ADVERTISEMENT

‘ಸಮಸ್ಯೆಯಾದರೆ ಅಧಿಕಾರಿಗಳ ಗಮನಕ್ಕೆ ತನ್ನಿ’: ಡಿವೈಎಸ್ಪಿ ಶಂಕರಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:11 IST
Last Updated 3 ಜೂನ್ 2025, 14:11 IST
ಕಾಳಗಿ ಪೊಲೀಸ್ ಠಾಣೆ ಮಂಗಳವಾರ ಆಯೋಜಿಸಿದ ಬಕ್ರೀದ್ ನಿಮಿತ್ತ ಶಾಂತಿ ಸಭೆಯಲ್ಲಿ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿದರು
ಕಾಳಗಿ ಪೊಲೀಸ್ ಠಾಣೆ ಮಂಗಳವಾರ ಆಯೋಜಿಸಿದ ಬಕ್ರೀದ್ ನಿಮಿತ್ತ ಶಾಂತಿ ಸಭೆಯಲ್ಲಿ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿದರು    

ಕಾಳಗಿ: ‘ಹಬ್ಬದ ಆಚರಣೆ, ಪೂರ್ವತಯಾರಿ ವೇಳೆ ಏನೇ ಸಮಸ್ಯೆ ಎದುರಾದರೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಘಟನೆ ಬೇರೆ ರೂಪ ತಾಳಿ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ’ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.

ಬಕ್ರೀದ್ ಅಂಗವಾಗಿ ಸ್ಥಳೀಯ ಪೊಲೀಸ್ ಠಾಣೆ ಮಂಗಳವಾರ ಆಯೋಜಿಸಿದ ಶಾಂತಿಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

‘ಪ್ರತಿ ಹಬ್ಬದ ಆಚರಣೆ ಶಾಂತಿ, ಸೌಹಾರ್ದತೆಯಿಂದ ಕೂಡಿರಲು ನಾವು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಈ ದಿಸೆಯಲ್ಲಿ ನಮ್ಮ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸುತ್ತದೆ. ಹಬ್ಬಗಳ ಆಚರಣೆ ಇತರರಿಗೆ ಮಾದರಿಯಾಗಲಿ’ ಎಂದರು. 

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ ಮಾತನಾಡಿ ‘ಜಾನುವಾರು ಸಾಗಾಟದಲ್ಲಿ ಪಶುವೈದ್ಯರ ಪ್ರಮಾಣ ಪತ್ರ ಅಗತ್ಯ. ಪ್ರಾಣಿಗಳ ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬಿಸಾಡಿದರೆ ನಾಯಿಗಳ ಹಾವಳಿ ಹೆಚ್ಚಾಗುತ್ತದೆ. ಸರ್ಕಾರದ ನಿಯಮಗಳನ್ನು ತಪ್ಪದೇ ಪಾಲಿಸಬೇಕು’ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಂಕಜಾ ಎ. ಮಾತನಾಡಿ ‘ಪ್ರತಿವರ್ಷದಂತೆ ಎಲ್ಲರ ಸಹಕಾರ ಇರಲಿ. ತ್ಯಾಜ್ಯ ಕೊಂಡೊಯ್ಯಲು ನಮ್ಮ ವಾಹನಗಳು ಬರುತ್ತವೆ. ಸಂಭ್ರಮದಿಂದ ಹಬ್ಬ ಆಚರಿಸಬೇಕು’ ಎಂದು ಹೇಳಿದರು.

ತಹಶೀಲ್ದಾರ್ ಘಮಾವತಿ ರಾಠೋಡ, ನಿವೃತ್ತ ಶಿಕ್ಷಕ ಮಹ್ಮದ ಘುಡುಸಾಬ ಕಮಲಾಪುರ, ಪಶುವೈದ್ಯ ಡಾ.ಸಂದೀಪ್ ಪಟವಾರಿ, ಮುಸ್ಲಿಂ ಕಮಿಟಿ ಅಧ್ಯಕ್ಷ ಜಾವೋದ್ದಿನ್ ಸೌದಾಗರ, ಕಲ್ಯಾಣರಾವ ಡೊಣ್ಣೂರ, ಭೀಮರಾಯ ಮಲಘಾಣ ಮಾತನಾಡಿದರು.

ಸಿಪಿಐ ಜಗದೇವಪ್ಪ ಪಾಳಾ, ಉಪ ತಹಶೀಲ್ದಾರ್ ಮಾಣಿಕ ಘತ್ತರಗಿ ವೇದಿಕೆಯಲ್ಲಿದ್ದರು. ಪಿಎಸ್ಐ ತಿಮ್ಮಯ್ಯ ಬಿ.ಕೆ ಸ್ವಾಗತಿಸಿದರು. ಮಂಜುನಾಥ ಬಡಿಗೇರ ನಿರೂಪಿಸಿ, ರಾವುತ್ ಬಂಕಲಗಿ ವಂದಿಸಿದರು.

ಮುಖಂಡ ಶಿವಶರಣಪ್ಪ ಕಮಲಾಪುರ, ಶಿವರಾಜ ಪಾಟೀಲ ಗೊಣಗಿ, ವೀರಣ್ಣಾ ಗಂಗಾಣಿ, ರವಿದಾಸ ಪತಂಗೆ, ಇಬ್ರಾಹಿಂಪಾಶಾ ಗಿರಣಿಕರ್, ಗಿರೀಶ್ ದೇವರಮನಿ, ಗಂಗರಾಮ ದಳಪತಿ, ಸಾದಿಕ್ ಮಿಯಾ ಗಾಡಿವಾನ್, ಪಾಶಾ ಸೇರಿದಂತೆ ಅನೇಕರು ಪಾಲ್ಗೊಂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.