
ಕಲಬುರಗಿ: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿರುವ ಸಿಬ್ಬಂದಿಗೆ ತಮಗೆ ವಹಿಸಿದ ಕೆಲಸ ಮುಗಿಸಿದ್ದರೂ ನೋಟಿಸ್ ಕೊಟ್ಟು ತೊಂದರೆ ನೀಡಲಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ನೇತೃತ್ವದಲ್ಲಿ ಜಮಾಯಿಸಿದ ಸಂಘದ ಸದಸ್ಯರು, ಸಮೀಕ್ಷಕರು, ‘ಈಗಾಗಲೇ ಹಲವು ಸಮೀಕ್ಷಕರು ತಮಗೆ ನೀಡಿದ್ದ ಗುರಿಯನ್ನು ತಲುಪಿದ್ದಾರೆ. ಅದಾಗ್ಯೂ ಜನಸಂಖ್ಯೆವಾರು ಸಮೀಕ್ಷಕರ ಕೊರತೆ ಆಗಿರುವುದರಿಂದ ಇನ್ನುಳಿದ ಮನೆಗಳ ಸಮೀಕ್ಷೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆದರೆ, ಅಧಿಕಾರಿಗಳು ಬಾಕಿ ಉಳಿದ ಮನೆಗಳ ವಿವರ, ವಿಳಾಸವನ್ನೇ ನೀಡದೇ ಸಮೀಕ್ಷೆ ಮಾಡಿ ಎಂದು ಒತ್ತಡ ಹೇರುತ್ತಿದ್ದಾರೆ. ಸಮೀಕ್ಷಕರು ಎಲ್ಲಿ ಹೋಗಿ ಸಮೀಕ್ಷೆ ಮಾಡಬೇಕು’ ಎಂದು ಪ್ರಶ್ನಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, ‘ಡಿಡಿಪಿಐ ಅವರು ಕಲಬುರಗಿ ನಗರದಲ್ಲಿ ಸಮೀಕ್ಷೆ ಕೈಗೊಳ್ಳುತ್ತಿರುವ 541 ಸಿಬ್ಬಂದಿಗೆ ನೋಟಿಸ್ ಕೊಟ್ಟಿದ್ದಾರೆ. ಇದು ಸಮೀಕ್ಷಕರು ತಾಳ್ಮೆ ಕಳೆದುಕೊಳ್ಳುವ ಸ್ಥಿತಿ ತಂದೊಡ್ಡಿದೆ. ನೋಟಿಸ್ ಕೂಡಲೇ ಹಿಂಪಡೆಯಬೇಕು. ವಿವಿಧೆಡೆ ಮಾಡಿರುವ ಅಮಾನತು ಆದೇಶವನ್ನೂ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಮಹೇಶ ಹೂಗಾರ ಸೇರಿದಂತೆ ಹಲವರು ಇದ್ದರು.
ಕೊಟ್ಟ ಗುರಿ ತಲುಪಿದ ಸಮೀಕ್ಷಕರಿಗೆ ಸರ್ಕಾರ ನೋಟಿಸ್ ಕೊಟ್ಟಿದ್ದು ತಪ್ಪು. ಸಮೀಕ್ಷೆ ಮುಂದುವರಿಸುವ ಮುನ್ನ ನೋಟಿಸ್ ಹಿಂಪಡೆದು ಸಮೀಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕುಶಶೀಲ್ ನಮೋಶಿ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.