ಕಲಬುರಗಿ: ರಾಮರಾಜ್ಯದ ಕನಸು ಕಂಡ ಗಾಂಧೀಜಿ ಗ್ರಾಮ ಸ್ವರಾಜ್ಯಕ್ಕೆ ಒತ್ತು ನೀಡಿದ್ದರು. ಸ್ಥಳೀಯ ಆಡಳಿತದ ಮೂಲಕ ಗ್ರಾಮಗಳ ಅಭಿವೃದ್ಧಿಯೇ ಅವರ ಧ್ಯೇಯವಾಗಿತ್ತು. ಹೀಗಾಗಿ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತು. ರಾಜಸ್ಥಾನದಲ್ಲಿ ಮೊದಲ ಪಂಚಾಯಿತಿ ಸ್ಥಾಪನೆಯಾದರೂ ಕರ್ನಾಟಕದಲ್ಲಿ ಆರಂಭಗೊಂಡಿದ್ದು 1993ರಲ್ಲಿ.
ಊರು ಅಭಿವೃದ್ಧಿ ಮಾಡಬೇಕಾದ ಪಂಚಾಯಿತಿಗಳಿಗೇ ಹಲವೆಡೆ ಸ್ವಂತ ನೆಲೆ ಇಲ್ಲ ಅನ್ನೋದು ದುರವಸ್ಥೆಗೆ ಕೈಗನ್ನಡಿಯಾಗಿದೆ. ಅದಕ್ಕೊಂದು ತಾಜಾ ಉದಾಹರಣೆ ಸೇಡಂ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮ.
ಗೌಡನಹಳ್ಳಿ, ನಾಮವಾರ, ಮುಷ್ಠಳ್ಳಿ, ಮೈಲ್ವಾರ ಮತ್ತು ಬೆನಕನಹಳ್ಳಿ ಸೇರಿ ಐದು ಗ್ರಾಮಗಳನ್ನೊಳಗೊಂಡು 14 ಸದಸ್ಯರ ಬೆನಕನಹಳ್ಳಿ ಗ್ರಾಮ ಪಂಚಾಯಿತಿ 2015ರಲ್ಲಿ ಅಸ್ತಿತ್ವಕ್ಕೆ ಬಂದಿತು. ಆದರೆ, ದಶಕ ಕಳೆದರೂ ಪಂಚಾಯಿತಿಗೆ ಸ್ವಂತ ಕಟ್ಟಡವಿಲ್ಲ. ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಪಂಚಾಯಿತಿ ಕಚೇರಿ ನಡೆಯುತ್ತಿದೆ. ಇದು ಆಡಳಿತ ವ್ಯವಸ್ಥೆಯನ್ನು ಅಣಕಿಸುತ್ತಿದೆ.
ವಿದ್ಯಾರ್ಥಿಗಳಿಗೆ ತೊಂದರೆ: ಶಾಲಾ ಪರಿಸರ ಶಾಂತವಾಗಿರಬೇಕು. ಮಕ್ಕಳ ಏಕಾಗ್ರತೆಗೆ ಭಂಗ ಬಾರದಂತಿರಬೇಕು. ಆದರೆ, ಶಾಲಾ ಆವರಣದಲ್ಲೇ ಪಂಚಾಯಿತಿ ಕಚೇರಿ ಇರುವುದರಿಂದ ನಿತ್ಯ ನೂರಾರು ಜನ ತಮ್ಮ ಕೆಲಸಗಳಿಗಾಗಿ ಬಂದು ಹೋಗುತ್ತಾರೆ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಪೋಷಕರು.
ಹಾಗಂತ ಇಲ್ಲೇನು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಲ್ಲ. ಎಲ್‌ಕೆಜಿಯಿಂದ 8ನೇ ತರಗತಿವರೆಗೆ ಇರುವ ಈ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 420 ವಿದ್ಯಾರ್ಥಿಗಳಿದ್ದಾರೆ. ಶಾಲಾ ಆವರಣ ತುಂಬಿ ತುಳುಕುತ್ತಿರುತ್ತದೆ.
