ADVERTISEMENT

ಚಿಂಚೋಳಿ| ಬಡವರ ಏಳಿಗೆಗೆ ಶ್ರಮಿಸುವ ಸರ್ಕಾರ: ಡಾ.ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 6:52 IST
Last Updated 25 ಜನವರಿ 2026, 6:52 IST
ಚಿಂಚೋಳಿ ತಾಲ್ಲೂಕು ಭಕ್ತಂಪಳ್ಳಿಯಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ನೂತನ ಲೇಔಟ್‌ ಅನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು
ಚಿಂಚೋಳಿ ತಾಲ್ಲೂಕು ಭಕ್ತಂಪಳ್ಳಿಯಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ನೂತನ ಲೇಔಟ್‌ ಅನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು   

ಚಿಂಚೋಳಿ: ‘ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದ ವಿಪಕ್ಷಗಳಿಗೆ ಯೋಜನೆಯ ಫಲಾನುಭವಿಗಳು ತಮ್ಮ ಮಕ್ಕಳ ಶಿಕ್ಷಣ, ಫ್ರಿಜ್, ಕೂಲರ್ ಹೀಗೆ ಅವಶ್ಯಕ ವಸ್ತುಗಳನ್ನು ಖರೀದಿಸಿ ಸಮೃದ್ಧಿಯ ಉತ್ತರ ನೀಡಿದ್ದಾರೆ’ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ತಾಲ್ಲೂಕಿನ ಭಕ್ತಂಪಳ್ಳಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಿಸಿದ ನೂತನ ಲೇಔಟ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ನಿವೇಶನಗಳ ನೋಂದಣಿಯ ದಾಖಲಾತಿ ವಿತರಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡು ಬಡವರ ಏಳಿಗೆಗೆ ಶ್ರಮಿಸುತ್ತಿದೆ’ ಎಂದರು.

ADVERTISEMENT

‘ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಘೋಷಿಸಿದ್ಧ 6ನೇ ಗ್ಯಾರಂಟಿಯಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ವಾರ್ಷಿಕ ₹5 ಸಾವಿರ ಕೋಟಿ ಅನುದಾನದಿಂದ ಕಲ್ಯಾಣ ಭಾಗದಲ್ಲಿ ಮಹತ್ತರ ಬದಲಾವಣೆ ಗೋಚರಿಸುತ್ತಿದೆ’ ಎಂದರು.

ಭಕ್ತಂಪಳ್ಳಿ ಗ್ರಾಮಕ್ಕೆ ₹1.8 ಕೋಟಿ ಮಂಜೂರು ಮಾಡಿಸಲಾಗಿದೆ. ಈಗಾಗಲೇ ಉದ್ಘಾಟಿಸಿದ ಲೇಔಟ್‌ ಪಕ್ಕದಲ್ಲಿಯೇ ಇನ್ನೂ 6 ಎಕರೆ ಜಮೀನು ಲಭ್ಯವಿದ್ದು ಲೇಔಟ್ ವಿಸ್ತಿರಿಸಿ ಎಲ್ಲಾ ಬಡವರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಎರಡು ಲೇಔಟ್‌ಗಳಲ್ಲಿ ಜನರು ಮನೆಗಳನ್ನು ನಿರ್ಮಿಸಿಕೊಳ್ಳಬೇಕು. ಇದರಿಂದ ನಿಮಗೆ ಇನ್ನಷ್ಟು ಮೂಲ ಸೌಕರ್ಯ ಒದಗಿಸಲು ಸಹಕಾರಿಯಾಗಲಿದೆ ಎಂದರು.

ಗ್ರಾಮದ ಮುಖಂಡ ಶಿವಶರಣರೆಡ್ಡಿ ಭಕ್ತಂಪಳ್ಳಿ ಮಾತನಾಡಿ, ‘ಹೊಸ ಬಡಾವಣೆಯಲ್ಲಿ ವಿದ್ಯುತ್‌, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಅನುದಾನ ಮಂಜೂರು ಮಾಡಿಸಬೇಕು. ಗಂಗನಪಳ್ಳಿ ಕ್ರಾಸ್‌ನಿಂದ ಕುಂಚಾವರಂ ಕ್ರಾಸವರೆಗೆ ರಾಜ್ಯ ಹೆದ್ದಾರಿ 122 ರಸ್ತೆ ಆಧುನಿಕರಣಕ್ಕೆ ಅಗತ್ಯ ಅನುದಾನ ನೀಡಬೇಕು ಎಂದರು.

ಮುಖಂಡ ಲಕ್ಷ್ಮಣ ಅವುಂಟಿ, ರುಬಿನ್, ಸುರೇಶ ಪೂಜಾರಿ, ವಿನೋದ ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ಅಧ್ಯಕ್ಷತೆ ವಹಿಸಿದ್ದರು. ಜವಾಹರ ಬಾಲ ಭವನದ ಉಪಾಧ್ಯಕ್ಷ ಅನಿಲಕುಮಾರ ಜಮಾದಾರ, ಉಪಾಧ್ಯಕ್ಷೆ ಶಾಂತಮ್ಮ, ಹಾಪಕಾಮ್ಸ್ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ, ಸುದರ್ಶನ ರೆಡ್ಡಿ ಪಾಟೀಲ, ಲಿಂಗಶೆಟ್ಟಿ ತಟ್ಟೆಪಳ್ಳಿ, ಗ್ರಾಪಂ ಸದಸ್ಯ ಕೃಷ್ಣರಾಜ ಮುನ್ನೂರು, ನರಸರೆಡ್ಡಿ, ಶರಣರೆಡ್ಡಿ ಗೌರವಾರ, ಪಿಕೆಪಿಎಸ್ ಅಧ್ಯಕ್ಷ ಬೀರಪ್ಪ ಪೂಜಾರಿ, ಕರ್ಚಖೇಡ ಗ್ರಾಪಂ ಅಧ್ಯಕ್ಷ ಬಾಬು ಮಿಯಾ, ತಾಪಂ ಮಾಜಿ ಸದಸ್ಯ ಜಗನ್ನಾಥ ಇದಲಾಯಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಅಜೀತ ಪಾಟೀಲ, ಶರಣು ಪಾಟೀಲ, ಶ್ರೀನಿವಾಸ ಬಂಡಿ, ಮಹೇಶ ಪಾಟೀಲ, ಸುಭಾನರೆಡ್ಡಿ ಶೇರಿಕಾರ, ಅಶೋಕರೆಡ್ಡಿ ಕೆರೊಳ್ಳಿ, ಗೋಪಾಲರೆಡ್ಡಿ, ವೆಂಕಟರೆಡ್ಡಿ, ರಾಜು ನಿಷ್ಠಿ, ರಾಘವೇಂದ್ರ ಗುತ್ತೇದಾರ, ಜಗದೇವಯ್ಯ ಕುಪನೂರ, ಜಗದೇವಯ್ಯ ಭುತಪೂರ, ಆನಂದರೆಡ್ಡಿ ಚತ್ರಸಾಲ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಎಇಇ ಪ್ರವೀಣಕುಮಾರ ಮೊದಲಾದವರು ಇದ್ದರು.

ಕೇಂದ್ರ ಸರ್ಕಾರ ನರೇಗಾ ಯೋಜನೆ ರದ್ದುಪಡಿಸಿದ್ದರ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟಕ್ಕಿಳಿದಿದೆ. ನೀವು ನಮ್ಮ ಜತೆಗೆ ಕೈಜೋಡಿಸಬೇಕು
ಡಾ.ಶರಣಪ್ರಕಾಶ ಪಾಟೀಲ, ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.