ADVERTISEMENT

ಕಲಬುರ್ಗಿಯಲ್ಲಿ ಅಬ್ಬರದ ಮಳೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 8:39 IST
Last Updated 21 ಆಗಸ್ಟ್ 2020, 8:39 IST
ಕಲಬುರ್ಗಿಯ ಸ್ಟೇಷನ್ ರಸ್ತೆಯ ಆರ್ಚಿಡ್ಸ್ ಮಾಲ್ ಬಳಿ ಗುರುವಾರ ಸಂಜೆ ಸುರಿದ ಧಾರಾಕಾರ ಮಳೆಯಲ್ಲೇ ವಾಹನಗಳು ಸಾಗಿದವು
ಕಲಬುರ್ಗಿಯ ಸ್ಟೇಷನ್ ರಸ್ತೆಯ ಆರ್ಚಿಡ್ಸ್ ಮಾಲ್ ಬಳಿ ಗುರುವಾರ ಸಂಜೆ ಸುರಿದ ಧಾರಾಕಾರ ಮಳೆಯಲ್ಲೇ ವಾಹನಗಳು ಸಾಗಿದವು   

ಕಲಬುರ್ಗಿ: ನಗರದಲ್ಲಿ ಗುರುವಾರ ಸಂಜೆ ಒಂದು ತಾಸು ಅಬ್ಬರದ ಮಳೆ ಸುರಿಯಿತು. ಇದರಿಂದಾಗಿ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಪ್ರಯಾಸ ಪಡಬೇಕಾಯಿತು.

ಬೆಳಿಗ್ಗೆಯಿಂದಲೇ ಜಿಟಿ ಜಿಟಿ ಮಳೆ ಇತ್ತು. ಸಂಜೆಯಾಗುತ್ತಿದ್ದಂತೆಯೇ ಒಂದೇ ಸಮನೆ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಮಳೆಯಲ್ಲಿ ಸಿಲುಕಿಕೊಂಡ ಬಹುತೇಕ ಜನರು ನೆನೆದು ಮನೆ ಸೇರಿದರು.

ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು ಮಾರಾಟಗಾರರೂ ತಮ್ಮ ಉತ್ಪನ್ನಗಳನ್ನು ಬಿಟ್ಟು ಆಸರೆ ಹುಡುಕಿಕೊಂಡು ಹೋದರು. ಭಾರಿ ಪ್ರಮಾಣದ ಹನಿಗಳು ಸುರಿಯುತ್ತಿದ್ದುದರಿಂದ ರಸ್ತೆ ಕಾಣದ್ದಕ್ಕಾಗಿ ಕಾರು ಚಾಲಕರು ಹೆಡ್‌ಲೈಟ್‌ಗಳನ್ನು ಉರಿಸಿಕೊಂಡೇ ಮುಂದೆ ಸಾಗಿದರು. ಮಳೆ ನೀರಲ್ಲೇ ವಾಹನಗಳು ಸಾಗಿದ್ದರಿಂದ ಎಂಜಿನ್‌ಗಳಿಗೆ ಹಾನಿಯಾಯಿತು.

ADVERTISEMENT

ಜಿಲ್ಲೆಯ ಸೇಡಂ, ಕಾಳಗಿ, ಚಿಂಚೋಳಿ, ಕಮಲಾಪುರ, ಅಫಜಲಪುರ, ಯಡ್ರಾಮಿ ತಾಲ್ಲೂಕಿನ ಹಲವೆಡೆ ಜಡಿ ಮಳೆ ಸುರಿದಿದೆ.

ಚಿಂಚೋಳಿ ತಾಲ್ಲೂಕಿನ ಚಿಕ್ಕಲಿಂಗದಳ್ಳಿ, ಕೋಡ್ಲಿ–ಅಲ್ಲಾಪುರ, ಮುಕರಂಬಾ ಕೆರೆಗಳು ಭರ್ತಿ. ತುಮಕುಂಟಾ, ಹೂಡದಳ್ಳಿ, ಹಸರಗುಂಡಗಿ ಕೆರೆ ಭರ್ತಿ ಅಂಚಿನಲ್ಲಿವೆ. ಸಾಲೇಬೀರನಹಳ್ಳಿ ಕೆರೆಗೆ 35 ಅಡಿ ನೀರು ಬಂದಿದೆ. ಚಂದ್ರಂಪಳ್ಳಿ ಜಲಾಶಯಕ್ಕೆ 515 ಕ್ಯುಸೆಕ್ ಒಳ ಹರಿವಿದ್ದು, ನೀರಿನ ಮಟ್ಟ 1605 ಅಡಿ ತಲುಪಿದೆ.

ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಆಳಂದ ತಾಲ್ಲೂಕಿನ ಅಮರ್ಜಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದೆ. ಜಲಾಶಯ ಭರ್ತಿಯಾಗುವ ಸಂಭವವಿದ್ದು, ಯಾವುದೇ ಕ್ಷಣದಲ್ಲಿ ಅಮರ್ಜಾ ನದಿಗೆ ನೀರು ಹರಿಸಲಾಗುವುದು ಎಂದು ಅಮರ್ಜಾ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಸೂರ್ಯಕಾಂತ ಮಾಲೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.