ADVERTISEMENT

ಅಂಕಗಳ ತಿದ್ದುಪಡಿ ಪ್ರಕರಣ: ಸಿಐಡಿ ತನಿಖೆಗೆ ಒಪ್ಪಿಸುವಂತೆ ಪತ್ರ

ಗುಲಬರ್ಗಾ ವಿವಿಯ ಬಿ.ಇಡಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಂಕಗಳ ತಿದ್ದುಪಡಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 14:11 IST
Last Updated 17 ಜೂನ್ 2025, 14:11 IST
ಗುಲಬರ್ಗಾ ವಿಶ್ವವಿದ್ಯಾಲಯದ ಪರೀಕ್ಷಾ ಭವನ
ಗುಲಬರ್ಗಾ ವಿಶ್ವವಿದ್ಯಾಲಯದ ಪರೀಕ್ಷಾ ಭವನ   

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ 2024ರ ಡಿಸೆಂಬರ್‌ನಲ್ಲಿ ನಡೆದಿದ್ದ ಬಿ.ಇಡಿ 2ನೇ ಹಾಗೂ 4ನೇ ಸೆಮಿಸ್ಟರ್ ಪರೀಕ್ಷೆಯ ಮೌಲ್ಯಮಾಪನದಲ್ಲಿ ಅಂಕಗಳ ತಿದ್ದುಪಡಿ ಮಾಡಿದ್ದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಿಐಡಿ ತನಿಖೆಗೆ ಅನುಮತಿ ನೀಡುವಂತೆ ಕೋರಿ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ.

ಡಿಸೆಂಬರ್‌ ತಿಂಗಳಲ್ಲಿ ಬಿ.ಇಡಿ 2ನೇ ಸೆಮಿಸ್ಟರ್‌ನ 2,427 ಹಾಗೂ 4ನೇ ಸೆಮಿಸ್ಟರ್‌ನ 4,139 ಸೇರಿ ಒಟ್ಟು 6,566 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮೌಲ್ಯಮಾಪನದಲ್ಲಿ ಅನಿಯಮಿತವಾಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮತ್ತು ಅಂಕಗಳು ತಿದ್ದುಪಡಿ ಮಾಡಿದ್ದು ವಿಶ್ವವಿದ್ಯಾಲಯದ ಕುಲಪತಿಗಳ ಗಮನಕ್ಕೆ ಬಂದಿದೆ. ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದಾಗ ಕೆಲವು ವಿದ್ಯಾರ್ಥಿಗಳ ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳಲ್ಲಿ ಒಂದೇ ಸಂಖ್ಯೆಯ ಅಂಕಗಳನ್ನು ನೀಡಿ ಪಾಸ್‌ ಮಾಡಲಾಗಿದೆ. ಇದು ಅಕ್ರಮ ಶಂಕೆಗೆ ಕಾರಣವಾಗಿದೆ ಎಂದು ವಿವಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವಿಶ್ವವಿದ್ಯಾಲಯವು ಈಚೆಗೆ ಸಿಂಡಿಕೇಟ್‌ನ ವಿಶೇಷ ಸಭೆಯಲ್ಲಿ ಬಿ.ಇಡಿ ಮೌಲ್ಯಮಾಪನದಲ್ಲಿನ ಅಕ್ರಮದ ಬಗ್ಗೆ ಪ್ರಸ್ತಾಪವಾಗಿದೆ. ಅನಿಯಮಿತವಾಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮತ್ತು ಅಂಕಗಳ ತಿದ್ದುಪಡಿ ಮಾಡಿರುವ ಕುರಿತು ಸಮಗ್ರವಾಗಿ ತನಿಖೆ ಕೈಗೊಳ್ಳಲು ಸಿಐಡಿಗೆ ವಹಿಸಲು ಕ್ರಮ ತೆಗೆದುಕೊಳ್ಳಲಾಯಿತು. ಪರೀಕ್ಷಾ ವಿಭಾಗದ ಎಲ್ಲ ಸಿಬ್ಬಂದಿ ಕೆಲಸ ಮರು ಹಂಚಿಕೆಗೂ ಕ್ರಮ ಆಗಬೇಕು ಎಂಬ ನಿರ್ಣಯವೂ ಆಗಿದೆ.

ADVERTISEMENT

ಬಿ.ಇಡಿ ಪರೀಕ್ಷೆಯಲ್ಲಿ ಸಾಕಷ್ಟು ನ್ಯೂನತೆಗಳು ಆಗಿವೆ. ಮತ್ತೊಮ್ಮೆ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡಬೇಕು. ಶಿಕ್ಷಣ ನಿಕಾಯದ ಡೀನ್‌ಗಳ ನೇತೃತ್ವದಲ್ಲಿ ಸರ್ಕಾರಿ, ಅನುದಾನಿತ ಮಹಾವಿದ್ಯಾಲಯಗಳ ಸಿಬ್ಬಂದಿ ಪಟ್ಟಿಯಿಂದ ಜೇಷ್ಠತೆ ಆಧಾರದ ಮೇಲೆ ಕಸ್ಟೋಡಿಯನ್, ಉಪಕಸ್ಟೋಡಿಯನ್‌ಗಳನ್ನು ನೇಮಿಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿಸಬೇಕು. ಮೌಲ್ಯಮಾಪನ ಮಾಡಿದವರೇ ಯುಯುಸಿಎಂಎಸ್‌ನಲ್ಲಿ ಅಂಕಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ತೀರ್ಮಾನಿಸಲಾಗಿದೆ.

