ADVERTISEMENT

ಕಲಬುರಗಿ ಕೈಗೆಟಕುವ ದರದಲ್ಲಿ ಪ್ರಾಧಿಕಾರದಿಂದ ನಿವೇಶನ

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಜನಸ್ಹೇಹಿ ಆಡಳಿತ l ಬಡಾವಣೆಗಳಲ್ಲಿ ಮೂಲಸೌಲಭ್ಯ l ನಗರ ಸುಂದರೀಕರಣಕ್ಕೆ ಒತ್ತು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 16:11 IST
Last Updated 7 ಆಗಸ್ಟ್ 2020, 16:11 IST
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಎಂ.ರಾಚಪ್ಪ ಅವರೊಂದಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ವಿಜಯಕುಮಾರ, ನಗರ ಯೋಜನಾಧಿಕಾರಿ ಸಂಗಪ್ಪ ಗಾರಂಪಳ್ಳಿ ಇದ್ದರು
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಎಂ.ರಾಚಪ್ಪ ಅವರೊಂದಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ವಿಜಯಕುಮಾರ, ನಗರ ಯೋಜನಾಧಿಕಾರಿ ಸಂಗಪ್ಪ ಗಾರಂಪಳ್ಳಿ ಇದ್ದರು   

ಕಲಬುರ್ಗಿ: ನಗರವನ್ನು ಯೋಜನಾ ಬದ್ಧವಾಗಿ ನಿರ್ಮಿಸಲು ಪಣತೊಟ್ಟಿರುವ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನ ಇಲ್ಲದವರಿಗೆ ಆದ್ಯತೆ ಮೇರೆಗೆ ನಿವೇಶನಹಂಚಿಕೆ ಮಾಡುತ್ತಿದೆ.

ಆರ್ಥಿಕವಾಗಿ ಹಿಂದುಳಿದವರಿಗೆ ಅಭಿವೃದ್ಧಿ ಪಡಿಸಿದ ನಿವೇಶನದ ಮೂಲ ಬೆಲೆಗಿಂತ ಶೇ 50ರಷ್ಟು ಕಡಿಮೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ 25ರಷ್ಟು ಬೆಲೆಗೆ ನೀಡುವ ಮೂಲಕ ಸಾಮಾಜಿಕ ಬದ್ಧತೆಯನ್ನೂ ಪ್ರದರ್ಶಿಸುತ್ತಿದೆ.

1988ರಲ್ಲಿ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದಿದ್ದು, ಇಲ್ಲಿಯವರೆಗೆ 20 ಬಡಾವಣೆಗಳನ್ನು ಅಭಿವೃದ್ಧಿಪಡಿಸಿದ 12ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಿದೆ.

ADVERTISEMENT

ಜನತೆಯ ಅಗತ್ಯಕ್ಕೆ ತಕ್ಕಂತೆ ವಿವಿಧ ಅಳತೆಯ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲಾಗಿದೆ. ಬೇಡಿಕೆ ಹೆಚ್ಚುತ್ತಿರುವುದರಿಂದ ಹೊಸದಾಗಿ ಕುಸನೂರು ಬಳಿ 90 ಎಕರೆಯಲ್ಲಿ 1466 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ. ರೈತರಿಂದ ಬಡಾವಣೆ ಅಭಿವೃದ್ಧಿಗಾಗಿ ಹಾಗರಗಾ ಗ್ರಾಮದ ಬಳಿ 117 ಎಕರೆ ಜಮೀನನ್ನು ಪಡೆದುಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಜಮೀನು ನೀಡುವ ರೈತರಿಗೂ ಒಟ್ಟು ಅಭಿವೃದ್ಧಿಯಾದ ನಿವೇಶನಗಳಲ್ಲಿ ಶೇ 50ರಷ್ಟು ನಿವೇಶನಗಳನ್ನು ಕೊಡಲಾಗುವುದು ಎನ್ನುತ್ತಾರೆ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಎಂ. ರಾಚಪ್ಪ ಅವರು.

ಪಿಡಿಒಗಳಿಗೂ ಎಚ್ಚರಿಕೆ

ಕಲಬುರ್ಗಿ ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಸುತ್ತಲಿನ 43 ಗ್ರಾಮಗಳು ಕಲಬುರ್ಗಿ ಮಹಾಯೋಜನೆ ವ್ಯಾಪ್ತಿಗೊಳಪಟ್ಟಿವೆ. ಅಂದರೆ, ಕಲಬುರ್ಗಿ ಸುತ್ತಲಿನ ಈ 43 ಗ್ರಾಮಗಳಲ್ಲಿ ನಿವೇಶನ ಅಭಿವೃದ್ಧಿ ಅಥವಾ ಹೊಸ ಲೇಔಟ್‌ಗಳಿಗೆ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಅತ್ಯಗತ್ಯ.

