ADVERTISEMENT

ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:25 IST
Last Updated 23 ಏಪ್ರಿಲ್ 2025, 15:25 IST
ಕಲಬುರಗಿ ಹೈಕೋರ್ಟ್‌ ಪೀಠದ ಹೈಕೋರ್ಟ್‌ ಬಾರ್‌ ಅಸೋಸಿಯೇಷನ್‌ ಹಾಲ್‌ನಲ್ಲಿ ಬುಧವಾರ ಗುಲಬರ್ಗಾ ನ್ಯಾಯವಾದಿಗಳ ಸಂಘ ಹೈಕೋರ್ಟ್‌ ಘಟಕದ ವಕೀಲರು ಪ್ರತಿಭಟನೆ ನಡೆಸಿದರು
ಕಲಬುರಗಿ ಹೈಕೋರ್ಟ್‌ ಪೀಠದ ಹೈಕೋರ್ಟ್‌ ಬಾರ್‌ ಅಸೋಸಿಯೇಷನ್‌ ಹಾಲ್‌ನಲ್ಲಿ ಬುಧವಾರ ಗುಲಬರ್ಗಾ ನ್ಯಾಯವಾದಿಗಳ ಸಂಘ ಹೈಕೋರ್ಟ್‌ ಘಟಕದ ವಕೀಲರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಿದ್ದನ್ನು ವಿರೋಧಿಸಿ ಕಲಬುರಗಿ ಹೈಕೋರ್ಟ್‌ ಪೀಠದ ಹೈಕೋರ್ಟ್‌ ಬಾರ್‌ ಅಸೋಸಿಯೇಷನ್‌ ಹಾಲ್‌, ಕೋರ್ಟ್ ಮುಂಭಾಗದಲ್ಲಿ ಬುಧವಾರ ಗುಲಬರ್ಗಾ ನ್ಯಾಯವಾದಿಗಳ ಸಂಘ ಹೈಕೋರ್ಟ್‌ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ನ್ಯಾಯಮೂರ್ತಿಗಳಾದ ಕೆ.ನಟರಾಜನ್, ಹೇಮಂತ ಚಂದನ ಗೌಡರ್, ಎನ್‌.ಎಸ್‌. ಸಂಜಯಗೌಡ ಹಾಗೂ ಕೃಷ್ಣ ಎಸ್‌. ದೀಕ್ಷಿತ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದ್ದನ್ನು ವಕೀಲರು ವಿರೋಧಿಸಿದರು. ದಿನದ ಕಲಾಪಗಳನ್ನು ಬಹಿಷ್ಕರಿಸಿದ ವಕೀಲರು ಪ್ರತಿಭಟನೆಯಲ್ಲಿ ಭಾಗಿಯಾದರು.

ಈ ವೇಳೆ ಸಂಘದ ಅಧ್ಯಕ್ಷ ಗುಪ್ತಲಿಂಗ ಎಸ್.ಪಾಟೀಲ ಮಾತನಾಡಿ, ‘ಈ ನಾಲ್ವರು ನ್ಯಾಯಮೂರ್ತಿಗಳು ಜನರಿಗೆ ಹಾಗೂ ವಕೀಲರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತ್ವರಿತವಾಗಿ ವಿಚಾರಣೆ ನಡೆಸಿ, ನ್ಯಾಯದಾನ ಮಾಡಿದ್ದಾರೆ. ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಿದರೆ ರಾಜ್ಯದಲ್ಲಿನ ಪ್ರಕರಣಗಳ ವಿಚಾರಣೆ ಹಾಗೂ ನ್ಯಾಯದಾನಕ್ಕೆ ವಿಳಂಬ ಆಗಲಿದೆ’ ಎಂದರು.

ADVERTISEMENT

‘ವರ್ಗಾವಣೆಯಾಗಿರುವ ನಾಲ್ವರ ಸ್ಥಾನದಲ್ಲಿ ಬೇರೆ ರಾಜ್ಯಗಳಿಂದ ನ್ಯಾಯಮೂರ್ತಿಗಳು ಬಂದರೆ ಕೆಲವು ವಕೀಲರಿಗೆ ಭಾಷೆಯ ಸಮಸ್ಯೆ ಆಗಲಿದೆ. ಪ್ರತಿಯೊಂದು ಪ್ರಕರಣವನ್ನು ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿ ಕೊಡಬೇಕಾಗುತ್ತದೆ. ಕರ್ನಾಟಕದವರೇ ಇದ್ದರೆ ಭಾಷೆಯ ಸಮಸ್ಯೆ ದೂರಾಗಿ, ಕನ್ನಡದಲ್ಲಿಯೇ ವಿಚಾರಣೆ ನಡೆಸಲು ಅನುಕೂಲ ಆಗುತ್ತದೆ. ಹೀಗಾಗಿ, ರಾಜ್ಯ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳು ಈ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆಯನ್ನು ಮರುಪರಿಶೀಲಿಸಬೇಕು. ಕರ್ನಾಟಕದಲ್ಲಿಯೇ ಅವರ ಸೇವೆಯನ್ನು ಮುಂದುವರೆಸಬೇಕು’ ಎಂದು ಕೋರಿದರು.

ಪ್ರತಿಭಟನೆಯಲ್ಲಿ ವಕೀಲರಾದ ಶಿವಾನಂದ ಪಾಟೀಲ, ರಾಘವೇಂದ್ರ ಸಿದ್ದಾಪುರಕರ್, ಸಚಿನ್ ಮಹಾಜನ್, ಅರುಣ ಚೌಡಾಪುರಕರ್, ಶಿವಕುಮಾರ ಕಲ್ಲೂರ, ಶಿವಕುಮಾರ ಮಾಲಿ ಪಾಟೀಲ, ಶ್ರವಣಕುಮಾರ್ ಹಿರೇಮಠ, ರತ್ನಾ ಶಿವಯೋಗಿ ಮಠ, ಸಂಗೀತಾ ಭದ್ರಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.