ADVERTISEMENT

ಹಳ್ಳದಲ್ಲಿ ಹೂಳು: ಗ್ರಾಮಕ್ಕೆ ನುಗ್ಗುವ ಮಳೆ ನೀರು

ಸರಾಗ ನೀರು ಹರಿಯುವಿಕೆಗೆ ಅಡ್ಡಿಯಾದ ಗಿಡಗಂಟಿ, ಕಲ್ಲುಗಣಿ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 4:45 IST
Last Updated 12 ಜುಲೈ 2021, 4:45 IST
ವಾಡಿ ಸಮೀಪದ ಬಳವಡ್ಗಿ ಗ್ರಾಮದ ಬಳಿಯ ಹಳ್ಳದಲ್ಲಿ ಬೆಳೆದು ನಿಂತ ಗಿಡಗಂಟಿಗಳು
ವಾಡಿ ಸಮೀಪದ ಬಳವಡ್ಗಿ ಗ್ರಾಮದ ಬಳಿಯ ಹಳ್ಳದಲ್ಲಿ ಬೆಳೆದು ನಿಂತ ಗಿಡಗಂಟಿಗಳು   

ಬಳವಡ್ಗಿ(ವಾಡಿ): ಇಲ್ಲಿನ ಬಳವಡ್ಗಿ ಗ್ರಾಮದ ಬಳಿ ಹರಿಯುವ ಹಳ್ಳವು ಸ್ಥಳೀಯರಿಗೆ ಆಸರೆ ಆಗುವುದರ ಜತೆಗೆ ಪ್ರತಿ ಮಳೆಗಾಲದಲ್ಲೂ ಗ್ರಾಮದೊಳಗೆ ನುಗ್ಗಿ ಅಕ್ಷರಶಃ ನಲುಗಿಸುತ್ತಿದೆ.

‌ಆಗಸದಲ್ಲಿ ಕವಿದ ಮೋಡ ಇವರ ಎದೆಯಲ್ಲಿ ನಡುಕ ಸೃಷ್ಟಿಸುತ್ತದೆ. ಮಳೆ ಬಂದರೆ ನೆರೆಗೆ ತುತ್ತಾಗುವ ಭಯದಿಂದ ಗ್ರಾಮಸ್ಥರು ಇಡೀ ರಾತ್ರಿ ಜಾಗರಣೆಗೆ ಜಾರುತ್ತಾರೆ. ರೈತರ ಜಮೀನುಗಳಿಗೆ ನುಗ್ಗುವ ನೀರು ಬೆಳೆ ಹಾನಿ ಮಾಡುತ್ತದೆ. ನೆರೆಯಿಂದ ಉಂಟಾಗುವ ಸಮಸ್ಯೆಗೆ ಮುಕ್ತಿ ಒದಗಿಸಿ ಎಂದು ಗ್ರಾಮಸ್ಥರು ಹಲವು ವರ್ಷಗಳಿಂದ ಮನವಿ ಮಾಡಿಕೊಂಡು ಬರುತ್ತಿದ್ದಾರೆ.

ಬಳವಡ್ಗಿ ಗ್ರಾಮವು ಹಲಕರ್ಟಿ ಗ್ರಾಮ ಪಂಚಾಯಿತಿಗೆ ಒಳಪಡುತ್ತದೆ. ಪ್ರತಿ ಮಳೆಗಾಲದಲ್ಲಿ ಆವರಿಸುವ ನೆರೆ ಇಲ್ಲಿನವರ ನಿದ್ದೆ ಕದ್ದಿದೆ. ಗ್ರಾಮದ ಮೂಲಕ ಹಾದು ಹೋಗುವ ಹಳ್ಳ ಕಡಬೂರು ಮಾರ್ಗವಾಗಿ ಭೀಮಾ ನದಿ ಸೇರುತ್ತದೆ.

