ADVERTISEMENT

ಕಲಬುರಗಿ | ಭಾರಿ ಮಳೆ ಸಾಧ್ಯತೆ: ಮುನ್ನೆಚ್ಚರಿಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಮೇ 2025, 15:36 IST
Last Updated 27 ಮೇ 2025, 15:36 IST

ಕಲಬುರಗಿ: ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಭಾರಿ ಮಳೆ/ ಪ್ರವಾಹ ಕುರಿತು ಜಿಲ್ಲಾ, ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚಿಸಿದ್ದಾರೆ.

ಹವಾಮಾನ ಇಲಾಖೆಯ ವರದಿಯನ್ವಯ ಮೇ 24ರಂದು ನೈಋತ್ಯ ಮಾನ್ಸೂನ್ (ಮುಂಗಾರು ಹಂಗಾಮು) ಕೇರಳ ಪ್ರವೇಶಿಸಿದ್ದು, ಈ ವರ್ಷ ವಾಡಿಕೆಗಿಂತ 8 ದಿನಗಳ ಮುಂಚಿತವಾಗಿ ಕೇರಳ ಪ್ರವೇಶಿಸಿದೆ. ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು, ಪ್ರವಾಹ/ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ನದಿ, ಹಳ್ಳ, ಕೆರೆ ದಡದಲ್ಲಿ ಬಟ್ಟೆ ತೊಳೆಯಬಾರದು. ಈಜಾಡಬಾರದು. ದನ–ಕರುಗಳನ್ನು ಮೇಯಿಸಬಾರದು. ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸಬಾರದು ಹಾಗೂ ಇತರೆ ಚಟುವಟಿಕೆಗಳು ನಡೆಸದಂತೆ ಕ್ರಮವಹಿಸಬೇಕು. ನಿರಂತರ ಮಳೆಯಿಂದ ಅಪಾಯವಿರುವ ಮನೆ ಗೋಡೆ, ಶಾಲೆಗಳು ಹಾಗೂ ಇತರೆ ಕಟ್ಟಡಗಳ ಕುಸಿಯುವ ಸಾಧ್ಯತೆ ಇದ್ದು, ಇದರಿಂದ ಸಾವು ನೋವುಗಳು ಸಂಭವಿಸುವ ಸಂದರ್ಭವಿರುವುದರಿಂದ ಸಾರ್ವಜನಿಕರಿಗೆ ಸುರಕ್ಷತೆಯ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ.

ADVERTISEMENT

ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರಬೇಕು. ಮೈಕ್ ಮೂಲಕ ಜಾಗೃತಿ ಮೂಡಿಸಬೇಕು. ಭಾರಿ ಮಳೆ ಅಥವಾ ಪ್ರವಾಹದಿಂದ ಹಾನಿಯಾದ ಬಗ್ಗೆ ಪ್ರಾಥಮಿಕ ವರದಿಯನ್ನು ಪ್ರತಿದಿನ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ತುರ್ತು ಪರಿಹಾರಕ್ಕಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ಈ ಸಂಖ್ಯೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5.30 ರವರೆಗೆ ಸಂಪರ್ಕಿಸಬೇಕು.

ಜಿಲ್ಲಾ ವಿಪತ್ತು ತುರ್ತು ನಿರ್ವಾಹಣಾ ಕೇಂದ್ರದ ದೂ. 08472-278677 ಅಥವಾ 1077 (ಜಿಲ್ಲಾಧಿಕಾರಿ ಕಚೇರಿ) ಹಾಗೂ ಮಹಾನಗರ ಪಾಲಿಕೆ ಸಹಾಯವಾಣಿ 08472-241364, 6363544601 ಸಂಖ್ಯೆಗಳಿಗೆ ಸಂಪರ್ಕಿಸಬೇಕು.

ತಾಲ್ಲೂಕುವಾರು ಸ್ಥಾಪಿಸಿದ ಸಹಾಯವಾಣಿ ಸಂಖ್ಯೆಯ ವಿವರ ಇಂತಿದೆ. ಆಳಂದ ತಹಶೀಲ್ದಾರ್‌ ಕಾರ್ಯಾಲಯ ಮೊ. 9448135593, ಅಫಜಲಪುರ-7760208044, ಚಿತ್ತಾಪುರ-9448652111, ಚಿಂಚೋಳಿ-9591499501, ಕಾಳಗಿ-9980034461, ಕಲಬುರಗಿ ತಹಶೀಲ್ದಾರ್‌ ಕಚೇರಿ-9731631298, ಕಮಲಾಪುರ-9986324648, ಜೇವರ್ಗಿ-7019270898, ಯಡ್ರಾಮಿ-9538559509, ಶಾಹಾಬಾದ್‌-8152093789 ಹಾಗೂ ಸೇಡಂ ತಹಶೀಲ್ದಾರ್‌ ಕಚೇರಿ-6361376048 ಸಂಖ್ಯೆಗಳಿಗೆ ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.

157 ಗ್ರಾಮಗಳಿಗೆ ನೋಡಲ್ ಅಧಿಕಾರಿ ನೇಮಿಸಿ ಡಿ.ಸಿ. ಆದೇಶ

ಕಲಬುರಗಿ: ಮಳೆಯಿಂದ ಪ್ರವಾಹ, ಅತಿವೃಷ್ಟಿ ಉಂಟಾದಲ್ಲಿ ತುರ್ತು ಪರಿಹಾರಕ್ಕೆ ಮತ್ತು ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಜಿಲ್ಲೆಯ ಭೀಮಾ ಮತ್ತು ಕಾಗಿಣಾ ನದಿ ಪಾತ್ರದ ಸುಮಾರು 157 ಸಂಭಾವ್ಯ ಪ್ರವಾಹ ಪೀಡಿತ ಗ್ರಾಮಗಳಿಗೆ 27 ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ.

ನೋಡಲ್ ಅಧಿಕಾರಿಗಳು ಭೀಮಾ ಮತ್ತು ಕಾಗಿಣಾ ನದಿ ಪ್ರದೇಶಗಳಲ್ಲಿರುವ ಜಲಾಶಯಗಳ ನೀರಿನ ಮಟ್ಟ ಸಂಗ್ರಹಣಾ, ಒಳಹರಿವು ಮತ್ತು ಹೊರ ಹರಿವು ಕ್ಷಣ-ಕ್ಷಣದ ಮಾಹಿತಿಯನ್ನು ಪಡೆದುಕೊಂಡು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮ ವಹಿಸಲು ತಿಳಿಸಬೇಕು. ಪ್ರವಾಹ ಸಂಭವಿಸಿದಲ್ಲಿ ಗ್ರಾಮದ ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಕಾಳಜಿ ಕೇಂದ್ರಗಳು ತೆರೆದು ಅವರಿಗೆ ಊಟೋಪಚಾರ ಉಸ್ತುವಾರಿ ನೋಡಿಕೊಳ್ಳುವಂತೆ ತಿಳಿಸಲಾಗಿದೆ.

ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರು, ಪಿಡಿಒ, ವಿಎಒ ಜೊತೆ ಸಮನ್ವಯದೊಂದಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವ ಸಂತ್ರಸ್ತರಿಗೆ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟ ಪೂರೈಕೆ, ಎನ್‌ಡಿಆರ್‌ಎಫ್/ ಎಸ್‌ಡಿಆರ್‌ಎಫ್ ನಿಯಮಾವಳಿಯಂತೆ ಸಂತ್ರಸ್ತರಿಗೆ ತ್ವರಿತವಾಗಿ ಆರ್ಥಿಕ ನೆರವು ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.