ಕಲಬುರಗಿ: ನಗರದ ರೈಲ್ವೆ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತರೊಬ್ಬರು ಕರೆ ಮಾಡಿದ ಬೆನ್ನಲ್ಲೇ ಸ್ಥಳೀಯ ಪೊಲೀಸರು ದಿಢೀರ್ ಧಾವಿಸಿ, ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸಿದರು.
ನಗರದ ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ಮಂಗಳವಾರ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣವೇ ನಗರದ ಸ್ಟೇಷನ್ ಬಜಾರ್ ಪೊಲೀಸರು, ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಸಿಬ್ಬಂದಿ ರೈಲ್ವೆ ನಿಲ್ದಾಣಕ್ಕೆ ಧಾವಿಸಿದರು. ಸಮಗ್ರ ತಪಾಸಣೆಯನ್ನೂ ನಡೆಸಿದರು.
ಬೆಂಗಳೂರಿನ ‘112’ಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ಹೇಳಿದ್ದಾನೆ. ಬೆಂಗಳೂರಿನ ಪೊಲೀಸ್ ಅಧಿಕಾರಿಗಳು ಕಲಬುರಗಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಸಮಗ್ರ ಪರಿಶೀಲನೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಎನ್ನುವುದು ಬೆಳಕಿಗೆ ಬಂದಿದೆ. ಈ ಬೆನ್ನಲ್ಲೆ ಹುಸಿಬಾಂಬ್ ಕರೆ ಮಾಡಿದ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
‘ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಹುಸಿ ಬಾಂಬ್ ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ಶ್ವಾನ ದಳ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ (ಬಿಡಿಡಿಎಸ್) ಮತ್ತು ವಿಧ್ವಂಸಕ ಕೃತ್ಯ ತಪಾಸಣೆ ದಳ (ಎಎಸ್‌ಸಿ) ತಂಡವು ಸ್ಥಳ ಪರಿಶೀಲಿಸಿತು. ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಕರೆ. ಹುಸಿ ಬಾಂಬ್ ಕರೆ ಮಾಡಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದೊಂದು ಸುಳ್ಳು ಹುಸಿ ಬಾಂಬ್ ಬೆದರಿಕೆಯಾದ್ದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ’ ಎಂದು ನಗರ ಪೊಲೀಸ್ ಕಮಿಷನರೇಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಹುಸಿಬಾಂಬ್ ಕರೆ ಬೆನ್ನಲ್ಲೆ ಶ್ವಾನದಳ ಬಾಂಬ್ ಪತ್ತೆ–ನಿಷ್ಕ್ರಿಯ ದಳದ ಅಧಿಕಾರಿಗಳು ಸಂಪೂರ್ಣವಾಗಿ ತಪಾಸಣೆ ನಡೆಸಿದ್ದು ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲಶರಣಪ್ಪ ಎಸ್.ಡಿ, ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.