ADVERTISEMENT

ಎಲ್ಲವನ್ನೂ ಬಿಎಸ್‌ವೈ ಮಾಡುವುದಾದರೆ ನಿಮ್ಮ ಕೆಲಸವೇನು: ಲಕ್ಷ್ಮಣ ದಸ್ತಿ ಪ್ರಶ್ನೆ

ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳ ಕಾರ್ಯವೈಖರಿಗೆ ದಸ್ತಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 10:40 IST
Last Updated 15 ಸೆಪ್ಟೆಂಬರ್ 2020, 10:40 IST
ಲಕ್ಷ್ಮಣ ದಸ್ತಿ
ಲಕ್ಷ್ಮಣ ದಸ್ತಿ   

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ವರ್ಷವೇ ಹೇಳಿದ್ದರು. ಅವರನ್ನು ಭೇಟಿ ಮಾಡಿ ನಿರಂತರವಾಗಿ ಒತ್ತಡ ಹಾಕಿಲ್ಲ. ಎಲ್ಲವನ್ನೂ ಮುಖ್ಯಮಂತ್ರಿ ಮಾಡುವುದಾದರೆ ನಿಮ್ಮ ಕೆಲಸವೇನು ಎಂದು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಟೀಕಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರವಾಗಿ ಒತ್ತಡ ಹಾಕಿದರೆ ಮಾತ್ರ ಈ ಭಾಗದ ಜನತೆಯ ಬೇಡಿಕೆಗಳು ಈಡೇರುತ್ತವೆ. ಆಡಳಿತ ಪಕ್ಷದವರು, ವಿರೋಧ ಪಕ್ಷದವರು ಈ ಬಗ್ಗೆ ಪ್ರಶ್ನಿಸದೇ ತೆಪ್ಪಗೆ ಕುಳಿತಿರುವುದಾದರೂ ಏಕೆ?ರೈಲ್ವೆ ವಲಯ ಸ್ಥಾಪನೆಯಲ್ಲೂ ಕಲಬುರ್ಗಿ ಭಾಗಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು.

371 (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತೇಕ ಸಚಿವಾಲಯ ಸ್ಥಾಪನೆ ಮಾಡಬೇಕು ಹಾಗೂ ಇಲ್ಲಿನ ಜನ ಪ್ರತಿನಿಧಿಗಳು ಜ.26ರ ಒಳಗಾಗಿ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್)ನ್ನು ಕಲಬುರ್ಗಿಗೆ ತರಲು ಜನಪ್ರತಿನಿಧಿಗಳು ಪ್ರಯತ್ನ ಮುಂದುವರಿಸಬೇಕು. ಇಎಸ್‌ಐ ಆಸ್ಪತ್ರೆಯನ್ನೇ ಏಮ್ಸ್ ಎಂದು ಮೇಲ್ದರ್ಜೆಗೆರಿಸಿ ಪರಿವರ್ತನೆ ಮಾಡಲು ಕ್ರಮ ಕೈಗೊಳ್ಳಬೇಕು. ಜಯದೇವ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಅಡಿಗಲ್ಲು ಕಾರ್ಯ ನೆರವೇರಿಸಿ ಕಾಮಗಾರಿಗಳನ್ನು ಆರಂಭಿಸಿ ಕಾಲ ಮಿತಿಯಲ್ಲಿ ಪುರ್ಣಗೊಳಿಸಬೇಕು. ಕಲ್ಯಾಣ ಕರ್ನಾಟಕೇತರ ಪ್ರದೇಶದಲ್ಲಿ ಜನ ಸಂಖ್ಯೆಗೆ ಅನುಗುಣವಾಗಿ ಮಿಸಲಾತಿ ನೀಡಲು ನೀಡಿರುವ ತೀರ್ಪಿನಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಭಾಗಿಯ ಕೇಂದ್ರ ಕಲಬುರ್ಗಿಯಲ್ಲಿ ಸಂಪುಟ ಸಭೆಯನ್ನು ನಡೆಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿಶೇಷ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನಿಷ ಜಾಜು, ಡಾ.ಮಾಜೀದ ದಾಗಿ, ಶಿವಲಿಂಗಪ್ಪ ಬಂಡಕ, ಅಸ್ಲಂ ಚೌಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.