
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ನೂರಾರು ಕಾಲೇಜುಗಳು ರಾಯಚೂರು ವಿ.ವಿ, ಬೀದರ್ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರ್ಪಡೆಯಾದ ಬಳಿಕ ವಿ.ವಿ.ಗೆ ಬರುತ್ತಿದ್ದ ವರಮಾನಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಡಿ. 2ರಂದು 46ನೇ ಸಂಸ್ಥಾಪನಾ ದಿನ ಆಚರಿಸಿಕೊಳ್ಳುತ್ತಿರುವ ವಿಶ್ವವಿದ್ಯಾಲಯ ತನ್ನ ನಿವೃತ್ತ ಸಿಬ್ಬಂದಿಗೆ ಪಿಂಚಣಿ ಪಾವತಿಸುವುದಕ್ಕೂ ಪರದಾಡುತ್ತಿದೆ.
ಒಂದು ಅಂದಾಜಿನ ಪ್ರಕಾರ ಪ್ರತಿವರ್ಷವೂ ವಿಶ್ವವಿದ್ಯಾಲಯವು ₹ 60 ಕೋಟಿ ಹಣವನ್ನು ಪಿಂಚಣಿ ರೂಪದಲ್ಲಿ ನೀಡುತ್ತಿದೆ. ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಯಿಂದಾಗಿ ವಿಶ್ವವಿದ್ಯಾಲಯದ ವ್ಯಾಪ್ತಿ ಕುಗ್ಗಿದ್ದರಿಂದ ಸಂಯೋಜನೆಗೊಳ್ಳುವ ಕಾಲೇಜುಗಳ ಸಂಖ್ಯೆಯಲ್ಲಿ ಕುಸಿತವಾಗಿದೆ. ಇದರ ನೇರ ಹೊಡೆತ ವಿ.ವಿ. ವರಮಾನದ ಮೇಲೆ ಆಗಿದೆ. ರಾಜ್ಯ ಸರ್ಕಾರ ವಿಶ್ವವಿದ್ಯಾಲಯದ ನಿವೃತ್ತರಿಗೆ ನೀಡುವ ಪಿಂಚಣಿ ಮೊತ್ತದ ಒಂದು ಭಾಗವನ್ನು ವಿಶ್ವವಿದ್ಯಾಲಯವೇ ಭರಿಸಬೇಕಿರುವುದರಿಂದ ವಿ.ವಿ.ಯು ದಶಕಗಳಿಂದ ಕೂಡಿಟ್ಟುಕೊಂಡು ಬಂದಿದ್ದ ಠೇವಣಿಯ ಮೊತ್ತ ಕರಗುತ್ತಿದೆ.
ಸರ್ಕಾರ ನೀಡುತ್ತಿದ್ದ ಅನುದಾನವನ್ನು (ಬ್ಲಾಕ್ ಗ್ರಾಂಟ್) ಸ್ಥಗಿತಗೊಳಿಸಿರುವುದರಿಂದ ವಿಶ್ವವಿದ್ಯಾಲಯದ ಖರ್ಚುಗಳ ನಿರ್ವಹಣೆಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ, ವಿ.ವಿ. ನಡೆಸಲು ವಿವಿಧ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕದಂತಹ ಆಂತರಿಕ ಸಂಪನ್ಮೂಲವನ್ನೇ ನೆಚ್ಚಿಕೊಳ್ಳಬೇಕಿದೆ. ಅಲ್ಲದೇ, ಭದ್ರತಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ವಿಶ್ವವಿದ್ಯಾಲಯವು ನಡೆಸುತ್ತಿರುವ ಶಾಲೆಯ ಶಿಕ್ಷಕ ಸಿಬ್ಬಂದಿಗೆ ಪ್ರತಿ ವರ್ಷ ₹ 75 ಲಕ್ಷ ವೇತನವನ್ನು ವಿ.ವಿ.ಯೇ ಪಾವತಿಸಬೇಕಿದೆ.
‘ಇತ್ತೀಚೆಗೆ ರಾಜ್ಯದ ಆರು ಹಳೆಯ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಉನ್ನತ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳು ಕರೆಸಿಕೊಂಡು ವಿ.ವಿ.ಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕುಲಪತಿಗಳು ಪಿಂಚಣಿದಾರರಿಗೆ ನೀಡಬೇಕಿರುವ ಮೊತ್ತವನ್ನು ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಭರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಸರ್ಕಾರವು ಶೇ 50ರಷ್ಟು ಮೊತ್ತವನ್ನು ವಿ.ವಿ. ಭರಿಸಬೇಕು ಎನ್ನುತ್ತಿದೆ. ಆದರೆ, ಗುಲಬರ್ಗಾ ವಿ.ವಿ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಶೇ 66ರಷ್ಟು ಪಿಂಚಣಿ ಮೊತ್ತವನ್ನು ಭರಿಸುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ’ ಎನ್ನುತ್ತಾರೆ ಗುವಿವಿ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ.
ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲರು ಕಲ್ಯಾಣ ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಕೆಕೆಆರ್‌ಡಿಬಿ ಒಟ್ಟು ಅನುದಾನದ ಶೇ 10ರಷ್ಟು ನೀಡುವಂತೆ ಸೂಚನೆ ನೀಡಿದ್ದಾರೆ. ಮಂಡಳಿಯು ಅಷ್ಟು ಮೊತ್ತವನ್ನು ನೀಡಲು ಮುಂದಾದರೂ ಪೀಠೋಪಕರಣ, ವಸತಿ ನಿಲಯದಂತಹ ಮೂಲಸೌಕರ್ಯ ಅಭಿವೃದ್ಧಿಗೆ ನೀಡುತ್ತದೆಯೇ ಹೊರತು ನಿವೃತ್ತರ ಪಿಂಚಣಿ ವೇತನ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ. ಹೀಗಾಗಿ, ಸರ್ಕಾರದಿಂದಲೇ ಪಿಂಚಣಿ ಹಣ ಪಡೆಯಲು ಪ್ರಯತ್ನ ಆರಂಭಿಸಿದೆ.
