ADVERTISEMENT

ಗೃಹರಕ್ಷಕರ ಸೇವೆ ಪ್ರಶಂಸಾರ್ಹ

ಗೃಹರಕ್ಷಕರ ದಿನಾಚರಣೆ ಉದ್ಘಾಟಿಸಿದ ಎಸ್ಪಿ ಡಾ.ಸಿಮಿ ಮರಿಯಮ್‌ ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 16:09 IST
Last Updated 14 ಡಿಸೆಂಬರ್ 2020, 16:09 IST
ಕಲಬುರ್ಗಿಯಲ್ಲಿ ಸೋಮವಾರ ಗೃಹರಕ್ಷಕರ ದಿನಾಚರಣೆ ಅಂಗವಾಗಿ ಎಸ್ಪಿ ಡಾ.ಸಿಮಿ ಮರಿಯಂ ಜಾರ್ಜ್‌ ಅವರು ಸಸಿ ನೆಟ್ಟರು
ಕಲಬುರ್ಗಿಯಲ್ಲಿ ಸೋಮವಾರ ಗೃಹರಕ್ಷಕರ ದಿನಾಚರಣೆ ಅಂಗವಾಗಿ ಎಸ್ಪಿ ಡಾ.ಸಿಮಿ ಮರಿಯಂ ಜಾರ್ಜ್‌ ಅವರು ಸಸಿ ನೆಟ್ಟರು   

ಕಲಬುರ್ಗಿ: ‘ಪೊಲೀಸರಂತೆಯೇ ಗೃಹರಕ್ಷಕ ದಳದ ಸಿಬ್ಬಂದಿ ಕೂಡ ಸಮಾಜದ ರಕ್ಷಣೆಗೆ ತೊಡಗಿಸಿಕೊಂಡವರು. ಅವರ ನಿಷ್ಕಾಮ, ಪ್ರಾಮಾಣಿಕ ಸೇವೆಯಿಂದಲೇ ಇಲಾಖೆಗೆ ಉತ್ತಮ ಹೆಸರು ಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಂ ಜಾರ್ಜ್‌ ಪ್ರಶಂಸಿಸಿದರು.

ಇಲ್ಲಿನ ಜಿಲ್ಲಾ ಗೃಹರಕ್ಷಕ ದಳದ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಗೃಹರಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ‘ಶಿಸ್ತಿಗೆ ಹೆಸರಾದ ಗೃಹರಕ್ಷಕ ದಳದ ನಿಷ್ಕಾಮ ಸೇವೆಯನ್ನು ಸ್ಮರಣಾರ್ಹ. ಭೀಮಾ ನದಿಯ ಪ್ರವಾಹ ಸಂದರ್ಭದಲ್ಲಿ, ಅತಿವೃಷ್ಟಿ ಹಾಗೂ ಅಗ್ನಿ ಅವಘಡಗಳ ಸಂದರ್ಭದಲ್ಲಿ ಜನರ ಜೀವ ಹಾಗೂ ಆಸ್ತಿ ರಕ್ಷಣೆ ಮಾಡಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಗೃಹ ರಕ್ಷಕರಿಗೆ ಅಭಿನಂದನೆ ಸಲ್ಲಿಸಬೇಕು’ ಎಂದರು.

‘ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಕಾರ್ಯಕ್ಕೆ ಗೃಹ ರಕ್ಷಕರನ್ನು ನಿಯೋಜಿಸಬೇಕು. ಪೊಲೀಸರೊಂದಿಗೆ ಅವರೂ ಕೈ ಜೋಡಿಸಿದಾಗ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕಾರಿ ಆಗುತ್ತದೆ’ ಎಂದರು.

ADVERTISEMENT

ಇದೇ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಕಚೇರಿ ಆವರಣದಲ್ಲಿ ಸಸಿ ನೆಡಲಾಯಿತು. ಕಲಬುರ್ಗಿ ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಸಂತೋಷ ಕುಮಾರ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಸಮಾದೇಷ್ಟ ಮಲ್ಲಪ್ಪ ಹಾಗೂ ಕಚೇರಿಯ ಸಿಬ್ಬಂದಿ, ಗೃಹ ರಕ್ಷಕ ದಳದ ಹಿರಿಯ ಅಧಿಕಾರಿಗಳು ಹಾಗೂ ಗೃಹ ರಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.