ADVERTISEMENT

ಗುವಿವಿ: ಎರಡು ತಿಂಗಳಾದರೂ ನಡೆಯದ ಸ್ನಾತಕೋತ್ತರ ಪರೀಕ್ಷೆ

ಅಡಕತ್ತರಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ; ಬಗೆಹರಿಯದ ಗೊಂದಲ

ಮನೋಜ ಕುಮಾರ್ ಗುದ್ದಿ
Published 30 ಜೂನ್ 2022, 5:50 IST
Last Updated 30 ಜೂನ್ 2022, 5:50 IST
ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ ವಿಶ್ವವಿದ್ಯಾಲಯ   

ಕಲಬುರಗಿ: ಮೇ ತಿಂಗಳಲ್ಲೇ ನಡೆಯಬೇಕಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಎಲ್ಲ ಸ್ನಾತಕೋತ್ತರ ಕೋರ್ಸ್‌ನ ಮೊದಲ ಮತ್ತು ಮೂರನೇ ಸೆಮಿಸ್ಟರ್ ಪರೀಕ್ಷೆ ವಿಳಂಬವಾಗಿದೆ. ಇದರಿಂದ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ.

ರಾಜ್ಯದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪರೀಕ್ಷೆಗಳು ಮುಕ್ತಾಯವಾಗಿದ್ದು, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇನ್ನೂ ಪರೀಕ್ಷೆಗಳು ಆರಂಭವಾಗಿಲ್ಲ. ಏತನ್ಮಧ್ಯೆ ಮುಂದಿನ ಸೆಮಿಸ್ಟರ್ ತರಗತಿಗಳನ್ನು ನಡೆಸಲು ದಿನಾಂಕ ನಿಗದಿ ‍‍ಪಡಿಸಿ ಸುತ್ತೋಲೆ ಹೊರಡಿಸಲಾಗಿದೆ. ಪರೀಕ್ಷೆ ಬರೆಯದೇ ಮುಂದಿನ ಸೆಮಿಸ್ಟರ್‌ಗೆ ಹೋಗುವುದು ಹೇಗೆ ಎಂಬ ಗೊಂದಲ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

ಪದವಿ ಪರೀಕ್ಷೆಗಳನ್ನೂ ವಿಶ್ವವಿದ್ಯಾಲಯ ತಡವಾಗಿಯೇ ನಡೆಸಿತ್ತು. ವಿದ್ಯಾರ್ಥಿಗಳು ಹಾಗೂ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಸಕಾಲಕ್ಕೆ ಪರೀಕ್ಷೆ ನಡೆದು ಫಲಿತಾಂಶ ಬಂದಿದ್ದರೆ ಉದ್ಯೋಗಕ್ಕೆ, ಉನ್ನತ ಶಿಕ್ಷಣಕ್ಕೆ ಸೇರಿಕೊಳ್ಳಬಹುದಿತ್ತು ಎಂದುಕೊಂಡಿದ್ದರು. ಆದರೆ, ತಡವಾಗಿ ಪರೀಕ್ಷೆ ನಡೆದಿದ್ದರಿಂದ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.

ADVERTISEMENT

‘ಸ್ನಾತಕೋತ್ತರ ಪರೀಕ್ಷೆಗಳು ಮೇ ತಿಂಗಳಲ್ಲೇ ನಡೆಯಬೇಕಿತ್ತು. ಆದರೆ, ಪರೀಕ್ಷೆಗಾಗಿ ಒಂದೂವರೆ, ಎರಡು ತಿಂಗಳಿಂದ ಅಧ್ಯಯನ ನಡೆಸಿದ್ದೇವೆ. ಇನ್ನೂ ಪರೀಕ್ಷಾ ದಿನಾಂಕ ಘೋಷಣೆಯಾಗಿಲ್ಲ. ಅಲ್ಲಿ ಊರಿಗೂ ಹೋಗುವಂತಿಲ್ಲ, ಇಲ್ಲಿಯೂ ಇರುವಂತಿಲ್ಲ’ ಎಂದು ಎಂ.ಎಸ್ಸಿ ವಿದ್ಯಾರ್ಥಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಏನು ಸಮಸ್ಯೆ?: ಉನ್ನತ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸಲು ಹೊಸದಾಗಿ ಏಕರೂಪ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ಪೋರ್ಟಲ್‌ (ಯುಯುಸಿಎಂಎಸ್) ಆರಂಭಿಸಿದೆ. ಇದರಲ್ಲಿಯೇ ವಿದ್ಯಾರ್ಥಿಗಳ ಪ್ರವೇಶ, ಹಾಜರಾತಿ ಮಾಹಿತಿ, ಪರೀಕ್ಷೆಗಳು ಹಾಗೂ ಪದವಿಗಳನ್ನು ಪಡೆದ ಮಾಹಿತಿಯನ್ನು ಇದರಲ್ಲಿ ಅಪ್‌ಲೋಡ್ ಮಾಡಬೇಕಿದೆ.

