ADVERTISEMENT

ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ|ಹುರಿಗಟ್ಟಿದ ಹುಮ್ಮಸ್ಸು,ಗಟ್ಟಿಯಾದ ಒಗ್ಗಟ್ಟು

ಬಯಲು ಸೀಮೆಯ ಜನರಿಗೆ ಭಾವನಾತ್ಮಕ ಶಕ್ತಿ

ಸಂತೋಷ ಈ.ಚಿನಗುಡಿ
Published 17 ಸೆಪ್ಟೆಂಬರ್ 2019, 11:11 IST
Last Updated 17 ಸೆಪ್ಟೆಂಬರ್ 2019, 11:11 IST
ಸಿದ್ದರಾಮ ವಡಗಾಂವ
ಸಿದ್ದರಾಮ ವಡಗಾಂವ   

‘ಕಲ್ಯಾಣ’ ಎಂಬ ಶಬ್ದದಲ್ಲೇ ಮಾನವತೆಯ ಮೌಲ್ಯಮಾಪನವಿದೆ, ದಾಸ್ಯ– ಜಡತ್ವ ಇಲ್ಲದ ಅಭಿವೃದ್ಧಿ ಸುಪ್ತವಾಗಿದೆ. ಸ್ವಾತಂತ್ರ್ಯ, ಸ್ವಾವಲಂಬನೆ, ಸಮಾನತೆ, ಸರ್ವೋದಯ, ಸುಧಾರಣೆ, ಸುಸ್ಥಿರ ವೈಭವ... ಹೀಗೆ ಎಲ್ಲ ಪದಗಳನ್ನೂ ಸೇರಿಸಿ ಗಂಧದಂತೆ ತೇಯ್ದಾಗ ಹೊರಬರುವ ಘಮಲೇ ಕಲ್ಯಾಣ. ಇದರೊಂದಿಗೆ ಕರ್ನಾಟಕವನ್ನೂ ಸೇರಿಸಿ ನೋಡಿ; ‘ಕಲ್ಯಾಣ ಕರ್ನಾಟಕ’ ಎಂಬ ಪದಗುಚ್ಛ ಕ್ಷಾತ್ರ ತೇಜಸ್ಸನ್ನು ಒಳಗೊಂಡ ಆಪ್ತಭಾವ ಪ್ರತಿಫಲಿಸುತ್ತದೆ.

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ’ ಪದಬಳಕೆ ಈ ಭಾಗದ ಜನರಿಗೆ ಭಾವನಾತ್ಮಕ ಶಕ್ತಿ ತಂದಿದೆ. ಈ ನಿರ್ಧಾರ ರಾಜ್ಯದ ಕೊನೆಯ ವ್ಯಕ್ತಿಯಲ್ಲೂ ಸಂಭ್ರಮ ಚಿಗುರೊಡೆಯುವಂತೆ ಮಾಡಿದೆ. ಭಾವನಾತ್ಮಕವಾಗಿ ನಾವಿನ್ನೂ ಕರ್ನಾಟಕಕ್ಕೆ ಅಂಟಿಕೊಂಡಿಲ್ಲವೆನೋ ಎಂಬ ದುಗುಡವನ್ನೇ ಇದು ತೊಡೆದುಹಾಕಿದೆ. ಹೈದರಾಬಾದ್‌ಭಾಗದವರು ಎಂಬ ಗಡಸು ಫೀಲಿಂಗ್‌ ಕಳಚಿ, ಕಲ್ಯಾಣರಾಜ್ಯದ ಆಪ್ತತೆಯ ತೆಕ್ಕೆಗೆ ಸಿಕ್ಕ ಹುಮ್ಮಸ್ಸು...

