ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: ಅತಿಥಿ ಉಪನ್ಯಾಸಕರ ₹3 ಕೋಟಿ ವೇತನ ಬಾಕಿ

ಆದಾಯದ ಮೂಲ ಇಲ್ಲದೆ ಏದುಸಿರು ಬಿಡುತ್ತಿರುವ ಗುಲಬರ್ಗಾ ವಿವಿ

ಮಲ್ಲಿಕಾರ್ಜುನ ನಾಲವಾರ
Published 1 ಏಪ್ರಿಲ್ 2025, 5:07 IST
Last Updated 1 ಏಪ್ರಿಲ್ 2025, 5:07 IST
ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ ವಿಶ್ವವಿದ್ಯಾಲಯ   

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹೆಚ್ಚುವರಿ ಅನುದಾನದ ಮೂಲ ಇಲ್ಲದೆ ಕಳೆದ ಮೂರು ತಿಂಗಳಿಂದ ವೇತನವಿಲ್ಲದೆ ಸುಮಾರು 200 ಅತಿಥಿ ಉಪನ್ಯಾಸಕರು ತೊಂದರೆಗೆ ಸಿಲುಕಿದ್ದಾರೆ. ₹ 3 ಕೋಟಿ ಬಾಕಿ ವೇತನ ಹೊಂದಿಸಲು ವಿಶ್ವವಿದ್ಯಾಲಯವೂ ಏದುಸಿರು ಬಿಡುತ್ತಿದೆ.

ವಿವಿಯ ಜ್ಞಾನ ಗಂಗಾ ಕ್ಯಾಂಪಸ್, ಆಳಂದದಲ್ಲಿನ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಲ್ಲಿ 200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇದ್ದಾರೆ. ಪ್ರತಿ ವಾರದಲ್ಲಿ 10ರಿಂದ 16 ಕ್ಲಾಸ್ ಪಾಠ ಮಾಡಿ, ತಿಂಗಳ ಸಂಬಳಕ್ಕಾಗಿ ಎದುರು ನೋಡುವಂತೆ ಆಗಿದೆ. ಇವರೆಲ್ಲರ ನಿತ್ಯದ ಬದುಕು ಮತ್ತು ಕುಟುಂಬ ನಿರ್ವಹಣೆಯೂ ಇದೇ ವೇತನದ ಮೇಲೆ ಅವಲಂಬಿತವಾಗಿದೆ.

ಕಳೆದ ಆಗಸ್ಟ್‌ ತಿಂಗಳಲ್ಲಿ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ಹಾಗೂ ಗುತ್ತಿಗೆ ನೌಕರರು ಅಹೋರಾತ್ರಿ ಧರಣಿ ಕುಳಿತಿದ್ದರು. ಒತ್ತಡಕ್ಕೆ ಮಣಿದ ಅಂದಿನ ಕುಲಪತಿ ಪ್ರೊ.ದಯಾನಂದ ಅಗಸರ ಅವರು ₹ 36 ಸಾವಿರ ಇದ್ದ ಅತಿಥಿ ಉಪನ್ಯಾಸಕರ ಗೌರವ ಧನವನ್ನು ₹ 50 ಸಾವಿರಕ್ಕೆ ಏರಿಕೆ ಮಾಡಿದ್ದರು.

