
ಚಿಂಚೋಳಿ: ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳ ಚಂದ್ರಂಪಳ್ಳಿ ಜಲಾಶಯ ಹಾಗೂ ಪ್ರಕೃತಿಧಾಮ ವೀಕ್ಷಣೆಗೆ ನಿತ್ಯ ನೂರಾರು ವಿದ್ಯಾರ್ಥಿಗಳು ದೌಡಾಯಿಸುತ್ತಿದ್ದಾರೆ.
ಬಸ್, ಜೀಪ್, ಮಿನಿ ಬಸ್‌ಗಳಲ್ಲಿ ಬರುತ್ತಿರುವ ವಿದ್ಯಾರ್ಥಿಗಳು ಇಲ್ಲಿನ ಪರಿಸರ, ಜಲಾಶಯದ ವಿಹಂಗಮ ದೃಶ್ಯ, ಎಲೆ ಉದುರಿಸುತ್ತ ಬಾಡಿ ನಿಂತ ಕಾಡಿನ ದೃಶ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ. ಬೀದರ್, ಯಾದಗಿರಿ, ಕಲಬುರಗಿ ಜಿಲ್ಲೆಗಳ ವಿವಿಧ ಶಾಲೆ ಕಾಲೇಜುಗಳ ಮಕ್ಕಳು ಬಂದು ಇಲ್ಲಿಯ ನಿಸರ್ಗ ಸಿರಿ ಆಸ್ವಾದಿಸುತ್ತಿದ್ದಾರೆ.
ಕೆಲವರು ಜಲಾಶಯದ ಗೇಟುಗಳ ಬಳಿಯಿಂದ ಚಾರಣ ಮಾರ್ಗದ ಬೆಟ್ಟ ಹತ್ತಿ ವಾಪಸಾದರೆ, ಇನ್ನೂ ಕೆಲವರು ಬಂಡ್ ಮೇಲೆ ಹಾಗೂ ವನ್ಯಜೀವಿ ಧಾಮದ ಪ್ರಕೃತಿ ಧಾಮ, ಕಾಟೇಜ್, ಪರಗೋಲ ವೀಕ್ಷಿಸಿ ಮರಳುತ್ತಿದ್ದಾರೆ.
ಯಾತ್ರಾರ್ಥಿಗಳು ಕುಳಿತು ಊಟ ಮಾಡಲು ಸೂಕ್ತ ಸ್ಥಳವಿಲ್ಲ. ಇದರಿಂದ ಎತ್ತರದ ಗುಡ್ಡದ ಮೇಲಿನ ಹನುಮಾನ ದೇವಾಲಯ ಮತ್ತು ಜಲಾಶಯದ ಬಂಡ್ ಮಾತ್ರ ಬಳಸುವಂತಾಗಿದೆ. ಆದರೆ ಮಧ್ಯಾಹ್ನ ಬಿಸಿಲಿರುವುದರಿಂದ ನೆರಳಿನ ವ್ಯವಸ್ಥೆಯ ಇಲ್ಲವಾಗಿದೆ.
ರೈತ ತರಬೇತಿ ಭವನ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ, ನಿರ್ವಹಣೆ ಕೊರತೆಯಿಂದಾಗಿ ಭವನದ ಒಳಗಡೆ ಹೋಗಲು ಭಯ ಪಡುವಂತಾಗಿದೆ. ಶುದ್ಧ ಕುಡಿಯುವ ನೀರಿಲ್ಲದ ಕಾರಣ ಪ್ರವಾಸಿಗರೇ ನೀರು ಜತೆಗೆ ತರಬೇಕಿದೆ.
