ಕಲಬುರಗಿ: ‘ಧರ್ಮಕ್ಕಿಂತ ದೇಶವೇ ಮೊದಲು. ದೇಶ ಉಳಿದರೆ ನಾವೆಲ್ಲರೂ ಬದುಕಿ, ಬಾಳುತ್ತೇವೆ. ಆ ನಂತರ ಧರ್ಮ, ಪ್ರಜಾಪ್ರಭುತ್ವವೂ ಉಳಿಯುತ್ತದೆ. ಸಂವಿಧಾನ ಕೂಡ ಸುರಕ್ಷಿತವಾಗಿ ಇರುತ್ತದೆ’ ಎಂದು ಬುದ್ಧವಿಹಾರದ ಸಂಸ್ಥಾಪಕ, ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇಲ್ಲಿನ ಬುದ್ಧ ವಿಹಾರದಲ್ಲಿ ಸೋಮವಾರ ವೈಶಾಖ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬುದ್ಧನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
‘ದೇಶದ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಎಲ್ಲರೂ ಸೇರಿ ದೇಶವನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ಮಾಡಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಇದ್ದಾಗ ದೇಶವನ್ನು ಸಹ ಒಂದಾಗಿ ಇರಿಸಲು ಸಾಧ್ಯವಾಗುತ್ತದೆ’ ಎಂದರು.
‘ಈಗಿನ ಸಂಕಟದ ಸಮಯದಲ್ಲಿ ಜನಸಾಮಾನ್ಯರಿಗೆ ನಾವು ಧೈರ್ಯ ತುಂಬಬೇಕು. ಯಾರೂ ಗಾಬರಿ ಆಗಬಾರದು. ಕ್ಷುಲ್ಲಕ ಹೇಳಿಕೆಗಳು, ತಮಗೆ ತಾವೇ ಶಹಬ್ಬಾಸ್‌ಗಿರಿ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ದೇಶದ ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಶಾಂತಿಯ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡಿ, ಸಮಾಜದ ಸುಧಾರಣೆಗೆ ಎಲ್ಲರೂ ಪ್ರಯತ್ನ ಮಾಡೋಣ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.