ADVERTISEMENT

ಕಲಬುರ್ಗಿ ನಗರದಲ್ಲಿ ಹೆಚ್ಚಿದ ವಾಹನ ಸಂಚಾರ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 10:36 IST
Last Updated 31 ಮಾರ್ಚ್ 2020, 10:36 IST
ಕಲಬುರ್ಗಿಯ ಸೂಪರ್‌ ಮಾರ್ಕೆಟ್‌ ರಸ್ತೆಯಲ್ಲಿ ಸೋಮವಾರ ಕಂಡುಬಂದ ವಾಹನಗಳ ಓಡಾಟ
ಕಲಬುರ್ಗಿಯ ಸೂಪರ್‌ ಮಾರ್ಕೆಟ್‌ ರಸ್ತೆಯಲ್ಲಿ ಸೋಮವಾರ ಕಂಡುಬಂದ ವಾಹನಗಳ ಓಡಾಟ   

ಕಲಬುರ್ಗಿ: ನಗರದಲ್ಲಿ ಸೋಮವಾರ (ಮಾರ್ಚ್‌ 30) ಬೆಳಿಗ್ಗೆ ಹಾಗೂ ಸಂಜೆ ವಾಹನಗಳ ಓಡಾಟ ಹೆಚ್ಚಾಗಿದ್ದು ಕಂಡುಬಂತು. ಇಲ್ಲಿನ ಸ್ಟೇಷನ್‌ ರಸ್ತೆ, ಕೋರ್ಟ್‌ ರೋಡ್‌, ಸೇಡಂ ಮಾರ್ಗ, ರಿಂಗ್‌ ರಸ್ತೆ, ಆಳಂದ ನಾಕಾ, ಸೂಪರ್‌ ಮಾರ್ಕೆಟ್‌ ಮುಂತಾದ ಬಡಾವಣೆಗಳಲ್ಲಿ ಕೂಡ ಬೈಕ್‌, ಕಾರ್‌, ಟೆಂಪೊಗಳು ಸಂಚರಿಸುತ್ತಿರುವುದು ಸಾಮಾನ್ಯವಾಗಿತ್ತು.

ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಿ ಸೋಮವಾರಕ್ಕೆ ಬರೋಬ್ಬರಿ 18 ದಿನ ಮುಗಿದಿವೆ. ಆದರೂ ಆಗೊಮ್ಮೆ– ಈಗೊಮ್ಮೆ ವಾಹನಗಳ ಓಡಾಟ ನಡೆದೇ ಇತ್ತು. ದೇಶವನ್ನೇ ಲಾಕ್‌ಡೌನ್‌ ಎಂದು ಘೋಷಿಸಿದ ಮೇಲೆ ಹೆಚ್ಚು ಗಂಭೀರ ಸ್ವರೂ‍ಪ ಪಡೆಯಿತು. ಸಕಾರಣವಿಲ್ಲದೇ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಇದರಿಂದ ಕಳೆದ ವಾರದಿಂದ ವಾಹನ ದಟ್ಟಣೆ ಪೂರ್ಣ ತಗ್ಗಿತ್ತು.

ಕಲಬುರ್ಗಿಯಲ್ಲಿ ಕೋವಿಡ್‌–19 ಸೋಂಕಿನಿಂದ ಮೊಹಮ್ಮದ್‌ ಸಿದ್ದಿಕಿ ಅವರು ಮೃತಪಟ್ಟು 20 ದಿನಗಳು ಕಳೆದಿವೆ. ಅವರಿಂದ ಇನ್ನಿಬ್ಬರಿಗೆ ಸೋಂಕು ತಗುಲಿ 18 ದಿನಗಳು ಮುಗಿದಿವೆ. ಹೊಸ ಪ್ರಕರಣಗಳು ಕಂಡುಬಂದಿಲ್ಲ. ಸೋಂಕಿತರೊಂದಿಗೆ ನೇರ ಸಂಪರ್ಕಕ್ಕೆ ಬಂದ 99 ಮಂದಿ ಹಾಗೂ ಪರೋಕ್ಷ ಸಂಪರ್ಕಿಸಿದ 388 ಮಂದಿಯ ಆರೋಗ್ಯ 18 ದಿನಗಳ ನಂತರವೂ ಸ್ಥಿರವಾಗಿದೆ. ಈ ಬೆಳವಣಿಗೆ ಜಿಲ್ಲೆಯ ಜನರಲ್ಲಿ ತುಸು ನೆಮ್ಮದಿ ಮೂಡಿಸಿದೆ.

ADVERTISEMENT

ಇದರೊಂದಿಗೆ ಕೋವಿಡ್‌ ತಗುಲಿದ್ದ ಸಿದ್ದಿಕಿ ಅವರ 45 ವರ್ಷದ ಪುತ್ರಿ ಕೂಡ ಸಂಪೂರ್ಣವಾಗಿ ಗುಣಮುಖರಾಗಿ, ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 14 ದಿನಗಳ ಹೋಂ ಕ್ವಾರಂಟೈನ್‌ ಆಗಿದ್ದ ಹಲವರು ಕೂಡ ಈಗ ‘ಸ್ವಚ್ಛಂದ ಹಕ್ಕಿ’ಗಳಾಗಿದ್ದಾರೆ. ಇದರಿಂದ ಇಡೀ ಜಿಲ್ಲೆಯಲ್ಲಿ ನೆಮ್ಮದಿಯ ತಂಗಾಳಿ ಬೀಸಿದಂತಾಗಿದೆ.

ಈ ಎಲ್ಲ ಮಾಹಿತಿಗಳು ಮಾಧ್ಯಮಗಳ ಮೂಲಕ ಹರಿದಾಡಿದ್ದರಿಂದ ನಗರದ ಜನ ತುಸು ನಿರುಮ್ಮಳವಾಗಿದ್ದಾರೆ. ಭಾನುವಾರ ಹಲವರು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಹೊರಬಂದಿದ್ದರು. ಸೋಮವಾರ ಅವರ ಸಂಖ್ಯೆ ಮತ್ತಷ್ಟು ಹೆಚ್ಚಿತ್ತು.

ನಗರದಲ್ಲಿ ಅಲ್ಲಲ್ಲಿ ಕೆಲವರು ದಿನಸಿ ಮಳಿಗೆಗಳನ್ನು ತೆರೆದು ವ್ಯಾಪಾರ ಶುರು ಮಾಡಿದ್ದರು. ಆದರೆ, ಸ್ಥಳಕ್ಕೆ ಬಂದ ಪೊಲೀಸರು 21 ದಿನಗಳ ಅವಧಿ ಮುಗಿಯುವವರೆಗೂ ಅಂಗಡಿ ತೆರೆಯದಂತೆ ತಾಕೀತು ಮಾಡಿ ಮುಚ್ಚಿಸಿದರು. ಅಡ್ಡರಸ್ತೆಗಳಲ್ಲಿ ಮಳಿಗೆಗಳು ಸಾಮಾನ್ಯವಾಗಿ ವ್ಯಾಪಾರ ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.