ADVERTISEMENT

ಕ್ಷೇತ್ರಗಳ ಪುನರ್ ವಿಂಗಡಣೆ: ಪ್ರತ್ಯೇಕ ಆಯೋಗ ರಚನೆಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 7:25 IST
Last Updated 20 ಸೆಪ್ಟೆಂಬರ್ 2021, 7:25 IST
 ಭೀಮಾಶಂಕರ ಪಾಟೀಲ
 ಭೀಮಾಶಂಕರ ಪಾಟೀಲ   

ಕಲಬುರ್ಗಿ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆಗೆ ಪ್ರತ್ಯೇಕ ಆಯೋಗ ರಚಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ವಿಧೇಯಕಕ್ಕೆ ತಿದ್ದುಪಡಿ ತಂದಿರುವ ಸರ್ಕಾರದ ಕ್ರಮವನ್ನು ಬಿಜೆಪಿ ಮುಖಂಡ ಭೀಮಾಶಂಕರ ಪಾಟೀಲ ಸ್ವಾಗತಿಸಿದ್ದಾರೆ.

‘ಜಿಲ್ಲೆಯ ಆಳಂದ ತಾಲ್ಲೂಕಿನ ಬಹುತೇಕ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆಯ ಸಮಯದಲ್ಲಿ ಸ್ಥಳೀಯ ರಾಜಕಾರಣಿಗಳು, ಸಂಬಂಧಿಸಿದ ಅಧಿಕಾರಿಗಳು ಜನರ ಭಾವನೆಗಳನ್ನು ಗೌರವಿಸದೆ, ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡದೇ, ಜಾತಿಗೊಂದರಂತೆ ವಿಭಜಿಸಿ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ್ದರು. ಜನರ ಭಾವನೆಗಳನ್ನು ಗೌರವಿಸದೇ ಬೇಕಾ ಬಿಟ್ಟಿಯಾಗಿ ಕ್ಷೇತ್ರ ವಿಭಜಿಸಿರುವ ಚುನಾವಣಾ ಆಯೋಗದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಜಿಡಗಾ, ನಿಂಬರ್ಗಾ, ಸರಸಂಬಾ ಜಿಲ್ಲಾ ಪಂಚಾಯಿತಿ, ಕೆಲ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಸೂಕ್ತ ಕಾರಣವಿಲ್ಲದೆ ಸ್ವಾರ್ಥ ರಾಜಕೀಯ, ಜಾತಿಯ ಮಾನದಂಡದ ಆಧಾರದ ಮೇಲೆ ವಿಭಜಿಸಿ ಕ್ಷೇತ್ರದ ಜನತೆಗೆ ಅನ್ಯಾಯ ಮಾಡಲಾಗಿತ್ತು. ಜನರ ಭಾವನೆಗಳನ್ನು ಗೌರವಿಸದ ತಾಲ್ಲೂಕು ತಹಶೀಲ್ದಾರ್, ಶಾಸಕರು ಸೇರಿದಂತೆ ಅನೇಕರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ತಾಲ್ಲೂಕಿನ ಅಧಿಕಾರಿಗಳು ಸ್ಥಳೀಯ ರಾಜಕಾರಣಿಗಳ ಕೈಗೊಂಬೆಯಾಗಿ ತಮ್ಮ ಅಧಿಕಾರ ರ್ದುಬಳಕೆ ಮಾಡಿಕೊಂಡಿದ್ದರು. ಸರ್ಕಾರ ತೆಗೆದುಕೊಂಡ ಈ ನಿರ್ಧಾರ ಇಂತಹ ಅನೇಕರಿಗೆ ಎಚ್ಚರಿಕೆ ಪಾಠವಾಗಿದೆ. ಇನ್ಮುಂದೆ ಇಂತಹ ಜನದ್ರೋಹಿ ತೀರ್ಮಾನಗಳಿಗೆ ಕೈ ಹಾಕುವ ಮೊದಲು ಸ್ಥಳಿಯ ರಾಜಕಾರಣಿಗಳು, ಅಧಿಕಾರಿಗಳು ಕ್ಷೇತ್ರದ ಜನರ ಭಾವನೆಗಳನ್ನು ಗೌರವಿಸುವುದು ಕಲಿಯಬೇಕು. ಈ ಹಿಂದೆ ಅನ್ಯಾಯವಾಗಿರುವ ಜಿಡಗಾ, ಸರಸಂಬಾ, ನಿಂಬರ್ಗಾ ಕ್ಷೇತ್ರಗಳ ಕುರಿತು ಸೂಕ್ತ ದಾಖಲೆಗಳೊಂದಿಗೆ ಆಯೋಗದ ಮುಂದೆ ಮನವಿ ಸಲ್ಲಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿಕೊಳ್ಳುವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.