ಹೈದರಾಬಾದ್‌ ನಿಜಾಮರ ಆಡಳಿತ ತುಂಬ ದರ್ಪದಿಂದ ಕೂಡಿತ್ತು, ಜನಸಾಮಾನ್ಯರು ಸಂಕೋಲೆಗಳ ಮಧ್ಯೆ ಉಸಿರಾಡುತ್ತಿದ್ದರು, ಇಡೀ ದೇಶ ಬ್ರಿಟಿಷರಿಂದ ಮುಕ್ತವಾದರೂ ನಿಜಾಮರು ‘ಜನತಾ ಸ್ವಾತಂತ್ರ್ಯ’ ವಿರೋಧಿಸಿದರು ಎಂಬ ಕಾರಣಕ್ಕೆ ಈ ಭಾಗದಲ್ಲಿ ಆಕ್ರೋಶ ಮಡುಗಟ್ಟಿತ್ತು. ಹೈದರಾಬಾದ್ ಕೇಂದ್ರಿತ ಆಡಳಿತಕ್ಕೇ ಜನ ಸೆಡ್ಡುಹೊಡೆದರು. ವಿಮೋಚನೆಗಾಗಿ ರಕ್ತ ಚೆಲ್ಲಿ ಹೋರಾಡಿದರು. ಇದೇ ವೇಳೆ ಒಕ್ಕೂಟ ವ್ಯವಸ್ಥೆ ಜಾರಿಗಾಗಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಸಂಸ್ಥಾನಗಳ ವಿರುದ್ಧ ಬಿಗಿನಿಲುವು ತಾಳಿದರು. ಪರಿಣಾಮ, ನಿಜಾಮರ ಆಡಳಿತದ ಎಲ್ಲ ಭಾಗ ಭಾರತದ ಮಡಿಲಿಗೆ ಸೇರಿತು.

ADVERTISEMENT

ಏಕೀಕರಣದ ನಂತರ ಈ ಭಾಗ ಕರ್ನಾಟಕದ ಅವಿಭಾಜ್ಯ ಅಂಗವಾಯಿತು. ಆದರೂ ಭಾಷೆ, ಭಾವನೆ ಹಾಗೂ ವ್ಯಾವಹಾರಿಕವಾಗಿ ಗಟ್ಟಿಯಾಗಿ ಬಂಧಗೊಳ್ಳಲಿಲ್ಲ. ಮೇಲಾಗಿ, ಹೈದರಾಬಾದ್‌ ಎಂಬ ಹೆಸರೇ ದಾಸ್ಯದ ಸಂಕೇತವಾಗಿದೆ.ಹಾಗಾಗಿ, ಈ ಪದವನ್ನು ಕಳಚಿ ಕಲ್ಯಾಣ ಪದ ಬಳಕೆ ಮಾಡಬೇಕು ಎಂದು ದಶಕಗಳಿಂದಲೂ ಹೋರಾಟ ನಡೆದೇ ಇತ್ತು. ಈಗ ಎಲ್ಲದಕ್ಕೂ ‘ಸಮಾಧಾನ’ವಂತೂ ಸಿಕ್ಕಿದೆ.

ಜನಸಾಮಾನ್ಯರ ಕೂಗಿಗೆ ಯಶಸ್ಸು:

ಕಲಬುರ್ಗಿ, ಬೀದರ್‌, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಈಗ ಕಲ್ಯಾಣ ಕರ್ನಾಟಕದ ಮಾತೇ ಜೋರಾಗಿದೆ. ಸಹಜವಾಗಿಯೇ ಈ ಬಾರಿಯ ವಿಮೋಚನಾ ದಿನಕ್ಕೆ ಮತ್ತಷ್ಟು ಅರ್ಥ ಬಂದಿದೆ.

ಈ ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಆರ್‌.ಗುಂಡೂರಾವ್‌ ಅವರು, ಧರ್ಮಸಿಂಗ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು. ಈ ಸಮಿತಿಯ ಶಿಫಾರಸಿನ ಆಧಾರದ ಮೇಲೆ ‘ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ (ಎಚ್‌ಕೆಡಿಬಿ)’ಯನ್ನು ಸರ್ಕಾರ 1991ರಲ್ಲಿ ರಚಿಸಿತು.

2013ರಲ್ಲಿ ಕೇಂದ್ರದ ಯುಪಿಎ ಸರ್ಕಾರ ಸಂವಿಧಾನದ ಕಲಂ 371 (ಜೆ) ತಿದ್ದುಪಡಿ ತಂದು ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿತು. ಆ ನಂತರ ಮಂಡಳಿಗೆ ‘ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ (ಎಚ್‌ಕೆಆರ್‌ಡಿಬಿ) ಎಂದು ಪುನರ್‌ ನಾಮಕರಣ ಮಾಡಲಾಯಿತು. ಸದ್ಯ ರಾಜ್ಯ ಸರ್ಕಾರ ಈ ಮಂಡಳಿ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಿದೆ.