ಈ ಗ್ರಾಮ ಪಂಚಾಯಿತಿಗಳಲ್ಲಿ ಅನಧಿಕೃತ ನಿವೇಶನಗಳನ್ನು ಖಾತಾ ಮಾಡುವಂತಿಲ್ಲ. ಇದಕ್ಕೂ ಪ್ರಾಧಿಕಾರದ ಅನುಮೋದನೆ ಬೇಕಾಗುತ್ತದೆ. ಈ ಬಗ್ಗೆ ಈಗಾಗಲೇ ಪಿಡಿಒಗಳಿಗೆ ನಿರ್ದೇಶನ ನೀಡಲಾಗಿದೆ. ಒಂದು ವೇಳೆ ಅನಧಿಕೃತ ನವೇಶನಗಳನ್ನು ಖಾತಾ ಮಾಡಿ ಕೊಟ್ಟದ್ದು ಕಂಡುಬಂದರೆ ಸಂಬಂಧಪಟ್ಟ ಪಿಡಿಒಗಳೇ ಹೊಣೆ ಹೊರಬೇಕಾಗುತ್ತದೆ ಎನ್ನುತ್ತಾರೆ ಪ್ರಾಧಿಕಾರದ ಅಧಿಕಾರಿಗಳು.

ಕೆಲಸ ಪ್ರಗತಿಯಲ್ಲಿರುವ ಬಡಾವಣೆಗಳು

ಪ್ರಾಧಿಕಾರದಿಂದ ಈ ವರೆಗೆ ಒಟ್ಟಾರೆ 24 ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿದ್ದು, ಅದರಲ್ಲಿ 20 ಬಡಾವಣೆಗಳಲ್ಲಿ ಈಗಾಗಲೇ ಕೆಲಸಗಳು ಮುಗಿದಿವೆ. ಇನ್ನೂ ನಾಲ್ಕು ಬಡಾವಣೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಭರದಿಂದ ಸಾಗಿದೆ.

1) ಅಟಲ್‌ ಬಿಹಾರಿ ವಾಜಪೇಯಿ ಬಡಾವಣೆ 2) ಮಾದರಸನಹಳ್ಳಿ 3) ಧರಿಯಾಪುರ– ಕೋಟನೂರ ಹಾಗೂ 4) ಶೇಖ್‌ ರೋಜಾ ಬಡಾವಣೆಗಳಲ್ಲಿ ಮೂಲಸೌಲಭ್ಯ ಕಲ್ಪಿಸುವ ಕೆಲಸಗಳು ಶೇ 90ರಷ್ಟು ಪೂರ್ಣಗೊಂಡಿವೆ.

ಮಾದರಿ ಉದ್ಯಾನಕ್ಕೆ ಸಿದ್ಧತೆ

ನಗರದ ಬುದ್ಧವಿಹಾರದ ಪಕ್ಕದಲ್ಲಿ 33 ಎಕರೆ 9 ಗುಂಟೆ ಜಾಗ ಖರೀದಿಸಿದ್ದು. ಸುಂದರವಾದ ಬೃಹತ್‌ ಉದ್ಯಾನ ನಿರ್ಮಿಸಲು ಪ್ರಾಧಿಕಾರ ಮುಂದಡಿ ಇಟ್ಟಿದೆ. ಈಗಾಗಲೇ ₹ 1.13 ಕೋಟಿ ವೆಚ್ಚದಲ್ಲಿ ಒಂದು ಕೆರೆ ನಿರ್ಮಾಣ ಮಾಡಿದ್ದು, ನೀರು ಭರಪೂರ ತುಂಬಿಕೊಂಡಿದೆ. ಮೂರು ಬಾವಿಗಳೂ ಇದ್ದು, ಆರ್‌ಸಿಸಿ ಗೋಡೆ ನಿರ್ಮಿಸಲಾಗಿದೆ. ಯಾವುದೇ ಕಾರಣಕ್ಕೂ ನೀರಿನ ಬರ ಆಗದಂತೆ ನೋಡಿಕೊಳ್ಳಲಾಗಿದೆ. ಇದೊಂದು ದೂರದೃಷ್ಟಿಯ ಯೋಜನೆ.

