ADVERTISEMENT

ಹಾರಕೂಡ: ರಥೋತ್ಸವ ಮಾ.3ರಂದು

ನಾಲ್ವರು ಸಾಹಿತಿ– ಕಲಾವಿದರಿಗೆ ‘ಚನ್ನಶ್ರೀ’ ಪ್ರಶಸ್ತಿ, ಇಬ್ಬರು ಭಕ್ತರಿಗೆ ವಿಶೇಷ ಸತ್ಕಾರ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 12:18 IST
Last Updated 26 ಫೆಬ್ರುವರಿ 2020, 12:18 IST
ಲಿಂ. ಸದ್ಗುರು ಚನ್ನಬಸವ ಶಿವಯೋಗಿಗಳು ಹಾಗೂ ಡಾ. ಚನ್ನವೀರ ಶಿವಾಚಾರ್ಯರು
ಲಿಂ. ಸದ್ಗುರು ಚನ್ನಬಸವ ಶಿವಯೋಗಿಗಳು ಹಾಗೂ ಡಾ. ಚನ್ನವೀರ ಶಿವಾಚಾರ್ಯರು   

ಚಿಂಚೋಳಿ: ಲಿಂ.ಹಾರಕೂಡ ಚನ್ನಬಸವ ಶಿವಯೋಗಿಗಳ 69ನೇ ಜಾತ್ರಾ ಮಹೋತ್ಸವಕ್ಕೆ ಪಟ್ಟಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಮಾ.3 ರಂದು ರಥೋತ್ಸವ ನಡೆಯಲಿದೆ ಎಂದು ಶ್ರೀಮಠದ ಡಾ. ಚನ್ನವೀರ ಶಿವಾಚಾರ್ಯರು ತಿಳಿಸಿದ್ದಾರೆ.

ಈ ಪ್ರಯುಕ್ತ ಶ್ರೀಮಠದಲ್ಲಿ ಆರಂಭವಾಗಿರುವ ಶರಣ ಚರಿತಾಮೃತ ಪ್ರವಚನವು ಮಾ.3ರವರೆಗೆ ರಾತ್ರಿ 8 ಗಂಟೆಗೆ ನಡೆಯಲಿದೆ.

ಫೆ.1ರಂದು ಇಲ್ಲಿನ ಚಂದಾಪುರದ ಹಾರಕೂಡ ಚನ್ನಬಸವ ಶಿವಯೋಗಿಗಳ ಪಿ.ಯು ಕಾಲೇಜು ಆವರಣದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಟೂರ್ನಿ ಆಯೋಜಿಸಲಾಗಿದೆ. ಫೆ.2ರಂದು ಬೆಳಿಗ್ಗೆ 10ಕ್ಕೆ ರಂಗೋಲಿ ಸ್ಪರ್ಧೆ, ಸಂಜೆ 5ಕ್ಕೆ ಪಲ್ಲಕ್ಕಿ ಹಾಗೂ ಉಚ್ಚಾಯಿ ಮೆರವಣಿಗೆ ನಡೆಯಲಿದೆ. ಮಾ.3ರಂದು ಬೆಳಿಗ್ಗೆ 8 ಗಂಟೆಗೆ ಕುಂಭಾಭಿಷೇಕ, 10ಕ್ಕೆ ತಾತನವರ ತೊಟ್ಟಿಲೋತ್ಸವ, 11ರಿಂದ12ವರೆಗೆ ವಚನ ಗಾಯನ ಸ್ಪರ್ಧೆ, ಮಹಾಪ್ರಸಾದ, ಸಂಜೆ 6.30ಕ್ಕೆ ಪಂಚಲಿಂಗೇಶ್ವರ ಬುಗ್ಗೆ ಬಳಿಯ ತೇರು ಮೈದಾನದಲ್ಲಿ ರಥೋತ್ಸವ ನಡೆಯಲಿದೆ.

