ವೇತನ (ಸಾಂದರ್ಭಿಕ ಚಿತ್ರ)
– ಐಸ್ಟಾಕ್ ಚಿತ್ರ
ಕಲಬುರಗಿ: ಜಿಲ್ಲೆಯ ಮಳಖೇಡ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಎಚ್ಚೆತ್ತಿರುವ ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯವು ಎರಡು ದಿನಗಳಲ್ಲಿ ಪಂಚಾಯಿತಿ ಸಿಬ್ಬಂದಿಯ ಬಾಕಿ ವೇತನ ಪಾವತಿಸುವಂತೆ ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ತಾಕೀತು ಮಾಡಿದೆ.
ಈ ಕುರಿತು ಶನಿವಾರ ಸಿಇಒಗಳಿಗೆ ಪತ್ರ ಬರೆದಿರುವ ಪಂಚಾಯತರಾಜ್ ಆಯುಕ್ತಾಲಯದ ಆಯುಕ್ತೆ ಅರುಂಧತಿ ಅವರು ಇದುವರೆಗೆ ಬಾಕಿ ಇರುವ ಎಲ್ಲ ವೇತನವನ್ನೂ ಪಾವತಿ ಮಾಡಬೇಕು. ವೇತನ ಪಾವತಿಯಾದ ಬಗ್ಗೆ ಆಯುಕ್ತಾಲಯಕ್ಕೆ ದೃಢೀಕರಣ ಸಲ್ಲಿಸಬೇಕು ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ವರ್ಗದ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ 2018ರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಸರ್ಕಾರದ ನಿಧಿಯಿಂದಲೇ ವೇತನ ಪಾವತಿಸಲು ಕ್ರಮ ವಹಿಸಲಾಗುತ್ತಿದೆ. ಆದರೂ ನಿಯಮಿತವಾಗಿ ವೇತನ ಪಾವತಿಯಾಗದಿರುವ ಬಗ್ಗೆ ದೂರುಗಳು ಬರುತ್ತಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಪತ್ರ ತಲುಪಿದ ಎರಡು ದಿನಗಳಲ್ಲಿ ಬಾಕಿಯನ್ನು ಪಾವತಿ ಮಾಡಬೇಕು. ಇನ್ನು ಮುಂದೆ ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ಸಿಬ್ಬಂದಿ ಖಾತೆಗೆ ವೇತನ ಪಾವತಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕು. ಇದರಲ್ಲಿ ನಿರ್ಲಕ್ಷ್ಯ ವಹಿಸಿದವರನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.