₹ 1.20 ಕೋಟಿ ವೆಚ್ಚದಲ್ಲಿ ಈ ಉದ್ಯಾನದ ಸುತ್ತಗೋಡೆ ನಿರ್ಮಿಸಲಾಗಿದೆ. ಇದರೊಳಗೆ ಕಲಾವನ, ಪರಂಪರಾ ಕೇಂದ್ರ ಹಾಗೂ ಟ್ಯಾಗೋರ್ ಸಾಂಸ್ಕೃತಿಕ ಸಂಕೀರ್ಣ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಗೆ 12 ಎಕರೆ ಬಿಟ್ಟುಕೊಡಲಾಗಿದ್ದು, ಅದಕ್ಕೆ ₹ 4 ಕೋಟಿ ಮಂಜೂರಾಗಿದೆ. ಮಕ್ಕಳ ಆಟಕ್ಕೆ, ಹಿರಿಯ ನಾಗರಿಕರ ವಿಹಾರಕ್ಕೆ, ಕ್ರೀಡಾಪ‍ಟುಗಳಿಗೆ ಅನುಕೂಲ ಆಗುವ ಎಲ್ಲ ಸೌಕರ್ಯಗಳನ್ನೂ ಇಲ್ಲಿ ಅಭಿವೃದ್ಧಿ ಪಡಿಸಲಾಗುವುದು.

ಇದಲ್ಲದೇ, ನಗರದ 197 ಉದ್ಯಾನಗಳಿಗೆ ಆವರಣ ಗೋಡೆ, 20 ಕಡೆ ವಾಕಿಂಗ್‌ ಟ್ರ್ಯಾಕ್‌, 500 ಬೆಂಚ್‌, ಮಕ್ಕಳ ಆಟಿಕೆಗಳನ್ನೂ ಅಳವಡಿಸಲಾಗಿದೆ.

ಎರಡು ಕಲ್ಯಾಣ ಮಂಟಪ ಜನಸೇವೆಗೆ

ಪ್ರಾಧಿಕಾರದಿಂದ ನಗರದ ಬಸ್‌ ನಿಲ್ದಾಣದ ಹಿಂದೆ ಹಾಗೂ ಧರಿಯಾಪುರ– ಕೋಟನೂರ ರಸ್ತೆಗೆ ಹೊಂದಿಕೊಂಡು ತಲಾ ಒಂದು ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಇವುಗಳನ್ನು ಮದುವೆ, ಉತ್ಸವ ಮುಂತಾದ ಕಾರ್ಯಗಳಿಗೆ ಬಾಡಿಗೆ ನೀಡುವ ಉದ್ದೇಶವಿದೆ. ಆದರೆ, ಸದ್ಯ ಇವುಗಳನ್ನು ಸರ್ಕಾರದ ಬಳಕೆಗೆ ನೀಡಲಾಗಿದ್ದು, ಕೆಲ ತಿಂಗಳಲ್ಲಿ ಇವು ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ.

83 ಬಿಡಿ ನಿವೇಶನಗಳ ಹರಾಜು

ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 83 ಬಿಡಿ ನಿವೇಶನಗಳನ್ನು ಆನ್‌ಲೈನ್‌ ಮೂಲಕ ಹರಾಜು ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಇಎಂಡಿ ಸಂದಾಯ ಮಾಡಿ ಹೆಸರು ನೋಂದಾಯಿಸಿಕೊಳ್ಳಲು ಆಗಸ್ಟ್‌ 19 ಕೊನೆ ದಿನ. ಬಿಡ್‌ ಮಾಡಲು ಆ.25 ಕೊನೆಯ ದಿನ ಎಂದು ಪ್ರಾಧಿಕಾರದ ಆಯುಕ್ತರಾದ ಎಂ. ರಾಚಪ್ಪ ಹೇಳಿದರು.

ಪ್ರತಿ ಚದುರ ಅಡಿಗೆ ಪ್ರಾಧಿಕಾರ ನಿಗದಿ ಮಾಡಿರುವ ದರ ₹1200.

ಈ ಹಿಂದೆ ಹರಾಜು ಆಗಿರುವ ನಿವೇಶನಗಳು ಪ್ರತಿ ಚದುರ ಅಡಿಗೆ ₹1350ರಿಂದ ₹1800 ವರೆಗೆ ಮಾರಾಟವಾಗಿವೆ. ಸಂಪೂರ್ಣ ಅಭಿವೃದ್ಧಿ ಹೊಂದಿರುವ ಬಡಾವಣೆಗಳಲ್ಲಿಯ ಈ ನಿವೇಶನಗಳನ್ನು ಜನ ಖರೀದಿಸಬೇಕು ಎಂಬುದು ಅವರ ಮನವಿ.

ಇನ್ನಷ್ಟು ಕೆಲಸಗಳು

ವಾಣಿಜ್ಯ ಸಂಕೀರ್ಣ

ಎಂಎಸ್‌ಕೆ ಮಿಲ್‌ 2 ಎಕರೆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಅಂದಾಜು ಪಟ್ಟಿ ಹಾಗೂ ನೀಲಿನಕಾಶೆ ಸಲ್ಲಿಸಲಾಗಿದೆ. ಇದನ್ನು ಐಡೆಕ್‌ ಸಹಕಾರದೊಂದಿಗೆ ಪಿ.ಪಿ.ಪಿ ಆಧಾರದ ಮೇರೆಗೆ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.