ಆದರೆ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಈ ಪೋರ್ಟಲ್‌ ಬಗ್ಗೆ ಮಾಹಿತಿ ಇಲ್ಲದ ಕಾರಣ ಪರೀಕ್ಷೆಗಳು ಹತ್ತಿರ ಬಂದರೂ ಯುಯುಸಿಎಂಎಸ್‌ಗೆ ಮಾಹಿತಿ ನೀಡುತ್ತಿಲ್ಲ. ಇದರಿಂದ ವಿಳಂಬವಾಗುತ್ತಿದೆ. ಯುಯುಸಿಎಂಎಸ್‌ನಲ್ಲಿ ಮಾಹಿತಿ ನೀಡದಿದ್ದರೆ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲೂ ಅವಕಾಶ ಇರುವುದಿಲ್ಲ. ಅವರ ಶೈಕ್ಷಣಿಕ ಭವಿಷ್ಯ ಹಾಳಾಗುತ್ತದೆ ಎಂಬ ಕಾರಣಕ್ಕಾಗಿ ಪರೀಕ್ಷೆ ವಿಳಂಬವಾಗಿದೆ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಿಳಿಸಿದೆ.

‘ಪರೀಕ್ಷೆ ವಿಳಂಬದಿಂದ ಮುಂದಿನ ಹಂತದ ಶೈಕ್ಷಣಿಕ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಅಲ್ಲದೇ, ನ್ಯಾಕ್ ತಂಡವು ವಿಶ್ವವಿದ್ಯಾಲಯದ ಪರಿಶೀಲನೆಗೆ ಬರುತ್ತಿದ್ದು, ಪರೀಕ್ಷೆ ವಿಳಂಬ ಮಾಡಿದ್ದಕ್ಕೆ ಮೌಲ್ಯಾಂಕದಲ್ಲಿ ಕುಸಿಯಬಹುದು’ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

*

ಯುಯುಸಿಎಂಎಸ್‌ ವ್ಯವಸ್ಥೆ ದಿಢೀರ್ ಜಾರಿಗೆ ತಂದಿದ್ದರಿಂದ ತಾಂತ್ರಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ತೊಂದರೆಯಾಗಿದೆ. ಮೊದಲಿನಿಂದ ಆಫ್‌ಲೈನ್‌ ಮೂಲಕವೇ ನಡೆಸುವ ಮೂಲಕ ಆದಷ್ಟು ಶೀಘ್ರ ಪರೀಕ್ಷೆ ನಡೆಸಬೇಕು.
-ಹಣಮಂತ ಎಚ್‌.ಎಸ್‌. ಜಿಲ್ಲಾ ಅಧ್ಯಕ್ಷ, ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ

*
ಸ್ನಾತಕೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 3ನೇ ಸೆಮಿಸ್ಟರ್ ಪರೀಕ್ಷೆ ಜುಲೈ 7ರಿಂದ ಆರಂಭವಾಗಲಿದೆ. ಆದರೆ, ಮೊದಲ ಸೆಮಿಸ್ಟರ್ ಪರೀಕ್ಷೆ ಬರೆಯಲು ಯುಯುಸಿಎಂಎಸ್‌ನಲ್ಲಿ ಮಾಹಿತಿ ಸಲ್ಲಿಸಬೇಕಿದೆ. ಇದರಿಂದ ವಿಳಂಬವಾಗಿದೆ.
-ಮೇಧಾವಿನಿ ಕಟ್ಟಿ ಕುಲಸಚಿವೆ (ಮೌಲ್ಯಮಾಪನ), ಗುಲಬರ್ಗಾ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.