–––
182
ಗುವಿವಿಯೊಂದಿಗೆ ಸಂಯೋಜನೆ ಹೊಂದಿದ ಕಾಲೇಜುಗಳು
17 ಸಾವಿರ
ಪ್ರಸ್ತುತ ವಿ.ವಿ. ವ್ಯಾಪ್ತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು
₹ 100 ಕೋಟಿ
ವಿ.ವಿ.ಗೆ ಅಗತ್ಯವಿರುವ ಅನುದಾನ
34 ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿ
150 ಪ್ರಸ್ತುತ ಇರುವ ಬೋಧಕೇತರ ಸಿಬ್ಬಂದಿ
–––
ಪಿಂಚಣಿಯ ಪೂರ್ಣ ಮೊತ್ತವನ್ನು ಸರ್ಕಾರವೇ ಭರಿಸಲು ಕ್ರಮ ಕೈಗೊಂಡರೆ ವಿ.ವಿ. ಮೇಲಿನ ಭಾರ ಇಳಿಯಲಿದೆ. ವಿ.ವಿ.ಗೆ ಭೂಮಿ ನೀಡಿದವರು ಮತ್ತೆ ಪರಿಹಾರಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದು ಪರಿಹಾರ ಮೊತ್ತವನ್ನು ವಿ.ವಿ. ಭರಿಸುವ ಸ್ಥಿತಿಯಲ್ಲಿಲ್ಲ. ಸರ್ಕಾರವೇ ಪರಿಹಾರ ನೀಡಬೇಕು
–ಪ್ರೊ.ಶಶಿಕಾಂತ ಉಡಿಕೇರಿ ಗುವಿವಿ ಕುಲಪತಿ
ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿ.ವಿ.ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶುಲ್ಕವನ್ನು ಕೆಕೆಆರ್‌ಡಿಬಿ ಪಾವತಿಸಲು ಕ್ರಮ ಕೈಗೊಂಡರೆ ಸ್ನಾತಕೋತ್ತರ ಕೋರ್ಸ್ ಓದುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಬಹುದು
–ಪ್ರೊ.ರಮೇಶ ಲಂಡನಕರ್ ಗುವಿವಿ ಕುಲಸಚಿವ
ನೇಮಕಾತಿಗೆ ಗಮನ ಹರಿಸದ ಸರ್ಕಾರ
ವಿಶ್ವವಿದ್ಯಾಲಯದಲ್ಲಿ ಕಳೆದ ಎರಡೂವರೆ ದಶಕದಿಂದ ಬೋಧಕ ಹುದ್ದೆಗಳ ನೇಮಕಾತಿಯೇ ಆಗಿಲ್ಲ. ಇದರಿಂದಾಗಿ ವಿವಿಧ ವಿಭಾಗಗಳಲ್ಲಿ ಕಾಯಂ ಬೋಧಕ ಸಿಬ್ಬಂದಿಯೇ ಇಲ್ಲ. 206 ಮಂಜೂರಾದ ಬೋಧಕ ಹುದ್ದೆಗಳ ಪೈಕಿ ಈಗ 34 ಬೋಧಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬ ಪ್ರಾಧ್ಯಾಪಕರಿಗೆ ಮೂರರಿಂದ ನಾಲ್ಕು ವಿಭಾಗಗಳ ಉಸ್ತುವಾರಿ ವಹಿಸಲಾಗಿದೆ. ಇದರಿಂದಾಗಿ ಪಾಠಗಳು ಸರಿಯಾಗಿ ನಡೆಯುತ್ತಿಲ್ಲ. ಪೂರ್ಣ ಪ್ರಮಾಣದ ಪ್ರಾಧ್ಯಾಪಕರು ಸಹ ಪ್ರಾಧ್ಯಾಪಕರು ಸಹಾಯಕ ಪ್ರಾಧ್ಯಾಪಕರು ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ವಿವಿಧ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಪಿಎಚ್.ಡಿ. ಸಂಶೋಧನೆಯೂ ಹಿನ್ನಡೆ ಕಾಣುತ್ತಿದೆ. 433 ಬೋಧಕೇತರ ಹುದ್ದೆಗಳ ಪೈಕಿ 283 ಹುದ್ದೆಗಳು ಖಾಲಿ ಇದ್ದು ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಹಣಕಾಸು ವಿಭಾಗದಲ್ಲಿ ಹೊರಗುತ್ತಿಗೆ ಸಿಬ್ಬಂದಿಯೇ ಅವ್ಯವಹಾರ ನಡೆಸಿ ವಜಾಗೊಂಡಿದ್ದು ಜವಾಬ್ದಾರಿಯುತ ಹುದ್ದೆಗಳಿಗೆ ಕಾಯಂ ಸಿಬ್ಬಂದಿಯನ್ನೇ ನೇಮಕ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಒಳಮೀಸಲಾತಿ ಗೊಂದಲ ಹಾಗೂ ರೋಸ್ಟರ್‌ನಂತೆ ಹುದ್ದೆಗಳನ್ನು ವಿಭಾಗಿಸಿ ಹೊಸದಾಗಿ ಇಲಾಖೆಗೆ ಹುದ್ದೆ ನೇಮಕಾತಿಗೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ ಎಂದು ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.