ಕೋವಿಡ್‌– ನೆರವು

ಕೋವಿಡ್‌ ಪೀಡಿತರ ಸಹಾಯಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪ್ರಾಧಿಕಾರದಿಂದ ₹ 25 ಲಕ್ಷ ದೇಣಿಗೆ ನೀಡಲಾಗಿದೆ. ಜಿಲ್ಲಾಧಿಕಾರಿ ಶರತ್‌ ಬಿ. ಅವರ ಮುಖಾಂತರ ಚೆಕ್‌ಅನ್ನು ಹಸ್ತಾಂತರಿಸಲಾಗಿದೆ.

ಕಾಯಿಪಲ್ಯ ಮಾರ್ಕೆಟ್‌

ಎಂಎಸ್‌ಕೆ ಮಿಲ್‌ ಬಡಾವಣೆಯಲ್ಲಿ 1 ಎಕರೆ ವಿಸ್ತೀರ್ಣದಲ್ಲಿ ಕಾಯಿಪಲ್ಯ ಮಾರುಕಟ್ಟೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಎಪಿಎಂಸಿ ಸಹಕಾರದೊಂದಿಗೆ ಇದನ್ನು ಕೈಗೆತ್ತಿಕೊಳ್ಳಲಾಗುವುದು.

ಭೋಸಗಾ ಕೆರೆ

ಭೋಸಗಾ ಗ್ರಾಮದಲ್ಲಿರುವ ಬೃಹತ್‌ ಕೆರೆಯಲ್ಲಿ ಸಂಪೂರ್ಣ ಹೂಳು ತುಂಬಿಕೊಂಡಿದೆ. ಇದರ ಪುನರುಜ್ಜೀವನ ಮಾಡುವುದು ಹಾಗೂ ದಂಡೆಯ ಮೇಲೆ 29 ಎಕರೆ ಪ್ರದೇಶದಲ್ಲಿ ಸುಂದರ ಉದ್ಯಾನ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಡಿಪಿಆರ್‌ ತಯಾರಿಸಲಾಗುತ್ತಿದೆ.

ಖಾಜಾ ಕೋಟನೂರ ಕೆರೆ

ಈ ಕೆರೆ ಆವರಣದಲ್ಲಿ ಉದ್ಯಾನ, ಸೌಂದರ್ಯೀಕರಣ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು.

ಪಾರ್ಕಿಂಗ್‌ಗೂ ಆದ್ಯತೆ

ಹೊಸ ಬಡಾವಣೆಗಳಲ್ಲಿ ವಾಹನಗಳ ಪಾರ್ಕಿಂಗ್‌ಗೂ ಆದ್ಯತೆ ನೀಡಲಾಗುತ್ತಿದೆ. ಖಾಸಗಿ ವಾಣಿಜ್ಯ ಲೇಔಟ್‌ಗಳಲ್ಲಿ ಪಾರ್ಕಿಂಗ್‌ಗೆ ಶೇ 5ರಷ್ಟು ಸ್ಥಳಾವಕಾಶ ಮೀಸಲಿಡುವುದು
ಕಡ್ಡಾಯ.

ಮಹಾಯೋಜನೆ ಮೂಲಕ ಸೌಂದರ್ಯೀಕರಣ

ಕಲಬುರ್ಗಿ ನಗರವನ್ನು ಸರ್ವಾಂಗ ಸುಂದರಗೊಳಿಸಲು ‘ಮಹಾಯೋಜನೆ–3’ (ಮಾಸ್ಟರ್‌ ಪ್ಲ್ಯಾನ್‌–3)ನ್ನು ಕೇಂದ್ರ ಸರ್ಕಾರವು ‘ಅಮೃತ ಯೋಜನೆ’ ಅಡಿ ಆರಂಭಿಸಿದ್ದು, ಈ ವರ್ಷದ ಕೊನೆಯೊಳಗೆ ಪರಿಷ್ಕೃತ ಮಾಸ್ಟರ್‌ ಪ್ಲ್ಯಾನ್‌ ಅನ್ನು ಸರ್ಕಾರದ ಅನುಮೋದನೆಗೆ ಕಳಿಸಲು ಪ್ರಾಧಿಕಾರ ಉದ್ದೇಶಿಸಿದೆ.‌

ನಗರದಲ್ಲಿ ವಲಯವಾರು ಬಡಾವಣೆ, ರಸ್ತೆ, ಉದ್ಯಾನ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿಗೂ ಆದ್ಯತೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.