
ಕಲಬುರಗಿ: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮರ್ಯಾದಾ ಹತ್ಯೆ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಎಸ್‌ವಿಪಿ ವೃತ್ತದಲ್ಲಿ ಜಮಾಯಿಸಿದ ಪದಾಧಿಕಾರಿಗಳು ಹಾಗೂ ಸದಸ್ಯರು ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಜಾರಿಗೆ ಒತ್ತಾಯಿಸಿದರು. ಅಂತರ್ಜಾತಿ ವಿವಾಹವಾದವರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ‘ಇನಾಂ ವೀರಾಪುರದಲ್ಲಿ ನಡೆದ ಘಟನೆ ಅತ್ಯಂತ ಅಮಾನವೀಯವಾದದ್ದಾಗಿದೆ. ಜಾತಿ ನಂಜು ತಲೆಗೆ ಏರಿಸಿಕೊಂಡ ತಂದೆ ತನಗೆ ಬೇಕಾದ ಹುಡುಗನನ್ನು ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದ ಗರ್ಭಿಣಿ ಮಗಳನ್ನು ಕೊಚ್ಚಿ ಕೊಲೆ ಮಾಡುವ ಮೂಲಕ ಮನುಷ್ಯ ಸಂಬಂಧಗಳ ಕರುಳು ಕತ್ತರಿಸಿದ್ದಾನೆ. ಇದನ್ನು ಸಮಿತಿ ಖಂಡಿಸುತ್ತದೆ’ ಎಂದು ಹೇಳಿದರು.
‘ಕೋಮುವಾದಿ ಶಕ್ತಿಗಳು ಮೇಲ್ಜಾತಿಯ ಅಹಂಕಾರವನ್ನು ಪೋಷಿಸುತ್ತಿವೆ. ಇಂಥ ದುಷ್ಟ ಪ್ರಯತ್ನಗಳು ಜನರ ಮನಸನ್ನು ಕ್ರೌರ್ಯಕ್ಕೆ ಸಿದ್ಧಗೊಳಿಸುತ್ತಿವೆ. ಈ ಕ್ರೌರ್ಯ ಮನುಷ್ಯನನ್ನು ಕುರುಡನನ್ನಾಗಿಸುತ್ತಿದೆ. ಇದು ಸಮಾನತೆಯ ಬದುಕನ್ನು ಕಿತ್ತುಕೊಳ್ಳುತ್ತಿದೆ’ ಎಂದರು.
‘ಸರ್ಕಾರ ಮರ್ಯಾದೆಗೇಡು ಹತ್ಯೆ ತಡೆಗೆ ಕಾನೂನು ರೂಪಿಸಬೇಕು. ಅಮಾನವೀಯ ಪ್ರಕರಣಗಳು ನಡೆಯದಂತೆ ಸಾಂವಿಧಾನಿಕ ಮೌಲ್ಯಗಳ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಎಸ್.ಸಿ ಮತ್ತು ಎಸ್.ಟಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಬಲಪಡಿಸಬೇಕು’ ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಮಾತನಾಡಿ, ‘ಸಮಾಜದಲ್ಲಿ ಜಾತಿಯ ವಿಷಬೀಜ ಎಷ್ಟು ಆಳವಾಗಿ ಬೇರು ಬಿಟ್ಟಿದೆ ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಕಾನೂನಿನ ಭಯವಿಲ್ಲದೆ ಕೃತ್ಯ ಎಸಗಿದ ಆರೋಪಿಗಳ ಹೆಡಮುರಿ ಕಟ್ಟಬೇಕು’ ಎಂದು ಒತ್ತಾಯಿಸಿದರು.
ಸಹಾಯಕ ಪ್ರಾಧ್ಯಾಪಕ ಅರುಣ್ ಜೋಳದಕೂಡ್ಲಿಗಿ ಮಾತನಾಡಿ, ‘ಪರಸ್ಪರ ಪ್ರೀತಿಸಿ ಅಂತರ್ಜಾತಿ ವಿವಾಹವಾದವರಿಗೆ ಪೊಲೀಸ್ ರಕ್ಷಣೆ ಒದಗಿಸಬೇಕಾದ ಸ್ಥಿತಿ ಬಂದಿರುವುದು ದುರಂತ’ ಎಂದರು.
ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಆರ್.ಕೆ.ಹುಡಗಿ, ಎಸ್.ಬಿ.ಹೊಸಮನಿ, ಸುಧಾಮ ಧನ್ನಿ, ಲವಿತ್ರ ವಸ್ತ್ರದ, ಕೋದಂಡ ರಾಮಪ್ಪ, ಬಿ.ಆರ್.ಬುದ್ಧಾ, ಭೀಮಶೆಟ್ಟಿ ಯಂಪಳ್ಳಿ, ವಿರೂಪಾಕ್ಷಪ್ಪ ತಡಕಲ್, ಈಶ್ವರ ಕಟ್ಟಿಮನಿ, ವಿ.ಜಿ. ದೇಸಾಯಿ, ಸುಜಾತ, ಪದ್ಮಿನಿ ಕಿರಣಗಿ ಸೇರಿ ಹಲವರು ಪಾಲ್ಗೊಂಡಿದ್ದರು.
ಅತ್ಯಂತ ಅಮಾನವೀಯ ಘಟನೆ ರಕ್ಷಣೆ ಒದಗಿಸಬೇಕಾದ ಸ್ಥಿತಿ ದೌರ್ಜನ್ಯ ತಡೆ ಕಾಯ್ದೆ ಬಲಪಡಿಸಿ
ಇನಾಂ ವೀರಾಪುರದಲ್ಲಿ ನಡೆದ ಘಟನೆ ಜಾತಿ ಕ್ರೌರ್ಯದ ಪ್ರತೀಕವಾಗಿದೆ. ಪರಿಶಿಷ್ಟರನ್ನು ಸಮಾಜ ಇಂದಿಗೂ ಜಾತಿ ಕನ್ನಡಕದೊಳಗಿಂದಲೇ ನೋಡುತ್ತಿದೆ. ಇದು ಬದಲಾಗಬೇಕುಜಯದೇವಿ ಗಾಯಕವಾಡ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.