ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: 56,436 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಇಂದು

ಗುವಿವಿ 39 ಹಾಗೂ 40ನೇ ಘಟಿಕೋತ್ಸವ ಒಂದೇ ದಿನ,

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 4:45 IST
Last Updated 27 ಏಪ್ರಿಲ್ 2022, 4:45 IST
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧ
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧ   

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ 39 ಹಾಗೂ 40ನೇ ಘಟಿಕೋತ್ಸವ ಸಮಾರಂಭ ಏ. 27ರಂದು ಬೆಳಿಗ್ಗೆ 11.15 ಗಂಟೆಗೆ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ವಿವಿಧ ಪದವಿಗಳನ್ನು ಪ್ರದಾನ ಮಾಡುವರು’ ಎಂದು ಕುಲಪತಿ ಪ್ರೊ.ದಯಾನಂದ ಅಗಸರ ತಿಳಿಸಿದರು.

1980ರಲ್ಲಿ ವಿಶ್ವವಿದ್ಯಾಲಯ ಆರಂಭವಾದಾಗಿನಿಂದಲೂ ಇದೇ ಮೊದಲ ಬಾರಿಗೆ ಎರಡೂ ಘಟಿಕೋತ್ಸವಗಳನ್ನು ಏಕಕಾಲಕ್ಕೆ ಮಾಡುವ ಸಂದರ್ಭ ಬಂದಿದೆ. ಹೀಗಾಗಿ,‍ಪದವಿ, ಪದಕ ಹಾಗೂ ಗೌರವ ಡಾಕ್ಟರೇಟ್‌ ಪಡೆದವರ ಸಂಖ್ಯೆಯೂ ದ್ವಿಗುಣವಾಗಿದೆ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉನ್ನತ ಶಿಕ್ಷಣ ಸಚಿವ, ವಿಶ್ವವಿದ್ಯಾಲಯಗಳ ಸಮಕುಲಾಧಿಪತಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತರಿರುವರು. ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್‌) ನಿರ್ದೇಶಕ ಪ್ರೊ.ಎಸ್.ಸಿ.ಶರ್ಮಾಘಟಿಕೋತ್ಸವಗಳ ಭಾಷಣ ಮಾಡಲಿದ್ದಾರೆ ಎಂದರು.

ADVERTISEMENT

39ನೇ ಘಟಿಕೋತ್ಸವದಲ್ಲಿ28,186 ಹಾಗೂ 40ನೇ ಘಟಿಕೋತ್ಸವದಲ್ಲಿ28,250 ವಿದ್ಯಾರ್ಥಿಗಳು ಸೇರಿ ಒಟ್ಟು 56,436 ಪದವಿಗಳನ್ನು ನೀಡಲಾಗುತ್ತಿದೆ ಎಂದುವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಮೇಧಾವಿನಿ ಎಸ್. ಕಟ್ಟಿ ಮಾಹಿತಿ ನೀಡಿದರು.

39ನೇ ಘಟಿಕೋತ್ಸವ ಮಾಹಿತಿ: ಒಟ್ಟು 182 ಚಿನ್ನದ ಪದಕಗಳನ್ನು ವಿತರಿಸಲಾಗುತ್ತಿದ್ದು, ಇದರಲ್ಲಿ 67 ವಿದ್ಯಾರ್ಥಿನಿಯರು ಹಾಗೂ 15 ವಿದ್ಯಾರ್ಥಿಗಳು ಇದ್ದಾರೆ. ಉಳಿದ 6 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ, 14 ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಇದರಲ್ಲಿ 13 ವಿದ್ಯಾರ್ಥಿನಿಯರು ಹಾಗೂ ಒಬ್ಬ ವಿದ್ಯಾರ್ಥಿ ಸೇರಿದ್ದಾರೆ.ವಿವಿಧ ನಿಕಾಯಗಳಲ್ಲಿ ಒಟ್ಟು 112 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಿದ್ದು, 39 ಮಹಿಳಾ ಹಾಗೂ 73 ಪುರುಷ ಸಂಶೋಧನಾ ವಿದ್ಯಾರ್ಥಿಗಳು ಸೇರಿದ್ದಾರೆ.ಒಟ್ಟು 28,186 ಪದವೀಧರರಲ್ಲಿ 14,134 ವಿದ್ಯಾರ್ಥಿಗಳು ಹಾಗೂ 14,052 ವಿದ್ಯಾರ್ಥಿನಿಯರು ಇದ್ದು,ವಿವಿಧ ಪದವಿಗಳಲ್ಲಿ 63 ರ್‍ಯಾಂಕ್‌, ಸ್ನತಕೋತ್ತರ ಪದವಿಯಲ್ಲಿ 202 ರ್‍ಯಾಂಕ್‌ ಪಡೆದವರಿದ್ದಾರೆ ಎಂದರು.

