ADVERTISEMENT

ಚಿತ್ತಾಪುರ: ಸಾವಿರ ಮನೆಗಳಿಗೆ ಸೌಲಭ್ಯದ ಸಮಸ್ಯೆ

₹58 ಕೋಟಿ ವೆಚ್ಚದಲ್ಲಿ ಜಿ+1 ಮಾದರಿಯಲ್ಲಿ ನಿರ್ಮಿಸಿರುವ ಮನೆಗಳು

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 23:52 IST
Last Updated 4 ಜೂನ್ 2023, 23:52 IST
ಚಿತ್ತಾಪುರ ಪಟ್ಟಣದ ಐತಿಹಾಸಿಕ ನಾಗಾವಿ ಪ್ರದೇಶದಲ್ಲಿ ಸಾತನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಪಕ್ಕ ನಿರ್ಮಾಣ ಮಾಡಿರುವ ಮನೆಗಳು
ಚಿತ್ತಾಪುರ ಪಟ್ಟಣದ ಐತಿಹಾಸಿಕ ನಾಗಾವಿ ಪ್ರದೇಶದಲ್ಲಿ ಸಾತನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಪಕ್ಕ ನಿರ್ಮಾಣ ಮಾಡಿರುವ ಮನೆಗಳು    

ಮಲ್ಲಿಕಾರ್ಜುನ ಎಂ.ಎಚ್‌

ಚಿತ್ತಾಪುರ: ಪಟ್ಟಣದ ಐತಿಹಾಸಿಕ ಕ್ಷೇತ್ರ ನಾಗಾವಿ ಪ್ರದೇಶದಲ್ಲಿ ₹58 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಜಿ+1 (ನೆಲಮಹಡಿ+ ಮೊದಲ ಮಹಡಿ) ಮಾದರಿಯ ಒಂದು ಸಾವಿರ ಮನೆಗಳ ಅಭಿವೃದ್ಧಿ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ.

ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರು 2018ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಪಟ್ಟಣದ ಬಡವರಿಗೆ, ಶ್ರಮಿಕರಿಗೆ, ಕೂಲಿಕಾರ್ಮಿಕರ ವಾಸಕ್ಕೆ ಅನುಕೂಲವಾಗಲಿ ಎಂದು ₹54.74 ಕೋಟಿ ವೆಚ್ಚದಲ್ಲಿ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ವಿವಿಧ ವಸತಿ ಯೋಜನೆ ಸಂಯೋಜಿಸಿ ಒಂದು ಸಾವಿರ ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದರು.

ADVERTISEMENT

2019ರ ಫೆಬ್ರವರಿ ತಿಂಗಳಿನಲ್ಲಿ ಮನೆಗಳ ನಿರ್ಮಾಣ ಪ್ರಾರಂಭಿಸಿ 2020ರ ಫೆಬ್ರವರಿ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಹೈದರಾಬಾದ ಮೂಲದ ಕೆಎಂವಿ ಪ್ರೊಜೆಕ್ಟ್ ಸಂಸ್ಥೆಗೆ ಕಾಮಗಾರಿ ವಹಿಸಲಾಗಿತ್ತು. ನಂತರ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮನೆಗಳ ನಿರ್ಮಾಣ ಕಾಮಗಾರಿಗೆ ಅನುದಾನದ ಕೊರತೆಯುಂಟಾಗಿ ಕಾಮಗಾರಿಯು ಆಮೆಗತಿ ಪಡೆದುಕೊಂಡಿತು.

₹54.74 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದ ಮನೆಗಳ ನಿರ್ಮಾಣ ಯೋಜನೆ ನಂತರ ₹58 ಕೋಟಿಗೆ ಏರಿಕೆಯಾಗಿದೆ. ಚುನಾವಣೆಗೆ ಎರಡು ತಿಂಗಳು ಮುಂಚೆ ಪ್ರಿಯಾಂಕ್ ಖರ್ಗೆ ಅವರು ಮನೆಗಳ ಉದ್ಘಾಟನೆ ನೆರವೇರಿಸಿ ಫಲಾನುಭವಿಗಳಿಗೆ ಮನೆಯ ಹಕ್ಕು ಪತ್ರ ವಿತರಣೆ ಮಾಡಿದ್ದರು. ಆದರೆ, ಅನುದಾನದ ಕೊರತೆಯಿಂದ ಮನೆಗಳಿಗೆ ಬೇಕಾದ ಅಗತ್ಯ ಮೂಲ ಸೌಲಭ್ಯಗಳ ಕಾಮಗಾರಿ ಕೈಗೊಳ್ಳದೆ ಕೆಲಸ ಬಂದ್ ಆಗಿದೆ. ಅವಶ್ಯಕ ಕಾಮಗಾರಿಗೆ ಮಾಡಿಸಲು ಇನ್ನೂ ಕೋಟಿಗಟ್ಟಲೆ ಅನುದಾನ ಅಗತ್ಯವಿದೆ ಎನ್ನಲಾಗಿದೆ.

