ADVERTISEMENT

ಕಲಬುರಗಿ ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಸಂಭ್ರಮ

ಎಲ್ಲೆಡೆ ಕಾಮದಹನ: ಬಣ್ಣಗಳಲ್ಲಿ ಮಿಂದೆದ್ದ ಯುವ ಸಮೂಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 15:30 IST
Last Updated 25 ಮಾರ್ಚ್ 2024, 15:30 IST
ಕಲಬುರಗಿಯ ಶಹಾಬಜಾರ್‌ ಬಳಿಯ ಕಟಘರಪುರದಲ್ಲಿ ಯುವಕರು ಪರಸ್ಪರ ಬಣ್ಣದ ನೀರು ಎರಚಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು
ಕಲಬುರಗಿಯ ಶಹಾಬಜಾರ್‌ ಬಳಿಯ ಕಟಘರಪುರದಲ್ಲಿ ಯುವಕರು ಪರಸ್ಪರ ಬಣ್ಣದ ನೀರು ಎರಚಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು   

ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಹೋಳಿ ಹಬ್ಬದ ಸಂಭ್ರಮ ಕಂಡುಬಂತು. ಯುವಕ–ಯುವತಿಯರು, ಮಕ್ಕಳು ಪರಸ್ಪರ ಬಣ್ಣ ಎರಚಿ ಬಣ್ಣಗಳ ರಂಗಿನಲ್ಲಿ ಮಿಂದೆದ್ದರು.

ಕತ್ತಲು ಕಳೆದು ಬೆಳಕು ಮೂಡುತ್ತಿದ್ದಂತೆ ಮಕ್ಕಳು ಬಣ್ಣದಾಟ ಆಡಿದರು. ಪೋಷಕರು ತಂದಿದ್ದ ವಿವಿಧ ಬಣ್ಣಗಳನ್ನು ಪಿಚಕಾರಿಗಳಲ್ಲಿ ನೀರಿನೊಂದಿಗೆ ಹಾಕಿ ಪರಸ್ಪರ ಎರಚಿ ಸಂಭ್ರಮಪಟ್ಟರು. ಮಕ್ಕಳ ಸಂಭ್ರಮದಲ್ಲಿ ಪೋಷಕರು ಭಾಗಿಯಾಗಿ, ಸಕ್ಕರೆಯ ಬತ್ತಾಸಿನ ಸರ ಕೊರಳಲ್ಲಿ ಹಾಕಿ ಸಂತಸಪಟ್ಟರು. ಇನ್ನು ಯುವಕರು ತಮ್ಮ ಗೆಳೆಯರ ಮನೆಗಳಿಗೆ ತೆರಳಿ ಬಣ್ಣ ಹಚ್ಚಿದರು.

ಎಲ್ಲ ವಯೋಮಾನದವರು ಬಣ್ಣದೋಕುಳಿಯಲ್ಲಿ ಪಾಲ್ಗೊಂಡಿದ್ದರು. ಮಾರುಕಟ್ಟೆಯಿಂದ ತಂದಿದ್ದ ಬಣ್ಣದ ಪುಡಿಯನ್ನು ಕೈಯಲ್ಲಿ ಹಾಕಿಕೊಂಡು ಅದಕ್ಕೆ ಸ್ಪಲ್ಪ ನೀರು ಮಿಶ್ರಣ ಮಾಡಿ ಸ್ನೇಹಿತರು, ಪರಿಚಯಸ್ಥರ ಮುಖಕ್ಕೆ ಹಚ್ಚಿದರು. ಮಹಿಳೆಯರು ಕುಟುಂಬಸ್ಥರೊಂದಿಗೆ ಹಾಗೂ ಅಕ್ಕಪಕ್ಕದ ಮನೆಗಳ ಸ್ತ್ರೀಯರೊಂದಿಗೆ ಹೋಳಿ ಆಚರಿಸಿದರು. ರೋಟರಿ ಕ್ಲಬ್‌, ಜಸ್ಟ್‌ ಕ್ಲಬ್‌ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಸದಸ್ಯರೂ ಪರಸ್ಪರ ಗುಲಾಲು ಎರಚಿದರು. ಬಣ್ಣ ಹಚ್ಚಿ ಸಂಭ್ರಮಿಸಿದರು.

