ADVERTISEMENT

ಕಲಬುರ್ಗಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

ನಗರದಲ್ಲೂ ಧಾರಾಕಾರ ಮಳೆ, ರಸ್ತೆಯಲ್ಲಿ ನಿಂತುಕೊಂಡ ನೀರು, ದಿನವಿಡೀ ವಿದ್ಯುತ್‌ ಕಣ್ಣಾಮುಚ್ಚಾಲೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 4:33 IST
Last Updated 24 ಜುಲೈ 2021, 4:33 IST
ಕಲಬುರ್ಗಿಯಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯಲ್ಲಿ ಬಾಲಕ ಕೊಡೆ ಹಿಡಿದು ಸಾಗಿದ್ದು ಹೀಗೆ
ಕಲಬುರ್ಗಿಯಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯಲ್ಲಿ ಬಾಲಕ ಕೊಡೆ ಹಿಡಿದು ಸಾಗಿದ್ದು ಹೀಗೆ   

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಉತ್ತಮ ಮಳೆ ಸುರಿಯಿತು.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡಿದ್ದರಿಂದ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೇ ಸುರಿಯುತ್ತಿದ್ದ ಮಳೆ, ಶುಕ್ರವಾರ ಬೆಳಿಗ್ಗೆಯಿಂದ ತುಸು ಬಿಡುವು ನೀಡಿತು. ಮಧ್ಯಾಹ್ನ ಬಿಸಿಲು ಬಿದ್ದ ಕಾರಣ ರೈತಾಪಿ ಜನರು ತುಸು ಸಮಾಧಾನಗೊಂಡಿದ್ದರು. ಆದರೆ, ಸಂಜೆ 5ರ ಸುಮಾರಿಗೆ ಏಕಾಏಕಿ ಆರಂಭವಾದ ಮಳೆ ಎರಡು ತಾಸು ಧಾರಾಕಾರವಾಗಿ ಸುರಿಯಿತು.

ಇಲ್ಲಿನ ಶಕ್ತಿ ನಗರ, ಗಾಜಿಯಾಬಾದ್‌, ದರ್ಗಾ ಬಡಾವಣೆ, ಮೋಮಿನ್‌ಪುರ, ಚೌದಾಪುರ ಪ್ರದೇಶ, ಸೂಪರ್‌ ಮಾರ್ಕೆಟ್‌ ಪ್ರದೇಶ, ಸೋನಿಯಾ ಗಾಂಧಿ ಬಡಾವಣೆ, ಹೈಕೋರ್ಟ್‌ ರಸ್ತೆ ಹಾಗೂ ಓಂ ನಗರದ ತಗ್ಗು ಪ‍್ರದೇಶಗಳಲ್ಲಿ ನೀರು ನಿಂತಿದ್ದರಿಂದ ಜನ ಪರದಾಡುವಂತಾಯಿತು. ನಡುರಸ್ತೆಯಲ್ಲೂ ಅಪಾರ ನೀರು ಹಳ್ಳದಂತೆ ಹರಿದಿದ್ದರಿಂದ ವಾಹನ ಸವಾರರು ಕೂಡ ಸಂಕಷ್ಟ ಎದುರಿಸಿದರು.ವೆಂಕಟೇಶ್ವರ ನಗರ, ಶಕ್ತಿನಗರ, ಶಾಸ್ತ್ರಿನಗರ, ಮಹಾವೀರ ನಗರ, ಗುಲ್ಲಾಬಾಡಿ, ಮೋಮಿನ್‌ಪುರ, ವೀರೇಂದ್ರ ಪಾಟೀಲ ಬಡಾವಣೆ, ಗುಲಬರ್ಗಾ ವಿಶ್ವವಿದ್ಯಾಲಯ‍ ಮತ್ತು ಹೈಕೋರ್ಟ್‌ ಸುತ್ತಮತ್ತಲ ಪ್ರದೇಶ, ಲಾಳಗೇರಿ, ಎಪಿಎಂಸಿ ಪ್ರದೇಶ ಸೇರಿದಂತೆ ನಗರದ ಹೊರವಲಯದಲ್ಲೂ ಭಾರಿ ಮಳೆಯಾಯಿತು.

ADVERTISEMENT

ವೆಂಕಟೇಶ್ವರ ನಗರದ, ಪೂಜಾ ಕಾಲೊನಿ, ಹೊಸ ಜೇವರ್ಗಿ ರಸ್ತೆ ಹಾಗೂ ಸಂತೋಷ ನಗರದಲ್ಲಿ ಮರದ ಕೊಂಬೆಗಳು ಜೋತು ಬಿದಿದ್ದರಿಂದ ಜೆಸ್ಕಾಂ ಸಿಬ್ಬಂದಿ ಮುಂಜಾಗೃತಾ ಕ್ರಮವಾಗಿ ವಿದ್ಯುತ್‌ ಕಡಿತಗೊಳಿಸಿದರು. ರಾತ್ರಿಯವರೆಗೂ ವಿದ್ಯುತ್‌ ಕಣ್ಣಾಮುಚ್ಚಾಲೆ ಮುಂದುವರಿದೇ ಇತ್ತು.

ಉಳಿದಂತೆ ಜಿಲ್ಲೆಯ ಚಿಂಚೋಳಿ, ಅಫಜಲಪುರ, ವಾಡಿ, ಕಮಲಾಪುರ, ಯಡ್ರಾಮಿ, ಜೇವರ್ಗಿ ತಾಲ್ಲೂಕುಗಳಲ್ಲಿಯೂ ಸಾಧಾರಣ ಮಳೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.