ಕಲಬುರ್ಗಿ: ‘ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮೇ 2ರಿಂದ ಜಿಲ್ಲೆಗೆ ಬಾರದೆ ನಾಪತ್ತೆಯಾಗಿದ್ದು, ಇದರಿಂದ ಜನರ ಸಮಸ್ಯೆ ಹಾಗೂ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಬೇಕು’ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
‘ವಿಭಾಗೀಯ ಕೇಂದ್ರವಾದ ಕಲಬುರ್ಗಿ ಜಿಲ್ಲೆಯ ಆಡಳಿತದ ಮೇಲೆ ಕಾರಜೋಳ ಅವರು ನಿಗಾ ವಹಿಸಿಲ್ಲ. ಅಭಿವೃದ್ಧಿಗೂ ಶ್ರಮಿಸಿಲ್ಲ. ಅವರು ತಮ್ಮ ಮತಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಮುಂಗಾರು ಬಿತ್ತನೆಗೆ ಸಕಾಲದಲ್ಲಿ ಬೀಜ, ಗೊಬ್ಬರ, ಕ್ರಿಮಿನಾಶಕ ಔಷಧಿ ಸಿಗದೆ ರೈತರು ಪರದಾಡುತ್ತಿದ್ದಾರೆ. ಅತಿವೃಷ್ಟಿಯಿಂದ ಬೆಳೆಗಳು ಹಾನಿಯಾಗಿವೆ. ಅವರದ್ದೇ ನಿರ್ವಹಣೆಯ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ, ಸೇತುವೆಗಳು ಹಾಳಾಗಿವೆ’ ಎಂದು ಟೀಕಿಸಿದ್ದಾರೆ.
‘ಇಳಿ ವಯಸ್ಸಿನಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ವಿಡಿಯೊ ಕಾನ್ಫರೆನ್ಸ್ ನಡೆಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಚುರುಕು ಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ, ಕಾರಜೋಳ ತಮ್ಮ ಕ್ಷೇತ್ರವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದು, ಜಿಲ್ಲೆ ಮತ್ತು ರಾಜ್ಯದ ಅಭಿವೃದ್ಧಿ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸುತ್ತಿಲ್ಲ’ ಎಂದು ಅವರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.