ಅಲ್ಲದೇ, ‘ಹೈದರಾಬಾದ್‌ ಕರ್ನಾಟಕ’ ಎಂದು ಕರೆಯಲಾಗುತ್ತಿರುವ ಎಲ್ಲ ದಾಖಲೆಗಳಲ್ಲಿಯೂ ‘ಕಲ್ಯಾಣ ಕರ್ನಾಟಕ’ ಎಂದು ಕರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಅಂಕಿ ಅಂಶಗಳು

* 63 ಲಕ್ಷ 1942ರಲ್ಲಿ ಹೈದರಾಬಾದ್ ರಾಜ್ಯದ ಜನಸಂಖ್ಯೆ

* 13.5 ಶೇಕಡ ಒಟ್ಟಾರೆ ರಾಜ್ಯದಲ್ಲಿದ್ದ ಮುಸ್ಲಿಮರ ಸಂಖ್ಯೆ

* 86.5 ಶೇಕಡ ಒಟ್ಟು ಜನಸಂಖ್ಯೆಯಲ್ಲಿ ಇದ್ದ ಮುಸ್ಲಿಮೇತರರು

* 82,313 ಚದರ್‌ ಮೈಲುಹೈದರಾಬಾದ್ ರಾಜ್ಯದ ವಿಸ್ತೀರ್ಣ

* 16 ನಿಜಾಮನ ರಾಜ್ಯದಲ್ಲಿ ಇದ್ದ ಜಿಲ್ಲೆಗಳು

* 1.14 ಕೋಟಿ 2011ರ ಗಣತಿ ವೇಳೆ ಕಲ್ಯಾಣ ಕರ್ನಾಟಕದಲ್ಲಿದ್ದ ಜನಸಂಖ್ಯೆ

ಹಿಂದೂ–ಮುಸ್ಲೀಮರ ಯುದ್ಧ ಅಲ್ಲ!

‘ಹೈದರಾಬಾದ್‌ ಕರ್ನಾಟಕ ವಿಮೋಚನಾ ಹೋರಾಟವನ್ನು ಹಿಂದೂ ಮುಸ್ಲಿಮರ ಮಧ್ಯದ ಯುದ್ಧ ಎಂದು ಬಿಂಬಿಸಿದ್ದು ತಪ್ಪು. ಅದು ಎರಡೂ ಧರ್ಮಗಳ ನಡುವಿನ ಸಮನ್ವಯವನ್ನು, ಮಾವೀಯತೆಯನ್ನು ವಿಶ್ವಕ್ಕೆ ಎತ್ತಿ ತೋರಿಸಿದ ಯುದ್ಧ’ ಎಂದು ಇತಿಹಾಸಕಾರ ಡಾ.ಬಿ.ಸಿ. ಮಹಾಬಳೇಶ್ವರಪ್ಪ ಹೇಳುತ್ತಾರೆ.

‘ಮೊಟ್ಟ ಮೊದಲು ನುಗ್ಗಿದ್ದು ಆರ್ಯ ಸಮಾಜ. ಇದರಲ್ಲಿ ಮುಸ್ಲಿಮೇತರ ಎಲ್ಲ ಹೋರಾಟಗಾರರೂ ಇದ್ದರು. ಮಾತ್ರವಲ್ಲ; ರಾಷ್ಟ್ರಪ್ರೇಮ ಹೊಂದಿದ ಹಲವು ಮುಸ್ಲಿಮರೂ ನಿಜಾಮ್‌ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದರು.ನಿಜಾಮ್‌ ರಾಜ್ಯದಲ್ಲಿ 16 ಜಿಲ್ಲೆಗಳಿದ್ದವು. ಇವುಗಳಲ್ಲಿ ಶೇಕಡ 86.5ರಷ್ಟು ಮುಸ್ಲಿಮೇತರರು, ಶೇಕಡ 13.5 ಮುಸ್ಲಿಮರು ಇದ್ದರು. ಅದರಲ್ಲೂ ಶೇಕಡ 3ರಷ್ಟು ಮುಸ್ಲಿಮರು ರಾಷ್ಟ್ರೀಯವಾದಿಗಳಾಗಿದ್ದು ಭಾರತ ಜತೆಗಿದ್ದರು ಎಂಬುದು ವಿಶೇಷ’ ಎಂದು ಅವರು ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.