ADVERTISEMENT

ಬಳವಡ್ಗಿ ಗ್ರಾಮಕ್ಕೆ ನೆರೆ ಭೀತಿ

ಗಣಿ ತ್ಯಾಜ್ಯ, ಹಳ್ಳ ಒತ್ತುವರಿ ಸಮಸ್ಯೆಗೆ ಮೂಲ: ಆರೋಪ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 9:08 IST
Last Updated 17 ಸೆಪ್ಟೆಂಬರ್ 2020, 9:08 IST
ವಾಡಿ ಸಮೀಪದ ಬಳವಡ್ಗಿ ಗ್ರಾಮಕ್ಕೆ ನೀರು ನುಗ್ಗಿರುವುದು
ವಾಡಿ ಸಮೀಪದ ಬಳವಡ್ಗಿ ಗ್ರಾಮಕ್ಕೆ ನೀರು ನುಗ್ಗಿರುವುದು   

ವಾಡಿ: ಹಲವು ದಿನಗಿಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಚಿತ್ತಾಪುರ ತಾಲ್ಲೂಕಿನ ಬಳವಡ್ಗಿ ಗ್ರಾಮ ಭಾಗಶಃ ಮುಳುಗಡೆಯಾಗಿದೆ. ನೆರೆ ಭೀತಿಯಿಂದ ಇಡೀ ಗ್ರಾಮದ ಜನರು ನಿದ್ದೆ ಮರೆತು ಜಾಗರಣೆಗೆ ಜಾರಿದ್ದಾರೆ. ರಾತ್ರಿಯಿಡೀ ಸುರಿದ ಸತತ ಮಳೆಯಿಂದ ಆತಂಕದಲ್ಲೇ ರಾತ್ರಿ ಕಳೆದಿದ್ದಾರೆ.

ಗ್ರಾಮದ 150ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. . ಹಲವು ಮನೆಗಳ ತಳಪಾಯದಲ್ಲಿ ನೀರು ಸಂಗ್ರಹಗೊಂಡಿದ್ದು, ಮನೆಗಳನ್ನು ಶಿಥಿಲಗೊಳಿಸಿವೆ.

ಬಹುತೇಕ ಬಡ ಕೂಲಿಕಾರ್ಮಿಕರೇ ವಾಸವಾಗಿರುವ ಗ್ರಾಮದಲ್ಲಿ ಪ್ರತಿವರ್ಷ ಮಳೆಗಾಲಕ್ಕೆ ಅತಿಥಿಯಂತೆ ಬಂದು ಹೋಗುವ ಪ್ರವಾಹ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ನೂಕುತ್ತಿದೆ.

ADVERTISEMENT

ಗ್ರಾಮದ ಮೂಲಕ ಹಾದು ಹೋಗುವ ಹಳ್ಳ ಭೀಮಾನದಿಗೆ ಸೇರುತ್ತದೆ. ಹಳ್ಳದ ನೀರು ಸರಾಗವಾಗಿ ಹರಿದು ಹೋಗಲು ಇರುವ ದಾರಿಯಲ್ಲಿ ಕಲ್ಲುಗಣಿಗಳ ತ್ಯಾಜ್ಯ ಬಿದ್ದಿದೆ. ಹಳ್ಳದ ತುಂಬಾ ಜಾಲಿಮರಗಳು ಬೆಳೆದು ನಿಂತಿದ್ದು, ನೀರಿನ ಸರಾಗ ಹರಿಯುವಿಕೆಗೆ ಭಾರೀ ತೊಡಕಾಗಿವೆ. ಇದರಿಂದಾಗಿ ಮಳೆನೀರು ಗ್ರಾಮಕ್ಕೆ ನುಗ್ಗುತ್ತಿದೆ. ಜತೆಗೆ ನೀರು ಫಲವತ್ತಾದ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಗೆ ಕಾರಣವಾಗುತ್ತಿದೆ ಎಂದು ದೂರುತ್ತಾರೆ ಗ್ರಾಮಸ್ಥರು.

2017ರಲ್ಲಿ ಎಸ್‌ಯುಸಿಐ ಪಕ್ಷದ ವತಿಯಿಂದ ಗ್ರಾಮಸ್ಥರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಲಾಗಿತ್ತು. ಆದರೆ ಇದುವರೆಗೂ ಪರಿಹಾರ ಸಿಕ್ಕಿಲ್ಲ.

‘ಪ್ರತಿ ವರ್ಷ ಮಳೆಯಿಂದ ಜನ, ಜಾನುವಾರು ಹಾಗೂ ಅಪಾರ ಪ್ರಮಾಣದ ಬೆಳೆನಷ್ಟಕ್ಕೆ ಕಾರಣವಾಗುತ್ತಿದ್ದರೂ ಸಮಸ್ಯೆ ಹೊಗಲಾಡಿಸುವಲ್ಲಿ ಆಡಳಿತ ನಿರ್ಲಕ್ಷ್ಯ ವಹಿಸಿದೆ’ ಎನ್ನುತ್ತಾರೆ ಬಸವಂತ ವರ್ಮ.

‘ಹಳ್ಳ ಒತ್ತುವರಿ ಹಾಗೂ ಕಲ್ಲುಗಣಿ ತ್ಯಾಜ್ಯ ತಂದು ಸುರಿದಿದ್ದರಿಂದ ನೀರು ಮುಂದೆ ಹೋಗದೇ ಗ್ರಾಮಕ್ಕೆ ನುಗ್ಗುತ್ತಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಶೀಘ್ರದಲ್ಲೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದುತಹಶೀಲ್ದಾರ್ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.