ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗಿನ ಜಾವ ಭಾರಿ ಮಳೆಯಾಗುತ್ತಿದೆ.
ಇದರಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಮಳೆಯಿಂದ ಶಿಥಿಲಗೊಂಡಿದ್ದ ಮನೆಗಳು ನೆಲಕ್ಕುರುಳಿವೆ.
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಬಂದಗಿಸಾಬ್ ರಸೂಲಸಾಬ್ ಡೋಂಗಾ ಅವರ ಮನೆಯ ಮೂರು ಕೋಣೆಗಳು ಮಳೆಯಿಂದಾಗಿ ಉರುಳಿ ಬಿದ್ದಿವೆ.
ಕಮಲಾಪುರ ತಾಲ್ಲೂಕಿನಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ವಿವಿಧ ಹಳ್ಳ, ನಾಲೆಗಳು ತುಂಬಿ ಹರಿಯುತ್ತಿದ್ದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆ ಮೇಲೆ ಪ್ರವಾಹ ಉಂಟಾಗಿದೆ. ತಾಲ್ಲೂಕಿನ ಕುದಮೂಡ ಹಳ್ಳದ ಮೇಲೂ ಉಂಟಾಗಿದ್ದು, ಇಂದು ಬೆಳಿಗ್ಗೆ ರೈತರು ತಮ್ಮ ಜಾನುವಾರುಗಳನ್ನು ದಾಟಿಸಿದರು. ಕೆಲ ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಮಕ್ಕಳು ಪ್ರವಾಹ ಕಡೆ ತೆರಳುತ್ತಿದ್ದ ದೃಶ್ಯ ಸಹ ಕಂಡುಬಂದಿದೆ.
ಚಿಂಚೋಳಿ ಹಾಗೂ ಕಾಳಗಿ ತಾಲ್ಲೂಕಿನಾದ್ಯಂತ ಭಾರಿ ಮಳೆಗೆ ಜನರು ಮನೆಯಿಂದ ಹೊರಗಡೆ ಬರಲು ಆಗುತ್ತಿಲ್ಲ. ಮಳೆಯಲ್ಲೇ ಮಕ್ಕಳು ಶಾಲೆಗಳಿಗೆ ತೆರಳಿದರು.
ಸೇಡಂ ತಾಲ್ಲೂಕಿನಾದ್ಯಂತ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸ್ಥಳೀಯ ಶಾಸಕರೂ ಆದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.