುವುದಾಗಿ ಪರಿಚಯಿಸಿಕೊಂಡರು. ಕಲಬುರಗಿಯ ವ್ಯಕ್ತಿಯೊಬ್ಬರ ಪರಿಚಯವನ್ನೂ ಹೇಳಿದರು’ ಎಂದು ದೂರಿನಲ್ಲಿ ಮಾರುತಿ ತಿಳಿಸಿದ್ದಾರೆ.

‘ನಮಗೆ 40ರಿಂದ 50 ತೊಲಗಳಷ್ಟು ಬಂಗಾರ ಬೇಕಿದೆ ಎಂದು ಹೇಳಿದವು. ಅದಕ್ಕೆ ಹಲವು ದಿನಗಳ ಕಾಲಾವಕಾಶ ಪಡೆದರು. ಬಳಿಕ ₹31 ಲಕ್ಷಕ್ಕೆ 40 ತೊಲ ಬಂಗಾರ ನೀಡುವುದಾಗಿ ಹೇಳಿದರು. ಅದರಂತೆ ಅವರು ಹೇಳಿದ ಬ್ಯಾಂಕ್‌ ಖಾತೆಗೆ 2025ರ ಆಗಸ್ಟ್‌ 2ರಂದು ಆರ್‌ಟಿಜಿಎಸ್‌ ಮೂಲಕ ನಾವು ಹಣ ವರ್ಗಾಯಿಸಿದೆವು. ಅದಾಗಿ ಮೂರು ತಿಂಗಳಾದರೂ ಈತನಕ ಬಂಗಾರ ನೀಡದೇ ವಂಚಿಸಿದ್ದಾರೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಕುರಿತು ಇಬ್ಬರ ವಿರುದ್ಧ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹38 ಲಕ್ಷ ವಂಚನೆ

ಮುಂಬೈ ಮೂಲದ ವ್ಯಕ್ತಿಯೊಬ್ಬರು ಹಣ್ಣಿನ ವ್ಯಾಪಾರದ ಮಾತುಕತೆ ಮಾಡಿಕೊಂಡು ಹೂಡಿಕೆಯ ನೆಪದಲ್ಲಿ ₹38 ಲಕ್ಷ ಪಡೆದು ವಂಚಿಸಿರುವುದಾಗಿ ನಗರದ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ನಗರದ ಐವಾನ್‌–ಎ–ಶಾಹಿ ಪ್ರದೇಶದ ನಿವಾಸಿ ಅಬ್ದುಲ್‌ ಖದೀರ್‌ ವಂಚನೆಗೆ ಒಳಗಾದವರು.

‘ಮುಂಬೈನ ಪ್ರವೀಣ ನಬಾಜಿ ಶೇಲ್ಕೆ ಮಾತುಕತೆ ನಡೆದಂತೆ ಮೊದಲೆರಡು ಸಲ ಹೂಡಿಕೆ ಹಣವನ್ನು ಲಾಭಾಂಶ ಸಹಿತ ಮರಳಿಸಿದ್ದರು. ಬಳಿಕ ಅವರು ಹೇಳಿದಂತೆ ಹಲವರಿಗೆ ₹38 ಲಕ್ಷ ವರ್ಗಾಯಿಸಿದ್ದೆ. ಅದಾಗಿ ಹಲವು ವರ್ಷಗಳಾದರೂ ಅಸಲೂ ನೀಡಿಲ್ಲ, ಲಾಭಾಂಶವನ್ನೂ ಕೊಡದೇ ವಂಚಿಸಿದ್ದಾರೆ’ ಎಂದು ದೂರಿನಲ್ಲಿ ಅಬ್ದುಲ್‌ ಖದೀರ್‌ ತಿಳಿಸಿದ್ದಾರೆ.

ಈ ಕುರಿತು ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲೆಗೆ ಬಿದ್ದಿದ್ದ ಗೂಳಿ ರಕ್ಷಣೆ

ಕಲಬುರಗಿ: ನಗರದ ಮಾಕಾ ಬಡಾವಣೆಯಲ್ಲಿ ನಾಲೆಗೆ ಬಿದ್ದಿದ್ದ ಗೂಳಿಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಗುರುವಾರ ರಕ್ಷಿಸಿದ್ದಾರೆ.

‘ಬೆಳಿಗ್ಗೆ 11 ಗಂಟೆಗೆ ಗೂಳಿಯೊಂದು ನಾಲೆಗೆ ಬಿದ್ದ ಬಗ್ಗೆ ನಾಗರಿಕರಿಂದ ಕರೆ ಬಂದಿತ್ತು. ನಾಲೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ನೆಗೆಯುವಾಗ ನಾಲೆಗೆ ಬಿದ್ದಿತ್ತು. ನಾಲ್ಕು ತಾಸು ಕಾರ್ಯಾಚರಣೆ ನಡೆಸಿ, ಜೆಸಿಬಿ ನೆರವು ಪಡೆದು ಗೂಳಿ ರಕ್ಷಿಸಲಾಯಿತು’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ, ಎಎಸ್‌ಐ ಮರಿಲಿಂಗಪ್ಪ, ಸಿಬ್ಬಂದಿ ಶಶಿಕುಮಾರ ಬಡಿಗೇರ, ಸುಭಾಶ, ಗಬ್ಬರಸಿಂಗ್, ಶ್ರೀಶೈಲ್‌, ಮೌಲಾಸಾಬ್‌, ಹೊನ್ನಪ್ಪ, ಶಿವಕುಮಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.