ADVERTISEMENT

ಸರ್ಕಾರದ ಖಜಾನೆ ಖಾಲಿ ಡಬ್ಬಾ: ಸಿದ್ದಲಿಂಗ ಸ್ವಾಮೀಜಿ

ಬೀದರ-ಶ್ರೀರಂಗಪಟ್ಟಣ ಹೆದ್ದಾರಿ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 4:53 IST
Last Updated 2 ಸೆಪ್ಟೆಂಬರ್ 2025, 4:53 IST
ಜೇವರ್ಗಿ ತಾಲ್ಲೂಕಿನ ಕೆಲ್ಲೂರ ಬಳಿ ಬೀದರ-ಶ್ರೀರಂಗಪಟ್ಟಣ ಹೆದ್ದಾರಿ ತಡೆದು ನಡೆದ ಹೋರಾಟದಲ್ಲಿ ಶಿವಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು.
ಜೇವರ್ಗಿ ತಾಲ್ಲೂಕಿನ ಕೆಲ್ಲೂರ ಬಳಿ ಬೀದರ-ಶ್ರೀರಂಗಪಟ್ಟಣ ಹೆದ್ದಾರಿ ತಡೆದು ನಡೆದ ಹೋರಾಟದಲ್ಲಿ ಶಿವಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು.   

ಜೇವರ್ಗಿ: ಪಂಚ ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿ ಡಬ್ಬಾದಂತಾಗಿದೆ, ರೈತರ ನೆರವಿಗೆ ಬಾರದ ಹೀನಾಯ ಸ್ಥಿತಿಗೆ ತಲುಪಿದೆ ಎಂದು ಶಿವಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದರು.

ಬೆಳೆಹಾನಿ ಪರಿಹಾರ ನೀಡುವುದು, ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕಿನ ಕೆಲ್ಲೂರ ಗ್ರಾಮದ ಬಳಿ ಬೀದರ್‌-ಶ್ರೀರಂಗಪಟ್ಟಣ ಹೆದ್ದಾರಿ ತಡೆದು ನಡೆಸಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಡಾ.ಅಜಯಸಿಂಗ್ ಕ್ಷೇತ್ರದ ರೈತರ ನೆರವಿಗೆ ಧಾವಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇವರಿಗೆ ರೈತರ, ಬಡವರ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಚಿತ್ತಾಪುರ ಮತಕ್ಷೇತ್ರದ ಬಗ್ಗೆ ಮಾತ್ರ ಚಿಂತೆ. ಚಿತ್ತಾಪುರದಲ್ಲಿ ಮರಳು, ಜೇವರ್ಗಿಯಲ್ಲಿ ಅಕ್ರಮವಾಗಿ ಮುರುಮ್ ಲೂಟಿ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಒಂದೂ ಪ್ರಕರಣ ದಾಖಲಾಗಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಸನ್ನತ್ತಿ ಬ್ಯಾರೇಜ್ ಹಿನ್ನಿರಿನಿಂದ ಹತ್ತಾರು ಹಳ್ಳಿಗಳು ಜಲಾವೃತಗೊಂಡು ಹಾನಿಯಾಗಿದೆ. ಮಳೆಯಿಂದ ತಾಲ್ಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 500 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಹಾನಿಯಾದ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ, ನೀರಾವರಿ ಪ್ರದೇಶಕ್ಕೆ ₹50 ಸಾವಿರ ನೀಡಬೇಕು. ಹಾನಿಯಾದ ಪ್ರತಿ ಮನೆಗೆ ₹25 ಸಾವಿರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಆಂದೋಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆ ಅಡಿ ನಡೆದ ಅವ್ಯವಹಾರದ ತನಿಖೆಯಾಗಬೇಕು. ವಿದ್ಯುತ್ ಸಮಸ್ಯೆ ನಿವಾರಿಸಬೇಕು. ಜೈನಾಪೂರ, ಕೆಲ್ಲೂರ ಹಾಗೂ ಆಂದೋಲಾ ಗ್ರಾಮದ ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಬೇಕು. ನರಿಬೋಳ-ಯನಗುಂಟಿ ರಸ್ತೆ ನಿರ್ಮಾಣ ಮಾಡಬೇಕು. ಕಸಾಯಿ ಖಾನೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನೂರಾರು ಜನ ರೈತರು, ಮಹಿಳೆಯರು ತೊಗರಿ, ಹತ್ತಿ ಬೆಳೆಯೊಂದಿಗೆ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಟೈಯರ್‌ಗಳಿಗೆ ಬೆಂಕಿ‌ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮೂರು ಗಂಟೆಗೂ ಅಧಿಕ ಕಾಲ ರಸ್ತೆ ತಡೆ‌ನಡೆಸಿದದರು.

ಪ್ರತಿಭಟನೆಯಲ್ಲಿ ಶಿವಸೇನೆ ಮುಖಂಡ ಗಂಗಾಧರ ಕುಲಕರ್ಣಿ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ.ಗದ್ದುಗೆ, ಸಂಘಟನೆಯ ಮಲ್ಕಣ್ಣ ಹಿರೇಪೂಜಾರಿ, ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸಿದ್ದು ಸಾಹು ಅಂಗಡಿ, ಸಂತೋಷಗೌಡ ಜೈನಾಪೂರ, ಈಶ್ವರ ಹಿಪ್ಪರಗಿ, ಅನೀಲ ಶೆಟ್ಟಿ, ಮಲ್ಲಣ್ಣಗೌಡ ಪಾಟೀಲ ಕೆಲ್ಲೂರ, ಸಿದ್ದು ನಾಯಕ ಬಿರಾಳ, ಹಣಮಂತ ಅಟ್ಟದಮನಿ, ಕರಣಪ್ಪ ಪೀರಪ್ಪಗೋಳ, ಅಲ್ಲಾ ಪಟೇಲ, ಮುತ್ತಣ್ಣ ಕೆಲ್ಲೂರ, ಶಿವು ಪಾಟೀಲ, ಮಲ್ಕಣ್ಣ ಹೊಸೂರ, ಮರಿಗೌಡ ಮಲ್ಲಾ.ಕೆ, ಮಲ್ಲಣ್ಣ ಲಕ್ಕಣ್ಣಿ, ಚಿದಾನಂದ ಇನಾಮದಾರ, ಸಿದ್ದಣಗೌಡ ಪಾಟೀಲ ಕೆಲ್ಲೂರ, ಶಾಂತಪ್ಪ ಅಂಗಡಿ, ಬಸವರಾಜ ದೇವದುರ್ಗ, ಮಾಳಪ್ಪ ಪಡದಳ್ಳಿ, ಬುರನೇಶ ಜೈನಾಪೂರ ಸೇರಿದಂತೆ ನೂರಾರು ಜನ ರೈತರು, ಮಹಿಳೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.