‘ಅಂಕಗಳ ತಿದ್ದುಪಡಿ ಪ್ರಕರಣದ ಸಮಗ್ರ ತನಿಖೆಗಾಗಿ ಸಿಐಡಿಗೆ ಒಪ್ಪಿಸುವಂತೆ ಕೋರಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಇ–ಮೇಲ್ ಮಾಡಿ, ಪತ್ರವನ್ನೂ ಬರೆದಿದ್ದೇವೆ. ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೌಲ್ಯಮಾಪನದಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಲು, ಮುಂದೆ ಇಂತಹ ಕೃತ್ಯಗಳು ಆಗದಂತೆ ಎಚ್ಚರವಹಿಸಲು ಉನ್ನತ ಮಟ್ಟದ ತನಿಖೆಗಾಗಿ ಕೋರಲಾಗಿದೆ’ ಎಂದು ಕುಲಸಚಿವ ಪ್ರೊ. ರಮೇಶ ಲಂಡನಕರ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಂಡಿಕೇಟ್‌ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸಿಐಡಿ ತನಿಖೆಗೆ ಮನವಿ ಮಾಡಿ ಕುಲಸಚಿವರು ಉನ್ನತ ಶಿಕ್ಷಣ ಇಲಾಖೆಗೆ ಈಗಾಗಲೇ ಪತ್ರ ಬರೆದಿದ್ದಾರೆ. ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೇವೆ
- ಪ್ರೊ.ಜಿ. ಶ್ರೀರಾಮುಲು, ಗುಲಬರ್ಗಾ ವಿವಿ ಪ್ರಭಾರ ಕುಲಪತಿ

ಅನ್ಯ ವಿವಿಗಳ ಪ್ರಾಧ್ಯಾಪಕರಿಂದ ಮರು ಮೌಲ್ಯಮಾಪನ

ಅಂಕಗಳ ತಿದ್ದುಪಡಿ ಪ್ರಕರಣ ಸಿಐಡಿ ತನಿಖೆಗೆ ಒಳಪಟ್ಟರೆ ಫಲಿತಾಂಶ ಪ್ರಕಟಣೆಗೆ ವಿಳಂಬವಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅನ್ಯ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನು ನಿಯೋಜನೆ ಮಾಡಿಕೊಂಡು ಮರು ಮೌಲ್ಯಮಾಪನ ಮಾಡುತ್ತೇವೆ ಎಂದು ವಿವಿಯ ಅಧಿಕಾರಿಯೊಬ್ಬರು ತಿಳಿಸಿದರು.

ಗುಲಬರ್ಗಾ ವಿವಿ ವ್ಯಾಪ್ತಿಯಲ್ಲಿನ ಪ್ರಾಧ್ಯಾಪಕರನ್ನೇ ನಿಯೋಜನೆ ಮಾಡಿಕೊಂಡರೆ ತನಿಖಾ ಹಂತದಲ್ಲಿ ಇರುವಾಗ ಪಾರದರ್ಶಕತೆಯ ಪ್ರಶ್ನೆ ಮೂಡುತ್ತದೆ. ಹೀಗಾಗಿ ನಮ್ಮ ಭಾಗದ ಬೇರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನು ನಿಯೋಜನೆ ಮಾಡಿಕೊಂಡು ಅವರಿಂದ ಪಾರದರ್ಶಕವಾಗಿ ಮರುಮೌಲ್ಯಮಾಪನ ಮಾಡಲಾಗುವುದು. ಇದು ವಿವಿಗೆ ಆರ್ಥಿಕ ಹೊರೆಯಾದರೂ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದರು. ತಿದ್ದುಪಡಿಯಾಗಿರುವ ಅಂಕಗಳನ್ನು ತನಿಖೆಗಾಗಿ ಹಾಗೆಯೇ ಉಳಿಸಿಕೊಂಡು ಉತ್ತರ ಪತ್ರಿಕೆಗಳನ್ನು ಝೆರಾಕ್ಸ್ ಮಾಡಿ ಅಥವಾ ಅಂಕಗಳನ್ನು ತಾತ್ಕಾಲಿಕವಾಗಿ ಮರೆಮಾಚಿ ಮರು ಮೌಲ್ಯಮಾಪನ ಮಾಡುವ ಚಿಂತನೆ ಇದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.