
ಕಲಬುರಗಿ: ‘ಗುರು ಪರಂಪರೆ ಭಾರತೀಯ ಸಂಸ್ಕೃತಿಯ ಆತ್ಮವಾಗಿದೆ. ನಮ್ಮ ಧರ್ಮ, ನೀತಿ, ಸಂಸ್ಕಾರ ಮತ್ತು ಜ್ಞಾನವನ್ನು ತಲೆಮಾರಿನಿಂದ ತಲೆಮಾರಿಗೆ ಸಾಗಿಸಿರುವ ಶ್ರೇಷ್ಠ ಸೇತುವೆಯೇ ಗುರು–ಶಿಷ್ಯ ಸಂಬಂಧ’ ಎಂದು ಚವದಾಪುರಿ ಸಂಸ್ಥಾನ ಹಿರೇಮಠದ ರಾಜಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಶ್ರೀನಿವಾಸ ಸರಡಗಿಯ ಚಿನ್ನದಕಂತಿ ಚಿಕ್ಕವಿರೇಶ್ವರ ಮಠದಲ್ಲಿ ನಡೆದ ಚಿಕ್ಕವಿರೇಶ್ವರರ 79ನೇ ಪುಣ್ಯ ಸ್ಮರಣೋತ್ಸವ, ಸಾಂಸ್ಕೃತಿಕ ಭವನ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಅಂಥ ಪವಿತ್ರ ಪರಂಪರೆಯ ಜೀವಂತಿಕೆಯ ಪ್ರತೀಕವೇ ನಮ್ಮ ಮಠಗಳು ಮತ್ತು ಅವುಗಳನ್ನು ಮುನ್ನಡೆಸುವ ಮಠಾಧೀಶರು. ಭಕ್ತ ಪರಂಪರೆಗೆ ಹಾಗೂ ಹಲವಾರು ಮಠಾಧೀಶರಿಗೆ ಮಾರ್ಗದರ್ಶನ ಮಾಡುತ್ತಿರುವವರಲ್ಲಿ ಮೊದಲನೇ ಸಾಲಿನಲ್ಲಿ ಬರುವವರೇ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು’ ಎಂದರು.
ಮಠದ ಪೀಠಾಧಿಪತಿ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ‘ಇಂದು ನಾವು ಇಲ್ಲಿ ಸೇರಿರುವುದು ಕೇವಲ ಒಂದು ಸನ್ಮಾನ ಸಮಾರಂಭಕ್ಕಾಗಿ ಮಾತ್ರವಲ್ಲ; ಇದು ಜ್ಞಾನ, ತ್ಯಾಗ, ಸೇವೆ ಮತ್ತು ಧರ್ಮನಿಷ್ಠೆಯ ಸನ್ಮಾನವಾಗಿದೆ. ಮಠಾಧೀಶರು ಕೇವಲ ಒಂದು ಸಂಸ್ಥೆಯ ಮುಖ್ಯಸ್ಥರಲ್ಲ. ಅವರು ಸಮಾಜದ ಮಾರ್ಗದರ್ಶಕರು’ ಎಂದು ಹೇಳಿದರು.
ಇದೇ ವೇಳೆ ಸಾಧಕರನ್ನು ಸನ್ಮಾನಿಸಲಾಯಿತು. ಶರಣಬಸವೇಶ್ವರ ಮಹಾದಾಸೋಹ ಪೀಠದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ದೇವಾಪುರದ ಶಿವಮೂರ್ತಿ ಶಿವಾಚಾರ್ಯರು, ತೋನಸಳ್ಳಿಯ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ಅವರಾದದ ಮರಳಸಿದ್ಧ ಶಿವಾಚಾರ್ಯರು, ಮಠದ ಉತ್ತರಾಧಿಕಾರಿ ಚಿನ್ನದ ವಿರೇಶ್ವರ, ಯುವ ಮುಖಂಡರಾದ ಅಭಿಷೇಕ ಎ.ಪಾಟೀಲ, ಪ್ರಫುಲ ಎಸ್.ನಮೋಶಿ, ಗೊರಕನಾಥ ಖಾನಾಪುರ, ಸಂಜೀವಕುಮಾರ ಶೆಟ್ಟಿ, ರವೀಂದ್ರ ಸಾಹು, ಶಿವರಾಜ ಮಹಾಗಾಂವ ಕರಹರಿ, ವೇದ ಆಸ್ಪತ್ರೆಯ ಮುಖ್ಯಸ್ಥ ಡಾ.ವಿವೇಕ ವೀರೇಶ, ಶೃದ್ಧಾ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಉಪಸ್ಥಿತರಿದ್ದರು.
ಆನಂದ ನಂದಿಕೂರ, ಮಲ್ಲಿಕಾರ್ಜುನ ವರನಾಳ ಪ್ರಾರ್ಥಿಸಿದರು. ವಕೀಲ ಹಣಮಂತರಾಯ ಅಟ್ಟೂರ ಸ್ವಾಗತಿಸಿದರು. ರವಿಕುಮಾರ ಶಹಾಪುರಕರ್ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.