ADVERTISEMENT

ಮಧ್ಯಾಹ್ನದ ನಂತರ ಹಳ್ಳಿಗಳಲ್ಲಿ ಯುವಕರು ಸ್ನಾನಕ್ಕಾಗಿ ಸಮೀಪದ ಕೆರೆ, ನದಿಗಳಿಗೆ ತೆರಳಿದರೆ, ನಗರದ ಜನ ಮನೆಯಲ್ಲಿಯೇ ಸ್ನಾನ ಮುಗಿಸಿದರು. ಕೆಲವರು ಪರಿಚಿತರ ತೋಟದ ಬಾವಿಗಳಿಗೆ ಹೋಗಿ ಶುಚಿಯಾದರು. ಇನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರ ಆರಂಭವಾದ ಕಾರಣ ಈ ವಿದ್ಯಾರ್ಥಿಗಳು ಬಣ್ಣದಾಟದಿಂದ ದೂರ ಉಳಿದರು. ಅವರಿಗೆ ಪರೀಕ್ಷೆಯೇ ಬಹುದೊಡ್ಡ ಹಬ್ಬವಾಗಿತ್ತು.

ಕಲಬುರಗಿಯ ಜಸ್ಟ್‌ ಕ್ಲಬ್ ಆವರಣದಲ್ಲಿ ಯುವತಿಯರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು 

ಸೋಮವಾರ ಬೆಳಿಗ್ಗೆಯಿಂದ ಹಾಲು, ಹಣ್ಣು, ತರಕಾರಿ ಬಿಟ್ಟರೆ ಬೇರೆ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು. ಮಧ್ಯಾಹ್ನದವರೆಗೆ ವಾಹನಗಳ ಓಡಾಟ ಇರಲಿಲ್ಲ. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಂಜೆಯಾಗುತ್ತಿದ್ದಂತೆ ಅಂಗಡಿಮುಂಗಟ್ಟುಗಳು ಒಂದೊಂದಾಗಿ ತೆರೆದುಕೊಂಡವು. ವಾಹನಗಳ ಸಂಚಾರ ಕೂಡ ಆರಂಭವಾಯಿತು.

ಕಲಬುರಗಿಯ ತಾರ್‌ಫೈಲ್‌ನಲ್ಲಿ ಮಕ್ಕಳು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು 

ಕಾಮದಹನ: ಭಾನುವಾರ ತಡರಾತ್ರಿ ಕುಳ್ಳು, ಕಟ್ಟಿಗೆಗಳ ರಾಶಿ ಹಾಕಿ ಕಾಮದಹನ ಮಾಡಲಾಯಿತು. ಹಳ್ಳಿಗಳಲ್ಲಿ ಮಕ್ಕಳು ಮತ್ತು ಯುವಕರು ಹಲಗೆ ಸದ್ದಿನೊಂದಿಗೆ ಅದರ ಸುತ್ತಲೂ ಹೆಜ್ಜೆ ಹಾಕಿದರು. ಬೆಳಕು ಹರಿಯುತ್ತಿದ್ದಂತೆ ಕಾಮದಹನ ಮಾಡಿದ ಬೆಂಕಿಕೆಂಡವನ್ನು ಮನೆಗೆ ತೆಗೆದುಕೊಂಡು ಹೋಗಿ ಒಲೆ ಹಚ್ಚಿದರು. ನಗರಪ್ರದೇಶದಲ್ಲಿ ದೇವಸ್ಥಾನ ಆವರಣ, ವಿವಿಧ ಬಡಾವಣೆ, ಅಪಾರ್ಟ್‌ಮೆಂಟ್‌ಗಳ ಎದುರು ಕಾಮದಹನ ಕಂಡುಬಂತು.