ADVERTISEMENT

ಭಕ್ತರಾದ ಶಾಂತವೀರಪ್ಪ ಸುಂಕದ್ ದಂಪತಿ ಹಾಗೂ ನಾಗಪ್ಪ ಮಾಸ್ತರ್ ಕೊಳ್ಳೂರು ದಂಪತಿಗೆ ‘ಗುರು ರಕ್ಷೆ’ ಪ್ರದಾನ ಮಾಡಲಾಗುವುದು. ನಂತರ ‘ಚನ್ನಶ್ರೀ’ ಪ್ರಶಸ್ತಿ ವಿತರಣೆ ನಡೆಯಲಿದೆ.

ಚನ್ನಶ್ರೀ ಪ್ರಶಸ್ತಿ: ಚನ್ನಶ್ರೀ ಪ್ರಶಸ್ತಿಯನ್ನು ಪ್ರತಿ ವರ್ಷ ಒಬ್ಬರು ವಿದ್ವಾಂಸರಿಗೆ ಹಾಗೂ ಮೂವರು ಕಲಾವಿದರಿಗೆ ನೀಡಲಾಗುತ್ತಿದೆ ಅದರಂತೆ ಪ್ರಸಕ್ತ ವರ್ಷ ‘ಕನ್ನಡದ ಕಬೀರ’ ಖ್ಯಾತಿಯ ಮಹಾಲಿಂಗಪುರದ ಇಬ್ರಾಹಿಂ ಸುತಾರ್, ಗದಗದ ಪ್ರವಚನಕಾರ ಟಿ.ಎಂ ಪಂಚಾಕ್ಷರಿ ಶಾಸ್ತ್ರಿ ಹಾಗೂ ಕಲಾವಿದರಾದ ಕಲಬುರ್ಗಿಯ ಅಶ್ವಿನಿ ಹಿರೇಮಠ ಮತ್ತು ರಾಜಕುಮಾರ ಹಿರೇಮಠ ಅವರಿಗೆ ಚನ್ನಶ್ರೀ ಪ್ರಶಸ್ತಿ ಫಲಕ, 5 ಗ್ರಾಂ ಬಂಗಾರ ನೀಡಿ ಡಾ.ಚನ್ನವೀರ ಶಿವಾಚಾರ್ಯರು ಗೌರವಿಸುವರು.

ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯ, ಮುಗುಳನಾಗಾವಿಯ ಕಟ್ಟಿಮನಿ ಸಂಸ್ಥಾನ ಹಿರೇಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ನೇತೃತ್ವ ವಹಿಸುವರು. ಶಾಸಕ ಡಾ. ಅವಿನಾಶ ಜಾಧವ ಅಧ್ಯಕ್ಷತೆ ವಹಿಸುವರು. ಸಂಸದರಾದ ಭಗವಂತ ಖೂಬಾ, ಡಾ.ಉಮೇಶ ಜಾಧವ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರು, ಮಾಜಿ ಸಚಿವ ಸುನೀಲ ವಲ್ಲ್ಯಾಪುರ, ಡಾ.ವಿಕ್ರಂ ಪಾಟೀಲ, ಸುಭಾಷ ರಾಠೋಡ್, ರೇಣುಕಾ ಚವ್ಹಾಣ ಭಾಗವಹಿಸುವರು.

ನಗೆ ಹಬ್ಬ: ಮಾ.4ರಂದು ಬೆಳಿಗ್ಗೆ ಉತ್ತಮ ಪಶುಗಳ ಪ್ರದರ್ಶನ ಹಾಗೂ ಜಂಗಿ ಪೈಲ್ವಾನರ ಕುಸ್ತಿಗಳು ನಡೆಯಲಿವೆ. ಸಂಜೆ ಗಂಗಾವತಿ ಪ್ರಾಣೇಶ ಸಂಗಡಿಗರಿಂದ ‘ನಗೆ ಹಬ್ಬ’ ಆಯೋಜಿಸಲಾಗಿದೆ.

ಜಾತ್ರೆ ಅಂಗವಾಗಿ ಪಟ್ಟಣದಲ್ಲಿ ಹಾರಕೂಡ ಚನ್ನಬಸವ ಶಿವಯೋಗಿಗಳ ಹವ್ಯಾಸಿ ಕಲಾ ಸಂಘದ ವತಿಯಿಂದ ಮಾ.3 ರಿಂದ 5ರವರಗೆ ‘ನಂಬಿಕೆ ಸುಳ್ಳಾಯಿತು’ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.