ಪ್ರಕೃತಿ ಧಾಮಕ್ಕೆ ಹೋಗಿ ಬರಲು ಪ್ರವಾಸಿಗರು, ಅಧಿಕಾರಿಗಳು ಬಂಡ್ ರಸ್ತೆಯನ್ನೇ ಅವಲಂಬಿಸಿದ್ದಾರೆ. ಇಲ್ಲಿ ಪರ್ಯಾಯ ರಸ್ತೆ ಅಗತ್ಯವಿದೆ. ಎರಡೇ ಕಾಟೇಜ್‌ಗಳಿದ್ದು ಇವುಗಳ ಸಂಖ್ಯೆ ಹೆಚ್ಚಳವಾಗಬೇಕು, ಪ್ರವಾಸಿಗರ ವಾಹನಗಳು ನಿಲ್ಲಲು ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕಿದೆ. ಮಕ್ಕಳಿಗಾಗಿ ಉದ್ಯಾನವನ ನಿರ್ಮಿಸಬೇಕು ಎಂದು ಶಹಬಾದ್‌ನ ಸಾಮಾಜಿಕ ಕಾರ್ಯಕರ್ತ ಹಾಗೂ ಪ್ರವಾಸಿಗ ಶರಣು ವಸ್ತ್ರದ ತಿಳಿಸಿದರು.
ತಾಲ್ಲೂಕು ಕೇಂದ್ರ ಚಿಂಚೋಳಿಯಿಂದ ಹೋಗಿ ಬರಲು ಸಮರ್ಪಕ ಸಾರಿಗೆ ಸೌಲಭ್ಯವಿಲ್ಲ. ಇದರಿಂದ ಸ್ವಂತ ವಾಹನ ಹೊಂದಿದವರು, ಇಲ್ಲವೇ ಬಾಡಿಗೆ ವಾಹನಗಳು ತೆಗೆದುಕೊಂಡು ಜಲಾಶಯ ವೀಕ್ಷಿಸುವುದು ಸಾಮಾನ್ಯವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇಲ್ಲಿಗೆ ಭೇಟಿನೀಡುವ ಪ್ರವಾಸಿಗರ ಸಂಖ್ಯೆ ಪ್ರಸಕ್ತ ವರ್ಷ ಹೆಚ್ಚಾಗಿದೆ. ಶಾಲಾ ವಿದ್ಯಾರ್ಥಿಗಳ ಭೇಟಿ ಕೋವಿಡ್ ನಂತರ ಈಗ ದುಪ್ಪಟ್ಟಾಗಿದೆ ಎನ್ನುತ್ತಾರೆ ಪ್ರವಾಸಿ ಮಿತ್ರ ಸಿದ್ದಲಿಂಗ ಜಾನಕಿ.
ಚಂದ್ರಂಪಳ್ಳಿ ಜಲಾಶಯದ ಬಂಡ್ ಮೇಲಿನಿಂದ ವನ್ಯಜೀವಿ ಧಾಮದ ಪೃಕೃತಿ ಧಾಮಕ್ಕೆ ವಾಹನಗಳ ಸಂಚಾರ ನಿರ್ಬಂಧಿಸಲು ಕೋರಲಾಗಿದ್ದು ಪರ್ಯಾಯ ಮಾರ್ಗದಲ್ಲಿ ರಸ್ತೆ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆಗೆ ತಿಳಿಸಲಾಗಿದೆಚೇತನ ಕಳಸ್ಕರ್ ಎಇಇ ಚಂದ್ರಂಪಳ್ಳಿ ನೀರಾವರಿ ಯೋಜನೆ
ಚಂದ್ರಂಪಳ್ಳಿ ಪ್ರಕೃತಿ ಧಾಮದಲ್ಲಿ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆಯುವ ವಿಶ್ವಾಸವಿದೆಸಂಜೀವಕುಮಾರ ಚವ್ಹಾಣ ವಲಯ ಅರಣ್ಯಾಧಿಕಾರಿ ವನ್ಯಜೀವಿ ಧಾಮ ಚಿಂಚೋಳಿ
ಚಂದ್ರಂಪಳ್ಳಿ ನೈಸರ್ಗಿಕವಾಗಿ ಸುಂದರ ತಾಣ. ಇದನ್ನು ನೋಡಲು ದೂರದ ನಗರಗಳಿಂದ ಪ್ರವಾಸಿಗರು ನಿತ್ಯ ಬರುತ್ತಾರೆ. ಆದರೆ ಇಲ್ಲಿ ಪ್ರವಾಸಿಗರಿಗೆ ಊಟ ಶುದ್ಧ ಕುಡಿವ ನೀರು ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲಮಲಶೆಟ್ಟಿ ಬೀದರ್ ಪ್ರವಾಸಿಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.