1,600 ಚದರ ಅಡಿ ವಿಸ್ತೀರ್ಣದಲ್ಲಿ ಮನೆಯ ಕಟ್ಟಡ ನಿರ್ಮಿಸಲಾಗಿದೆ. ಪ್ರತಿ ಮನೆಗೆ 400 ಚದರ ಅಡಿ ವಿಸ್ತೀರ್ಣದ ಜಾಗ ಬಳಸಲಾಗಿದೆ. ಒಂದು ಕಟ್ಟಡದಲ್ಲಿ ನೆಲಮಹಡಿಯಲ್ಲಿ ನಾಲ್ಕು ಕುಂಟುಂಬಗಳು, ಮೊದಲ ಮಹಡಿಯಲ್ಲಿ ನಾಲ್ಕು ಕುಟುಂಬಗಳ ವಾಸಕ್ಕೆಂದು ಒಟ್ಟು ಎಂಟು ಮನೆ ನಿರ್ಮಿಸಲಾಗಿದೆ.  ಪ್ರತಿ ಮನೆಯ ಅಡುಗೆ ಕೋಣೆ, ಶೌಚಾಲಯ ಕೋಣೆ, ಸ್ನಾನದ ಕೋಣೆಗೆ ಇನ್ನೂ ಬಾಗಿಲು ಅಳವಡಿಸಿಲ್ಲ. ಮನೆಗಳ ಕಿಟಕಿಗಳಿಗೆ ಗಾಜು ಅಳವಡಿಸಿಲ್ಲ. ಮನೆಗಳಿಗೆ ವಿದ್ಯುತ್ ಸೌಲಭ್ಯ, ರಸ್ತೆ, ಚರಂಡಿ, ಗಾರ್ಡನ್, ಆಟದ ಮೈದಾನ, ಸಮುದಾಯ ಭವನ ನಿರ್ಮಿಸಿಲ್ಲ. ಕುಡಿಯುವ ನೀರು ಪೂರೈಕೆಯ ವ್ಯವಸ್ಥೆನ್ನೂ ಮಾಡಿಲ್ಲ. ಅಗತ್ಯ ಮೂಲ ಸೌಲಭ್ಯ ಅಭಿವೃದ್ಧಿಗಾಗಿ ಮನೆಗಳ ಫಲಾನುಭವಿಗಳು ಕಾದು ಕುಳಿತಿದ್ದಾರೆ.

ಶಾಸಕ ಪ್ರಿಯಾಂಕ್ ಖರ್ಗೆ ಅವರು ಇದೀಗ ಮತ್ತೆ ಸಚಿವರಾಗಿದ್ದಾರೆ. ಮನೆಗಳಿಗೆ ಮೂಲ ಸೌಲಭ್ಯ ಕಲ್ಪಿಸುತ್ತಾರೆ ಎಂಬ ಭರವಸೆ ಫಲಾನುಭವಿಗಳಲ್ಲಿ ಮೂಡಿದೆ. 

 ಮನೆಗಳಲ್ಲಿ ಅಡುಗೆ ಕೋಣೆ ಶೌಚಾಲಯ ಮತ್ತು ಸ್ನಾನದ ಕೋಣೆಗೆ ಬಾಗಿಲು ಅಳವಡಿಸಿದೆ ಬಿಟ್ಟಿರುವುದು

ಬಡವರಿಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪಟ್ಟಣದ ಹೊರವಲಯದಲ್ಲಿ ಒಂದು ಸಾವಿರ ಮನೆ ನಿರ್ಮಾಣ ಮಾಡಿಸಿದ್ದು ಐತಿಹಾಸಿಕ ಸಾಧನೆ. ಅಗತ್ಯ ಸೌಲಭ್ಯ ಒದಗಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.

- ನರಹರಿ ಕುಲಕರ್ಣಿ ಪಟ್ಟಣದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.