ಜೇವರ್ಗಿ: ‘ಅಂಗವಿಕಲರ ಬಗ್ಗೆ ಅನುಕಂಪ ತೋರುವುದಕ್ಕಿಂತ ಅವರಿಗೆ ನೆರವು ನೀಡಿದರೆ ಸಮಾಜದ ಮುಖ್ಯವಾಹಿನಿಗೆ ಬರಲು ಅನುಕೂಲವಾಗುತ್ತದೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್ ಹೇಳಿದರು.
ಪಟ್ಟಣದ ಟೌನ್‌ಹಾಲ್‌ನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಅಂಗವಿಕಲರ ಆರ್.ಪಿ.ಡಿ ಟಾಸ್ಕ್ ಫೋರ್ಸ್ ಸಮಿತಿ, ಜಿಲ್ಲಾ ಅಂಗವಿಕಲರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವವಿಕಲಚೇತನರ ದಿನಾಚರಣೆ ಮತ್ತು ಅರಿವು ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಅಂಗವಿಕಲತೆ ವರವೂ ಅಲ್ಲ, ಶಾಪವೂ ಅಲ್ಲ, ನಿಮಗೆಲ್ಲ ಅದೊಂದು ದೇವರು ಕೊಟ್ಟ ಪರೀಕ್ಷೆ. ತಮ್ಮಲ್ಲಿ ಅದ್ಭುತ ಶಕ್ತಿಯೊಂದಿದೆ. ಅಂಗವಿಕಲರು ಯಾರಿಗೇನೂ ಕಮ್ಮಿಯಿಲ್ಲ ಎಂಬಂತೆ ಶಿಕ್ಷಣ, ಕ್ರೀಡೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಅಭಿಮಾನದ ಸಂಗತಿ. ಸರ್ಕಾರ ಸ್ಥಳೀಯ ಸಂಸ್ಥೆಗಳ ಮೂಲಕ ಅವರಿಗಾಗಿ ಪ್ರತ್ಯೇಕ ಅನುದಾನ ಕಾದಿರಿಸಿ ನೆರವು ನೀಡುತ್ತಿದೆ’ ಎಂದರು.
‘ಜೇವರ್ಗಿ-ಯಡ್ರಾಮಿ ತಾಲ್ಲೂಕಿನಲ್ಲಿ ವಿವಿಧ ಯೋಜನೆಗಳಡಿ 100 ದ್ವಿಚಕ್ರ ವಾಹನಗಳನ್ನು ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಇನ್ನೂ 100 ದ್ವಿಚಕ್ರ ವಾಹನಗಳನ್ನು ಉಚಿತವಾಗಿ ನೀಡಲಾಗುವುದು. ಪ್ರಭಾವ ಬಳಸಿ ತೆಗೆದುಕೊಳ್ಳುವುದಕ್ಕಿಂತ, ಅತೀ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಸೌಲಭ್ಯ ಸಿಗುವಂತಾಗಬೇಕು’ ಎಂದರು.
ಇದೇ ವೇಳೆ 2024-25ನೇ ಸಾಲಿನ ತಾಲ್ಲೂಕು ಪಂಚಾಯಿತಿಯ ಅನಿರ್ಬಂಧಿತ ಅನುದಾನದಲ್ಲಿ ಬ್ಯಾಟರಿ ಚಾಲಿತ ಸೈಕಲ್‌ಗಳನ್ನು ವಿತರಣೆ ಮಾಡಲಾಯಿತು.
ಸೊನ್ನದ ಶಿವಾನಂದ ಸ್ವಾಮೀಜಿ, ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ, ಯರಗಲ್ ಮಠದ ನವನಾಥ ಸಿದ್ಧಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ತಾಪಂ ಇಒ ರವಿಚಂದ್ರರೆಡ್ಡಿ ಲಕ್ಕುಂಡಿ, ವಿಜಯಕುಮಾರ ಹಿರೇಮಠ, ಕಾಶೀರಾಯಗೌಡ ಯಲಗೋಡ ಆಗಮಿಸಿದ್ದರು.
ಅಂಗವಿಕಲರ ಸಂಘದ ರಾಜ್ಯಾಧ್ಯಕ್ಷ ಸುರೇಶ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶ್ವರ ಬಿರಾಳ, ಯಡ್ರಾಮಿ ಘಟಕದ ಅಧ್ಯಕ್ಷ ಹಣಮಂತ್ರಾಯ ಕುರಳಗೇರಾ ನೇತೃತ್ವ ವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಸೈದಪ್ಪ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಯಾದಗಿರಿ ಎಪಿಡಿ ಸಂಸ್ಥೆ ಸಂಯೋಜಕ ನಾಗರಾಜ ಅವಂಟಿ ವಿಶೆಷ ಉಪನ್ಯಾಸ ನೀಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಅಂಗವಿಕಲ ಸಾಧಕರನ್ನು ಶಾಸಕ ಡಾ.ಅಜಯಸಿಂಗ್ ಸನ್ಮಾನಿಸಿದರು.
ವಿನಾಯಕ ಆಂದೋಲಾ ಸ್ವಾಗತಿಸಿದರು, ರಾಮು ಚನ್ನೂರ ನಿರೂಪಿಸಿದರು, ಸಿದ್ದಪ್ಪ ವಾಗಣಗೇರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.