ADVERTISEMENT

ಗುಲಬರ್ಗಾ ‌ವಿ.ವಿ.: ವಿಭಾಗ ಮುಖ್ಯಸ್ಥರ ಮೇಲೆ ಪ್ರಾಧ್ಯಾಪಕ ಹಲ್ಲೆ, ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 17:52 IST
Last Updated 19 ಆಗಸ್ಟ್ 2020, 17:52 IST
ಪ್ರೊ.ಮೇಲಕೇರಿ
ಪ್ರೊ.ಮೇಲಕೇರಿ   

ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿದ್ಯಾಸಾಗರ ‌ಅವರ ‌ಮೇಲೆ ಮನಃಶಾಸ್ತ್ರ ‌ವಿಭಾಗದ ಪ್ರಾಧ್ಯಾಪಕ ಹಾಗೂ ಮಾಜಿ ಪ್ರಭಾರ ಕುಲಪತಿ ಪ್ರೊ.ಎಸ್.ಕೆ.ಮೇಲಕೇರಿ ಅವರು ಮಂಗಳವಾರ ‌ಹಲ್ಲೆ ನಡೆಸಿದ್ದು, ಈ ಸಂಬಂಧ ವಿದ್ಯಾಸಾಗರ್ ‌ಅವರು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೇಲಕೇರಿ ಅವರ ಸಂಬಂಧಿ ಸಸ್ಯಶಾಸ್ತ್ರ ವಿಭಾಗದಲ್ಲಿ ಪಿಎಚ್.ಡಿ. ಪದವಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಮೆರಿಟ್ ‌ಪಟ್ಟಿಯಲ್ಲಿ ಹೆಸರು ಬಂದಿರಲಿಲ್ಲ. ಆಗ ಪ್ರಭಾರ ಕುಲಪತಿಯಾಗಿದ್ದ ಮೇಲಕೇರಿ ಅವರು ಪಿಎಚ್.ಡಿ. ಸೀಟು ಕೊಡುವಂತೆ ಒತ್ತಡ ಹೇರಿದ್ದರು. ಆದರೆ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ವಿದ್ಯಾಸಾಗರ್ ನಿರಾಕರಿಸಿದ್ದರು. ಇದು ಮೇಲಕೇರಿ ಅವರ ಸಿಟ್ಟಿಗೆ ಕಾರಣವಾಗಿತ್ತು ಎನ್ನಲಾಗಿದೆ.

ಆದಾಗ್ಯೂ ಅದೇ ವಿಭಾಗದಲ್ಲಿ ಎಂ.ಫಿಲ್. ಪದವಿಗೆ ಸೀಟು ಸಿಕ್ಕಿತ್ತು. ಆದರೆ, ವಿದ್ಯಾರ್ಥಿ ಪೂರ್ಣಪ್ರಮಾಣದಲ್ಲಿ ಸಂಶೋಧನೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರೂ ಬೇರೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ‌ ಮಾಡುತ್ತಿದ್ದುದರಿಂದ ವಿದ್ಯಾಸಾಗರ್ ಅವರು ಶಿಷ್ಯವೇತನದ ಮಂಜೂರಾತಿ ‌ಪತ್ರಕ್ಕೆ ಸಹಿ ಹಾಕಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಮೇಲಕೇರಿ ಅವರು ವಿದ್ಯಾಸಾಗರ್ ಅವರ ಕಚೇರಿಗೆ ಬಂದು ವಾಗ್ವಾದ ಮಾಡಿ ವಿದ್ಯಾಸಾಗರ್ ಅವರ ಕಪಾಳಕ್ಕೆ ಏಟು ಕೊಟ್ಟಿದ್ದಾರೆ. ಹೀಗಾಗಿ ವಿದ್ಯಾಸಾಗರ್ ಅವರು ವಿ.ವಿ. ಅನುಮತಿ ಪಡೆದು ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

ಸಂಧಾನ ಯತ್ನ ವಿಫಲ: ಇಬ್ಬರನ್ನೂ ಕರೆಸಿ‌ ಸಂಧಾನದ ‌ಮೂಲಕ ಇತ್ಯರ್ಥಗೊಳಿಸುವ ಯತ್ನವನ್ನು ‌ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ‌ಯಾತನೂರ ಅವರು ಮಾಡಿದರಾದರೂ ದೂರು ನೀಡುವ ನಿರ್ಧಾರದಿಂದ ವಿದ್ಯಾಸಾಗರ್ ‌ಹಿಂದೆ ಸರಿಯಲಿಲ್ಲ.

ಸಮಿತಿ ರಚನೆ: ಪ್ರಕರಣದ ಆಂತರಿಕ ತನಿಖೆ ನಡೆಸಲು ಸಿಂಡಿಕೇಟ್ ‌ಸದಸ್ಯರಾಗಿರುವ ಪ್ರಾಧ್ಯಾಪಕರೊಬ್ಬರ ನೇತೃತ್ವದಲ್ಲಿ ನಾಲ್ವರು ಸದಸ್ಯರ ಸಮಿತಿಯೊಂದನ್ನು ‌ರಚಿಸಲಾಗಿದೆ. ವರದಿಯನ್ನು ಸಿಂಡಿಕೇಟ್ ಸಭೆಯ ಮುಂದಿಟ್ಟು ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಪ್ರೊ.ಚಂದ್ರಕಾಂತ ಯಾತನೂರ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.