ADVERTISEMENT

ಸರಾಗವಾಗಿ ಹರಿಯುವ ಹಳ್ಳದ ನೀರಿನ ಮಾರ್ಗದಲ್ಲಿ ಕಲ್ಲು ಗಣಿಗಳ ತ್ಯಾಜ್ಯ ಹಾಗೂ ಹೂಳು ತುಂಬಿಕೊಂಡಿದೆ. ಇದರ ಜೊತೆಗೆ ಎರಡೂ ಬದಿಯಲ್ಲಿ ಜಾಲಿ ಗಿಡ, ಕುರುಚಲು ಮುಳ್ಳುಕಂಟಿ ಬೆಳೆದು ನಿಂತು ನೀರಿನ ಹರಿವಿಗೆ ತೊಡಕಾಗಿವೆ. ಗಣಿ ಮಾಲೀಕರುಕಲ್ಲಿನ ತ್ಯಾಜ್ಯವನ್ನು ಹಳ್ಳದ ಒಡಲಲ್ಲಿ ಸುರಿಯುತ್ತಿದ್ದಾರೆ. ಅಧಿಕಾರಿಗಳು ಇದರ ತೆರವಿಗೆ ವಿಫಲರಾಗಿದ್ದಾರೆ. ಬಿದ್ದ ಸ್ವಲ್ಪ ಮಳೆಗೆ ಹಳ್ಳದ ನೀರು ನೇರವಾಗಿ ಗ್ರಾಮದ ಬೀದಿಗಳಿಗೆ ನುಗ್ಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

ಮನೆಯೊಳಗೆ ನುಗ್ಗುವ ಕಲುಷಿತ ನೀರಿನ ಜತೆಗೆ ವಿಷಜಂತುಗಳು, ಕ್ರಿಮಿ ಕೀಟಗಳ ಭಯದಲ್ಲೇ ಕಾಲ ಕಳೆಯಬೇಕಿದೆ. ಪ್ರತಿ ವರ್ಷ ಗ್ರಾಮಕ್ಕೆ ನುಗ್ಗುವ ನೀರು ಹಲವು ಮನೆಗಳ ತಳಪಾಯ ಸಡಿಲಗೊಳಿಸುತ್ತಿದೆ. ಕಳೆದ ವರ್ಷ 3 ಬಾರಿ ಗ್ರಾಮಕ್ಕೆ ನುಗ್ಗಿತ್ತು. ಇದು ಗ್ರಾಮಸ್ಥರನ್ನು ಹೈರಾಣಾಗಿಸಿತ್ತು. ಪಾತ್ರೆ, ಸಾಮಾನು ಸಹಿತ ದವಸ ಧಾನ್ಯಗಳು ನೀರಿನಲ್ಲಿ ಕೊಚ್ಚಿ ಹೋದವು. ಜತೆಗೆ ಜಮೀನುಗಳಲ್ಲಿ ಬೆಳೆದು ನಿಂತಿದ್ದ ಬೆಳೆಗಳನ್ನೂ ನಾಶಪಡಿಸಿತು. ನೆರೆಯ ಅಪಾಯ ಅರಿತ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಹಲವು ರಾತ್ರಿಗಳನ್ನು ಆತಂಕದಲ್ಲಿ ಕಳೆದಿದ್ದೇವೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು.

ನೆರೆಯಿಂದ ಶಾಶ್ವತ ಪರಿಹಾರ ನೀಡುವಂತೆ ಗ್ರಾಮಸ್ಥರು 3 ವರ್ಷಗಳ ಹಿಂದೆ ಚಿತ್ತಾಪೂರ ತಹಶೀಲ್ದಾರ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಇದುವರೆಗೂ ಪರಿಹಾರ ಸಿಕ್ಕಿಲ್ಲ. ಹಳ್ಳದಲ್ಲಿನ ಕಲ್ಲಿನ ತ್ಯಾಜ್ಯ, ಹೂಳು, ಮುಳ್ಳಿನ ಕಂಟಿ ತೆರವುಗೊಳಿಸಬೇಕು ಎಂಬುದು ಇಲ್ಲಿನವರ ಬೇಡಿಕೆ.

***

ಪ್ರತಿ ವರ್ಷ ನೆರೆಯ ಹಾವಳಿ ಸಾಮಾನ್ಯವಾಗಿದೆ. ಪ್ರವಾಹ ಬಂದಾಗ ಮಾತ್ರ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡುವ ಬದಲು ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು

- ಬಸವಂತ ವರ್ಮಾ,ಬಳವಡ್ಗಿ, ದಲಿತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.