ಅಪಘಾತದ ಭೀತಿ: ಶಾಲಾ ಆವರಣದಲ್ಲಿ ಆಟದ ಸಮಯದಲ್ಲಿ ಮಕ್ಕಳು ಆಟವಾಡುತ್ತಿರುತ್ತಾರೆ. ಪಂಚಾಯಿತಿಗೆ ಬರುವ ಹಲವರು ದ್ವಿಚಕ್ರ ವಾಹನ ತೆಗೆದುಕೊಂಡೇ ಬರುತ್ತಾರೆ. ಸಭೆ, ಸಮಾರಂಭಗಳಿದ್ದಾಗ ಕಾರುಗಳೂ ಬರುತ್ತವೆ. ಕೆಲವರು ಕುಡಿದೂ ಬರುವುದರಿಂದ ಮಕ್ಕಳ ಮೇಲೆ ವಾಹನ ಹರಿದು ಅಪಘಾತ ಸಂಭವಿಸುವ ಭೀತಿ ಇದೆ. ಜತೆಗೆ ವಾಹನದ ಶಬ್ದ ಶಾಲೆಯಲ್ಲಿ ಪಾಠ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದು ಬೇಸರಿಸುತ್ತಾರೆ ಪೋಷಕರು. ಹೀಗಾಗಿ ಶೀಘ್ರವೇ ಪಂಚಾಯಿತಿಯವರು ಬೇರೆ ಕಡೆ ಕಚೇರಿ ನಿರ್ಮಿಸಿಕೊಳ್ಳಲಿ ಎಂದು ಅವರು ಒತ್ತಾಯಿಸಿದ್ದಾರೆ.
ಶಾಲೆಯಲ್ಲಿ ಬೆನಕನಹಳ್ಳಿ ಪಂಚಾಯಿತಿ ಫಜೀತಿ ದಶಕ ಕಳೆದರೂ ಕಟ್ಟಡ ನಿರ್ಮಿಸಿಕೊಳ್ಳದ ಆಡಳಿತ ಪೋಷಕರ ಆಕ್ರೋಶ, ಗ್ರಾಮಸ್ಥರಿಂದ ಛೀಮಾರಿ
ನಾನು ಅಧಿಕಾರ ವಹಿಸಿಕೊಂಡು ಈಗ ಎರಡು ತಿಂಗಳಾಗಿದೆ. ಹೊಸ ಕಟ್ಟಡಕ್ಕೆ ಸದ್ಯ ₹20 ಲಕ್ಷ ಅನುದಾನವಿದೆ. ಇನ್ನಷ್ಟು ಅನುದಾನ ಪಡೆದು ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಾಣ ಮಾಡುತ್ತೇವೆರಮೇಶರೆಡ್ಡಿ ಪೊಲೀಸ್‌ಪಾಟೀಲ ಗ್ರಾ.ಪಂ. ಅಧ್ಯಕ್ಷ
ಗ್ರಾಮ ಪಂಚಾಯಿತಿ ಕಚೇರಿ ಶಾಲೆಯೊಳಗೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪಂಚಾಯಿತಿ ಕಚೇರಿಗಾಗಿ ಶೀಘ್ರ ಕಟ್ಟಡವಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಿಂದ ಮುಕ್ತಿ ಸಿಗಲಿರೇವಣಸಿದ್ದಪ್ಪ ಜುಲ್ಪಿ ಮುಖ್ಯಶಿಕ್ಷಕ
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನುಮತಿ ಪಡೆದು ಶಾಲಾ ಆವರಣದಲ್ಲಿ ಪಂಚಾಯಿತಿ ನಡೆಸುತ್ತಿದ್ದೇವೆ. ಈ ಬಗ್ಗೆ ನಮಗೂ ಖೇದವಿದೆ. ಶೀಘ್ರ ಕಚೇರಿ ಕಟ್ಟಡ ನಿರ್ಮಿಸಿಕೊಳ್ಳುತ್ತೇವೆಸಂಗಯ್ಯಸ್ವಾಮಿ ಪಿಡಿಒ
ಜಾಗವಿದೆ ರೊಕ್ಕ ಇಲ್ಲ!
‘ಪಂಚಾಯಿತಿ ಕಚೇರಿಗಾಗಿ ಗ್ರಾಮದಲ್ಲಿ ನಿವೇಶನ ನೋಂದಣಿಯೂ ಆಗಿದೆ. ಆದರೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ಅನುದಾನ ಬರುವ ಪಂಚಾಯಿತಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲೂ ಹಣವಿಲ್ಲ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರು. ‘ಹಲ್ಲಿದ್ದಾಗ ಕಡಲೆ ಇಲ್ಲ ಕಡಲೆ ಇದ್ದಾಗ ಹಲ್ಲು ಇಲ್ಲ’ ಎಂಬಂತೆ ಹಣವಿದ್ದಾಗ ಜಾಗ ಇರಲಿಲ್ಲ. ಜಾಗ ಇದ್ದಾಗ ಈಗ ಹಣವಿಲ್ಲ ಎಂಬಂತಾಗಿದೆ ನಮ್ಮ ಪಂಚಾಯಿತಿ ಪರಿಸ್ಥಿತಿ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.