ADVERTISEMENT

ಶರಣಬಸವ ವಿ.ವಿ.ಯಲ್ಲಿ ‘ಎನ್‌ಎಐಎನ್‌’ಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 15:14 IST
Last Updated 7 ಮಾರ್ಚ್ 2020, 15:14 IST

ಕಲಬುರ್ಗಿ: ರಾಜ್ಯ ಸರ್ಕಾರ ಜಾರಿಗೊಳಿಸಿದ ‘ನ್ಯೂ ಏಜ್‌ ಇನ್‌ಕ್ಯೂಬೇಷನ್‌ ನೆಟ್‌ವರ್ಕ್‌ (NAIN)’ ಅನ್ನು ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ವರ್ಷದಿಂದ ಅಳವಡಿಸಿಕೊಳ್ಳಲು ಅನುಮತಿ ಸಿಕ್ಕಿದೆ. ಈ ಮೂಲಕ ನವೀನ ವಿನ್ಯಾಸಗಳನ್ನು ಉತ್ತೇಜಿಸುವಲ್ಲಿ ವಿಶ್ವವಿದ್ಯಾಲಯ ಮತ್ತೊಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ.

ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಯೋಜನೆಗಳಿಗೆ ಪುಷ್ಠಿ ಮತ್ತು ಅವರ ಹೊಸತನವನ್ನು ಉತ್ತೇಜಿಸಲು ಸರ್ಕಾರ ಎನ್‌ಎಐಎನ್‌ ಜಾರಿಗೊಳಿಸಿದೆ. ಇದನ್ನು ಅಳವಡಿಸಿಕೊಳ್ಳಲುವಿಶ್ವವಿದ್ಯಾಲಯದ ಯಾಂತ್ರಿಕ ವಿಭಾಗವು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಮೂಲಸೌಕರ್ಯ ಮತ್ತು ಅಧ್ಯಾಪಕರ ಸೌಲಭ್ಯ ಗಣನೆಗೆ ತೆಗೆದುಕೊಂಡ ಸರ್ಕಾರ, ಪ್ರಸಕ್ತ ವರ್ಷದಿಂದ ಕಾರ್ಯಕ್ರಮ ಪ್ರಾರಂಭಿಸಲು ಅನುಮತಿ ನೀಡಿದೆ.‌

‘ನ್ಯೂ ಏಜ್ ಇನ್‍ಕ್ಯೂಬೇಷನ್ ನೆಟ್‌ವರ್ಕ್’ ಯೋಜನೆಯು ಬಾಹ್ಯ ನೆರವಿನ ಕಾರ್ಯಕ್ರಮವಾಗಿದ್ದು, ಸಂಶೋಧನೆ ಮತ್ತು ಯೋಜನೆಗಳ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಹ ವಿದ್ಯಾರ್ಥಿಗಳಿಗೆ ವಿ.ವಿ.ಯಲ್ಲಿ ಅವಕಾಶ ನೀಡುತ್ತಿದೆ. ಈ ಕಾರ್ಯಕ್ರಮವು ಮೂರು ವರ್ಷಗಳ ಅವಧಿಗೆ ಸೀಮಿತ. ಮೂರನೆಯ ವರ್ಷದ ಕೊನೆಯಲ್ಲಿ ಕಾರ್ಯಕ್ರಮದ ಅನುಷ್ಠಾನ, ಮೌಲ್ಯಮಾಪನದ ನಂತರ ರಾಜ್ಯ ಸರ್ಕಾರ ವೈಯಕ್ತಿಕ ಸಂಸ್ಥೆಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಇನ್ನೂ ಎರಡು ಅಥವಾ ಹೆಚ್ಚಿನ ಅವಧಿಗೆ ವಿಸ್ತರಿಸುತ್ತದೆ. ಸ್ಥಳೀಯ ಸಮಸ್ಯೆಗಳನ್ನು ಗುರುತಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು, ಸೂಕ್ತವಾದ ತಾಂತ್ರಿಕ ಆಧಾರಿತ ಪರಿಹಾರ ಮತ್ತು ಮೂಲ ಮಾದರಿಗಳನ್ನು ಅಭಿವೃದ್ಧಿಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಮೂರು ವರ್ಷಗಳ ಅವಧಿಕೆಗೆ ₹ 1 ಕೋಟಿ ಅನುದಾನ ನೀಡಿ ಸಂಶೋಧನೆಗೆ ಪ್ರೇರೇಪಿಸಲಾಗುತ್ತದೆ. ವಿದ್ಯಾರ್ಥಿಗಳು ಉದ್ಯಮಿಗಳಾಗಿ ಬೆಳೆಯಲು ಇದು ನೇರ ಮಾರ್ಗ ತೋರಿಸುವ ಕಲ್ಪನೆ.

ADVERTISEMENT

ಈ ಸಾಧನೆಗಾಗಿ ಸಿಬ್ಬಂದಿಯನ್ನು ಅಭಿನಂದಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಡಾ.ಶರಣಬಸವಪ್ಪ ಅಪ್ಪ ಅವರು, ‘ವಿದ್ಯಾರ್ಥಿಗಳ ಮನಸ್ಸನ್ನು ಬೆಳಗಿಸುವಲ್ಲಿ ‘ನ್ಯೂ ಏಜ್ ಇನ್‍ಕ್ಯೂಬೇಷನ್ ನೆಟ್‌ವರ್ಕ್’ ಕಾರ್ಯಕ್ರಮವು ಬಹುದೂರ ಸಾಗಲಿದ್ದು, ನವೀನ ಯೋಜನೆಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.

ಪ್ರೊ.ಶಿವಕುಮಾರ್ ರಾಚೋಟಿ ನೇತೃತ್ವದ ಯಾಂತ್ರಿಕ ವಿಭಾಗದ ಅಧ್ಯಾಪಕರ ತಂಡ, ಕುಲಸಚಿವ ಡಾ.ಅನಿಲಕುಮಾರ ಬಿಡವೆ ಅವರನ್ನೂ ಪೂಜ್ಯ ಅಪ್ಪ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.