ಜಿಲ್ಲಾಧಿಕಾರಿಯವರು ಭಾನುವಾರ ಕಾಮದಹನ, ಸೋಮವಾರ ಬಣ್ಣದ ಹಬ್ಬ (ದುಲಂಡಿ) ಘೋಷಣೆ ಮಾಡಿ ಎರಡು ದಿನ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದ್ದರು. ಆದರೆ, ಚಿತ್ತಾಪುರ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಹೋಳಿಹಬ್ಬವನ್ನು ಸೋಮವಾರ ಮತ್ತು ಮಂಗಳವಾರ ಆಚರಣೆ ಮಾಡಲಾಗುತ್ತಿದೆ.

ಕಲಬುರಗಿಯ ಪುಟಾಣಿ ಗಲ್ಲಿಯಲ್ಲಿ ಯುವಕರು ಮಡಕೆ ಒಡೆದು ಹೋಳಿ ಹಬ್ಬ ಆಚರಿಸಿದರು
ಕಲಬುರಗಿ ಮಾರುಕಟ್ಟೆಯ ಬಳಿ ಮಕ್ಕಳು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು–ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕಲಬುರಗಿಯ ಜಸ್ಟ್‌ ಕ್ಲಬ್ ಆವಣರದಲ್ಲಿ ಹೋಳಿಹಬ್ಬದ ಬಣ್ಣದಾಟದಲ್ಲಿ ಕಂಡುಬಂದ ಯುವತಿ–ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕಲಬುರಗಿಯ ಜಸ್ಟ್‌ ಕ್ಲಬ್ ಆವಣರದಲ್ಲಿ ಯುವತಿಯರು ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು–ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌

ಮಡಕೆ ಒಡೆದು ಸಂಭ್ರಮ

ಕಲಬುರಗಿಯ ಪುಟಾಣಿಗಲ್ಲಿ ಶಾಂತಿನಗರ ಶಕ್ತಿನಗರ ಬ್ರಹ್ಮಪುರ ಸುಭಾಸ್‌ಚೌಕ್‌ ಸುಂದರನಗರ ವಿಜಯನಗರ ಶಹಾಬಜಾರ್‌ ನಾಕಾ ಗುಬ್ಬಿ ಕಾಲೊನಿ ಬಸವೇಶ್ವರ ಕಾಲೊನಿ ಬಿದ್ದಾಪುರ ಕರುಣೇಶ್ವರ ನಗರ ವಿಠ್ಠಲ ನಗರ ಸೇರಿದಂತೆ ವಿವಿಧೆಡೆ ಯುವಕರು ಒಬ್ಬರ ಮೇಲೆ ಒಬ್ಬರು ನಿಂತು ಮಡಕೆ ಒಡೆದರು. ಹೋಳಿ ಪ್ರಯುಕ್ತ ಸಂಪ್ರದಾಯದಂತೆ ಮೊಸರು ತುಪ್ಪ ನಾಣ್ಯ ಮಜ್ಜಿಗೆ ಹಾಲು ಪಾನಕ ಹಾಕಿದ ಮಡಕೆಯನ್ನು ಎತ್ತರದಲ್ಲಿ ಕಟ್ಟಲಾಗಿತ್ತು. ತಂಡವೊಂದು ಮಡಕೆ ಒಡೆಯಲು ಪ್ರಯತ್ನಿಸುತ್ತಿದ್ದರೆ ಸುತ್ತಲಿನವರು ಅವರ ಮೇಲೆ ಬಣ್ಣ ಎರಚುತ್ತಿದ್ದರು. ಕೆಲ ಬಡಾವಣೆಗಳಲ್ಲಿ ಯುವಕರು ತಮ್ಮ ಸ್ನೇಹಿತರನ್ನು ಶವ ಮಾಡಿ ಮೆರವಣಿಗೆ ಮಾಡಿದ್ದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.