ADVERTISEMENT

ವೇತನ ಪರಿಷ್ಕರಣೆಯ ಬಳಿಕ ₹ 5 ಸಾವಿರ ಟಿಡಿಎಸ್ ಕಡಿತವಾಗಿ ಡಿಸೆಂಬರ್ ಅಂತ್ಯದವರೆಗೆ ₹45 ಸಾವಿರ ವೇತನ ಸರಿಯಾಗಿ ಬರುತ್ತಿತ್ತು. ಒಂದಿಷ್ಟು ಹಣ ಉಳಿತಾಯವಾಗಿ, ಕುಟುಂಬದ ಆರ್ಥಿಕ ಸ್ಥಿತಿಯೂ ಸುಧಾರಣೆ ಕಾಣುತಿತ್ತು. ಆದರೆ, ಜನವರಿಯಿಂದ ಮಾರ್ಚ್‌ವರೆಗೂ ಒಂದೇ ಒಂದು ರೂಪಾಯಿ ವೇತನ ಬಂದಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಮಾಡವುದು ಕಷ್ಟವಾಗುತ್ತಿದೆ ಎಂದು ಅತಿಥಿ ಉಪನ್ಯಾಸಕರೊಬ್ಬರು ಅವಲತ್ತುಕೊಂಡರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಗುಲಬರ್ಗಾ ವಿವಿಯ ಸ್ನಾತಕೋತ್ತರ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಅರುಣಕುಮಾರ ಕುರನೆ, ‘ಬಾಕಿ ವೇತನ ಕೊಡುವಂತೆ ವಿವಿಯ ಆಡಳಿತ ಮಂಡಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಸಹಕರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ’ ಎಂದರು.

‘ಕುಲಪತಿಗಳು, ಕುಲಸಚಿವರು ಪ್ರಭಾರ ಹುದ್ದೆಗಳಲ್ಲಿ ಇರುವುದರಿಂದ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿ ಇಲ್ಲ. ಹೀಗಾಗಿ, ವಿವಿಯ ಇತರೆ ಮೂಲಗಳಿಂದ ಆದಾಯವನ್ನು ಹೊಂದಿಸಲು ಯತ್ನಿಸುತ್ತಿದ್ದಾರೆ. ಮುಂದಿನ ತಿಂಗಳಲ್ಲಿ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ಪ್ರತಿ ತಿಂಗಳು ಸರಿಯಾಗಿ ವೇತನ ಬಿಡುಗಡೆ ಮಾಡಿದರೆ ಕುಟುಂಬ ನಿರ್ವಹಣೆ, ಮಕ್ಕಳ ಶಾಲಾ ಶುಲ್ಕ, ಮನೆ ಬಾಡಿಗೆ ಕಟ್ಟಲು ಅನುಕೂಲ ಆಗುತ್ತದೆ’ ಎಂದು ಹೇಳಿದರು.

‘ಹೊಂದಾಣಿಕೆ ಮಾಡಿ ಕೊಡುತ್ತೇವೆ’

‘ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಅನುದಾನ ಬರುತ್ತಿಲ್ಲ. ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಪ್ರವೇಶಾತಿ ಪರೀಕ್ಷಾ ಶುಲ್ಕವನ್ನು ಜಮಾಯಿಸಿ ಹೊಂದಾಣಿಕೆ ಮಾಡಿ ಬಾಕಿ ವೇತನವನ್ನು ಏಪ್ರಿಲ್‌ ತಿಂಗಳಲ್ಲಿ ಕೊಡುತ್ತೇವೆ’ ಎಂದು ವಿವಿಯ ಪ್ರಭಾರ ಕುಲಸಚಿವ ಪ್ರೊ.ರಮೇಶ ಲಂಡನಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಣಕಾಸಿನ ಮುಗ್ಗಟ್ಟಿನಿಂದ ವಿಶ್ವವಿದ್ಯಾಲಯವು ಅತಂತ್ರ ಸ್ಥಿತಿಯಲ್ಲಿದೆ. ಅತಿಥಿ ಉಪನ್ಯಾಸಕರಿಗೆ ಮಾತ್ರವೇ ತಿಂಗಳಿಗೆ ₹ 1 ಕೋಟಿ ವೇತನ ಕೊಡಬೇಕಿದೆ. ಬೋಧಕೇತರ ಸಿಬ್ಬಂದಿ ಮೂಲಸೌಕರ್ಯಗಳ ವೆಚ್ಚ ಪರೀಕ್ಷಾ ಮೌಲ್ಯಮಾಪನ ವೆಚ್ಚ ಸೇರಿದರೆ ಅದು ಇನ್ನೂ ಬೆಳೆಯುತ್ತಿದೆ. ಯಾವುದಾದರು ಅನುದಾನವನ್ನು ಹೊಂದಿಸಿ ಬಾಕಿ ಇರುವ ₹ 3 ಕೋಟಿ ವೇತನ ಬಿಡುಗಡೆ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.