
ಕಲಬುರಗಿ: ‘ಅಂತರ್ಜಾಲ ಹಾಗೂ ಪುಸ್ತಕ ಪರಸ್ಪರ ವಿರುದ್ಧ ಎಂದು ನಾವೆಲ್ಲ ಮಾತನಾಡುತ್ತೇವೆ. ಆದರೆ, ಅವೆರಡೂ ಪರಸ್ಪರ ಪೂರಕ. ಅವುಗಳನ್ನು ಸರಿಯಾಗಿ ಬಳಸುವ ಜಾಣ್ಮೆ ಅಗತ್ಯ’ ಎಂದು ‘ಹುಟ್ಟು ಮಚ್ಚೆ’ ಕೃತಿಯ ಅನುವಾದಕ ಹರ್ಷ ರಘುರಾಮ ಅಭಿಪ್ರಾಯಪಟ್ಟರು.
ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಸಪ್ನ ಬುಕ್‌ಹೌಸ್‌ನಲ್ಲಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಂವಾದಕ, ಸಾಹಿತಿ ವಿಕ್ರಮ ವಿಸಾಜಿ ಹಾಗೂ ಸಭಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
‘ನಾನು ಅನುವಾದಿಸಿ ಕೃತಿಯು ಟರ್ಕಿ ಸಾಂಪ್ರದಾಯಸ್ಥ ಮುಸ್ಲಿಂ ಕುಟುಂಬವೊಂದರ ತಾಯಿ–ಮಗಳ ಸಂಭಾಷಣೆಯ ಸಾರ ಹೊಂದಿದೆ. ಅದನ್ನು ಅನುವಾದಿಸುವ ಮುನ್ನ ಕನ್ನಡದಲ್ಲಿ ಅಂಥ ಸಾಹಿತ್ಯ ಬರೆದ ಸಾರಾ ಅಬೂಬಕ್ಕರ್, ಬಾನು ಮುಷ್ತಾಕ್, ಹೊಸ ತಲೆಮಾರಿನ ಫಾತಿಮಾ ರಲಿಯಾ ಸಾಹಿತ್ಯ ಓದಿದೆ. ಯುವ ಭಾಷೆಗೆ ಮೊನಚು ತರಲು ಸಿದ್ಧಲಿಂಗಯ್ಯ ಅವರ ಊರು–ಕೇರಿ ಓದಿದೆ. ಆದರೆ ನನಗೆ ಹೆಚ್ಚು ನೆರವಾಗಿದ್ದು, ಇನ್‌ಸ್ಟಾಗ್ರಾಂ ರೀಲ್ಸ್’ ಎಂದರು.
‘ಅಣ್ಣಾ, ಮಚಾ, ಗುರು ಪದಗಳೆಲ್ಲ ನೇಪಥ್ಯಕ್ಕೆ ಸರಿಯುತ್ತಿದ್ದು, ಬ್ರೊ ಎಂಬುದು ಸದ್ಯ ಎಲ್ಲೆಡೆ ಚಾಲ್ತಿಯಲ್ಲಿದೆ. ಅದರಲ್ಲೂ ಏಕವಚನ, ಬಹುವಚನ ಬಳಕೆಯಾಗುತ್ತಿದೆ. ಇದುವೇ ಭಾಷೆ ಬದಲಾಗುವ ಪರಿ’ ಎಂದು ಅಭಿಪ್ರಾಯಪಟ್ಟರು.