40ನೇ ಘಟಿಕೋತ್ಸವ: ಒಟ್ಟು28,250 ಪದವೀಧರರಲ್ಲಿ 14,208 ವಿದ್ಯಾರ್ಥಿಗಳು, 14,042 ವಿದ್ಯಾರ್ಥಿನಿಯರು ಇದ್ದಾರೆ. ವಿವಿಧ ನಿಕಾಯಗಳಲ್ಲಿ ಒಟ್ಟು 47 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ಇದರಲ್ಲಿ 27 ಮಹಿಳಾ ಸಂಶೋಧಕರು, 20 ಪುರುಷರು ಇದ್ದಾರೆ. ಪದವಿಗಳಲ್ಲಿ70 ರ್‍ಯಾಂಕ್, ಸ್ನಾತಕೋತ್ತರ ಪದವಿಯಲ್ಲಿ 202 ರ್‍ಯಾಂಕ್‌, 165 ಚಿನ್ನದ ಪದಕಗಳನ್ನು ನೀಡಲಾಗುವುದು.

ಒಟ್ಟಾರೆ 171 ಚಿನ್ನದ ಪದಕಗಳನ್ನು ವಿತರಿಸಲಾಗುವುದು. ಇದರಲ್ಲಿ 53 ಮಹಿಳಾ ವಿದ್ಯಾರ್ಥಿಗಳು ಹಾಗೂ 21 ಪುರುಷ ವಿದ್ಯಾರ್ಥಿಗಳು ಪದಕ ಪಡೆಯಲಿದ್ದಾರೆ. ಉಳಿದ 6 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ 11 ವಿದ್ಯಾರ್ಥಿನಿಯರು ಹಾಗೂ 5 ವಿದ್ಯಾರ್ಥಿಗಳಿಗೆ ನೀಡಲಾಗುವುದು.

ವಿಶ್ವವಿದ್ಯಾಲಯದ ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ವಿತ್ತಾಧಿಕಾರಿ ಪ್ರೊ.ಎನ್.ಬಿ. ನಡುವಿನಮನಿ ಇದ್ದರು.

*

ವಿ.ವಿ ವ್ಯಾಪ್ತಿಯ ಹೊರಹೋಗಿ ಗೌರವ ಡಾಕ್ಟರೇಟ್‌
ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸಾಕಷ್ಟು ಸಾಧಕರು ಇದ್ದರೂ ವ್ಯಾಪ್ತಿ ಮೀರಿ ಕೆಲವರಿಗೆ ಗೌರವ ಡಾಕ್ಟರೇಟ್‌ ಕೊಡಲು ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರೊ.ದಯಾನಂದ, ‘ಸ್ಥಳೀಯ ಸಾಧಕರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರಿಗೂ ಗೌರವ ಸಲ್ಲಲೇಬೇಕು. ಆದರೆ, ವಿಶ್ವವಿದ್ಯಾಲಯವು ಯಾವುದೇ ಪ್ರಾದೇಶಿಕ ವ್ಯಾಪ್ತಿ ಹೊಂದಿರುವುದಿಲ್ಲ. ಅದಕ್ಕೆ ವಿಶ್ವ‌ವ್ಯಾಪ್ತಿ ಪರಿಕಲ್ಪನೆ ಇದೆ. ಮೇಲಾಗಿ, ಸಾಧಕರನ್ನು ವಿಶ್ವವಿದ್ಯಾಲಯ ಮಾತ್ರ ಹುಡುಕುವುದಿಲ್ಲ. ಹಲವರು ಶಿಫಾರಸು ಕೂಡ ಮಾಡಿರುತ್ತಾರೆ. ಅರ್ಜಿಗಳನ್ನು ಪರಿಶೀಲಿಸಿ, ಸಿಂಡಿಕೇಟ್ ಶೋಧನಾ ಸಮಿತಿ ಚರ್ಚಿಸಿದ ನಂತರ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ’ ಎಂದು ಉತ್ತರಿಸಿದರು.

*

ಮೊದಲ ಬಾರಿಗೆ ದೇಶಿ ಸಮವಸ್ತ್ರ ಬಳಕೆ
ಘಟಿಕೋತ್ಸವದಲ್ಲಿ ಈವರೆಗೆ ಧರಿಸುತ್ತಿದ್ದ ಬ್ರಿಟಿಷ್‌ ಮಾದರಿಯ ಗೌನ್‌ಗಳನ್ನು ಬದಲಾಯಿಸಲಾಗಿದೆ. ದೇಶಿ ಮಾದರಿಯಲ್ಲಿ ಖಾದಿ ಬಟ್ಟೆಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಒಂದು ಶಲ್ಯ, ಒಂದು ಟೊಪ್ಪಿಗೆ ಇರುತ್ತದೆ. ಶಲ್ಯದ ಮೇಲೆ ವಿಶ್ವವಿದ್ಯಾಲಯದ ಲಾಂಛನ ಮುದ್ರಿಸಲಾಗಿದೆ. ಚಿನ್ನದ ಪದಕ ಪಡೆದವರು, ರ್‍ಯಾಂಕ್‌‍ಪಡೆದವರು, ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯರು, ಸಿಂಡಿಕೇಟ್ ಸದಸ್ಯರು ಹೀಗೆ ಎಲ್ಲರಿಗೂ ಒಂದೊಂದು ಬಣ್ಣದ ಧಿರಿಸು ಸಿದ್ಧಪಡಿಸಲಾಗಿದೆ ಎಂದು ಕುಲಪತಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.