‘ಜರ್ಮನಿಯವರು ಹೇಗೆ ಮಾತನಾಡುತ್ತಾರೆ ಎಂಬುದು ಕನ್ನಡಕ್ಕೆ ಮುಖ್ಯವಾಗಲ್ಲ. ಆದರೆ, ಅನುವಾದಿಸುವ ಬಳಸುವ ಭಾಷೆ ಕೃತಿಯ ಓದುಗರಿಗೆ ಅದು ತಮ್ಮದೆನಿಸಬೇಕು. ಅಂಥ ಭಾಷೆ ಬಳಸಲು ಪ್ರಸ್ತುತ ಯುವಜನರು ಬಳಸುವ ಭಾಷೆ ಬಳಸಿದೆ. ಅದಕ್ಕಾಗಿ ಇನ್‌ಸ್ಟಾಗ್ರಾಂ, ಯೂಟ್ಯೂಬ್, ಕಿರುಚಿತ್ರಗಳು, ಕನ್ನಡದ ರ‍್ಯಾಪ್‌ಗಳ ನೆರವು ಪಡೆದೆ. ಅಂತಿಮವಾಗಿ ಪ್ರಸ್ತುತ ಭಾಷೆ ಬಳಸುವ ಯುವಕರಿಬ್ಬರು ಸಹಜವಾಗಿ ಸಂವಾದಿಸುವಾಗ ಬಳಸುವ ಭಾಷೆಯಲ್ಲಿ ಬರೆದೆ. ಅದರಲ್ಲಿ ಸಮತೋಲನ ಕಾಯ್ದುಕೊಳ್ಳುವುದು ತುಸು ಸವಾಲಾಯಿತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಸದ್ಯ ನಾನು ಇನ್ನೊಂದು ಕೃತಿಯ ಅನುವಾದದಲ್ಲಿ ತೊಡಗಿದ್ದೇನೆ. ವರ್ತಮಾನದಲ್ಲಿ ಸ್ವಯಂ ಬರವಣಿಗೆಯಲ್ಲಿ ತೊಡಗುವ ಯೋಚನೆಯಿಲ್ಲ. ಅದನ್ನು ಭವಿಷ್ಯದಲ್ಲಿ ಪ್ರಯತ್ನಿಸುವೆ’ ಎಂದ ಹರ್ಷ ರಘುರಾಮ, ‘ನಾನು ವಿದೇಶಿ ಭಾಷೆಯಾಗಿ ಜರ್ಮನ್ ಕಲಿತಿದ್ದು, ಜರ್ಮನ್ ಭಾಷೆಯಲ್ಲಿ ಇ–ಮೇಲ್, ಸಂದೇಶಗಳನ್ನು ಬರೆಯಬಲ್ಲೆ. ಆದರೆ, ಜರ್ಮನ್ ಭಾಷೆಯಲ್ಲಿ ರಚನಾತ್ಮಕ ಬರವಣಿಗೆ ಸವಾಲು. ಅದಾಗ್ಯೂ, ಒಂದು ಸಣ್ಣ ಕಥೆಯನ್ನು ನನ್ನ ಜರ್ಮನಿಯ ಗೆಳೆಯನೊಟ್ಟಿಗೆ ಜತೆಗೂಡಿ ಬರೆಯಲು ಅನುವಾದಿಸುತ್ತಿರುವೆ’ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಬೋಡೆ ರಿಯಾಜ್ ಅಹ್ಮದ್, ಶ್ರೀಶೈಲ ನಾಗರಾಳ, ರವೂಫ್ ಖಾದ್ರಿ, ಸಂಧ್ಯಾ ಹೊನಗುಂಟಿಕರ, ಶೈಲಜಾ ಬಾಗೇವಾಡಿ, ಶಾಂತಾ, ಪರಿಮಳಾ, ಶಿವಾಜಿ ಮೇತ್ರೆ, ಸಂಗಣ್ಣಗೌಡ, ವೀರಶೆಟ್ಟಿ ಗಾರಂಪಳ್ಳಿ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
‘ಓದಿನ ಸಂಸ್ಕೃತಿ ಶ್ರೀಮಂತ’
‘ಜರ್ಮನಿಯಲ್ಲಿ ಪುಸ್ತಕ ಓದುವ ಸಂಸ್ಕೃತಿ ಶ್ರೀಮಂತವಾಗಿದೆ. ಜರ್ಮನ್ ಸಮಕಾಲೀನ ಸಾಹಿತ್ಯದಲ್ಲಿ ಗದ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಅಲ್ಲಿನ ಕಾದಂಬರಿ ಪ್ರಕಾರ ಬಹಳ ದಟ್ಟವಾಗಿದೆ. ಅಲ್ಲಿನ ಪುಸ್ತಕ ಮಳಿಗೆ ಹೊಕ್ಕರೆ ಶೇ90ರಷ್ಟು ಕಾದಂಬರಿಗಳು ಸಿಕ್ಕರೆ ಶೇ10ರಷ್ಟು ಕಥಾ ಸಂಕಲನ ಸಿಗುವುದೂ ವಿರಳ’ ಎಂದು ಅನುವಾದಕ ಹರ್ಷ ರಘುರಾಮ ಹೇಳಿದರು.
‘ಈ ಕಾದಂಬರಿಯಲ್ಲಿ 2023ರಲ್ಲಿ ಬಿಡುಗಡೆಯಾಯಿತು. ಇದನ್ನು ಅನುವಾದಿಸಲು ಗೋಥೆ ಸಂಸ್ಥೆ ನಿರ್ಧರಿಸಿತು. ಈ ಕೃತಿಯ ಸೂಕ್ಷ್ಮ ಅಭಿವ್ಯಕ್ತಿ ಕ್ರಮ ಇಷ್ಟವಾಯಿತು. ಕನ್ನಡದ ಮಟ್ಟಿಗೆ ಅದು ಹೊಸತು ಅನಿಸಿತು. ಅನುವಾದ ಸವಾಲಿನಿಂದಲೂ ಕೂಡಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.