ADVERTISEMENT

ಅಕ್ರಮ ಗೋರಿ ತೆರವು ಮಾಡಿ ಎಂದಿದ್ದಕ್ಕೆ ಎಫ್‌ಐಆರ್: ಆಂದೋಲಾದ ಸ್ವಾಮೀಜಿ ಆರೋಪ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:30 IST
Last Updated 10 ಆಗಸ್ಟ್ 2025, 2:30 IST
ಸಿದ್ಧಲಿಂಗ ಸ್ವಾಮೀಜಿ
ಸಿದ್ಧಲಿಂಗ ಸ್ವಾಮೀಜಿ   

ಕಲಬುರಗಿ: ‘ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದಲ್ಲಿ ಅಕ್ರಮವಾಗಿ ಗೋರಿ ನಿರ್ಮಿಸುತ್ತಿದ್ದು, ತೆರವು ಮಾಡಿ ಎಂದಿದ್ದಕ್ಕೆ ನರೋಣಾ ಪೊಲೀಸರು ನನ್ನ ವಿರುದ್ಧ ಎಫ್‌ಐಆರ್​ ದಾಖಲಿಸಿದ್ದಾರೆ’ ಎಂದು ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಯುಕೆ ಆವರಣದಲ್ಲಿ ಎರಡು ಹಳೆಯ ಗೋರಿಗಳಿವೆ. ಅನಧಿಕೃತವಾಗಿ ಹೊಸ ಗೋರಿಗಳಿದ್ದರೆ ತೆರವು ಮಾಡಲು ಆಗ್ರಹಿಸಲಾಗಿತ್ತು. ಇದೇ ನೆಪದಲ್ಲಿ ಕೋಮುಭಾವನೆಗೆ ಧಕ್ಕೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಕೇಂದ್ರೀಯ ವಿವಿ ಕುಲಪತಿ ಒಂದೇ ಗೋರಿ ಇದ್ದು, ತೆರವಿಗೆ ಸೂಚಿಸಿದ್ದೇನೆ ಎಂದಿದ್ದಾರೆ. ಅವರ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ’ ಎಂದು ಪ್ರಶ್ನಿಸಿದರು.

‘ಪೊಲೀಸರು ನೂರಾರು ವರ್ಷ ಹಿಂದಿನ ಗೋರಿ ಎಂದು ತಾವೇ ಗೋರಿಗಳ ಪರ ವಕಾಲತ್ತು ವಹಿಸುತ್ತಿದ್ದಾರೆ. ವಿವಿಯ ಸಹಾಯಕ ಪ್ರಾಧ್ಯಾಪಕ ಮಜಾರ್​ ಎಂಬುವವರು ವಿದ್ಯಾರ್ಥಿಗಳ ಮೂಲಕ ಕಲ್ಲುಗಳನ್ನು ಸೇರಿಸಿ ಗೋರಿ ನಿರ್ಮಿಸಿರುವ ಅನುಮಾನವಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ಶಿಕ್ಷಣ ಕೇಂದ್ರದಲ್ಲಿ ಯಾವುದೇ ಧಾರ್ಮಿಕ ಕುರುಹು, ಮೂರ್ತಿಗಳು ಇದ್ದರೂ ತೆರವು ಮಾಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ನಂದಿಕೂರ ಮಲ್ಲಯ್ಯ ಸ್ವಾಮಿ ಅಪಹರಣ ಪ್ರಕರಣದ ಬಗ್ಗೆ ನಗರ ಪೊಲೀಸ್​ ಆಯುಕ್ತರ ಕಚೇರಿ ಎದುರು ಪ್ರತಿಭಟನೆಗೆ ಪರವಾನಗಿ ಕೇಳಲು ಠಾಣೆಗೆ ಹೋದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಾಕೇಶ ಜಮಾದಾರ ವಿರುದ್ಧ ವಿನಾಕಾರಣ ಕೇಸ್​ ದಾಖಲಿಸಿದ್ದಾರೆ. ಜಿಲ್ಲೆಯಲ್ಲಿ ನ್ಯಾಯಕ್ಕಾಗಿ ಪ್ರತಿಭಟಿಸುವುದು ತಪ್ಪೇ?’ ಎಂದರು.

‘ಮಲ್ಲಯ್ಯ ಸ್ವಾಮಿ ಪ್ರಕರಣದ ಆರೋಪಿ ಖಾರದಪುಡಿ ಅಂಬ್ಯಾನಿಗೆ ಜಾಮೀನು ಕೊಟ್ಟರೂ ಜೈಲಿನಲ್ಲೇ ಉಳಿದಿದ್ದಾನೆ. ಜಿಲ್ಲಾಡಳಿತ ಆತನಿಗೆ ಜೈಲಿನಲ್ಲೇ ರಕ್ಷಣೆ ನೀಡುತ್ತಿದೆ’ ಎಂದು ಆರೋಪಿಸಿದರು.

ರಾಕೇಶ ಜಮಾದಾರ, ಮಲಕಣ್ಣ ಹಿರೇಪೂಜಾರಿ, ರೋಹಿತ್‌ ಪಿಸ್ಕೆ, ಮಡಿವಾಳಪ್ಪ ಇದ್ದರು.

ಸಚಿವ ಖರ್ಗೆ ವಿರುದ್ಧ ಕೇಸ್​ ಏಕಿಲ್ಲ?

‘ಸಚಿವ ಪ್ರಿಯಾಂಕ್​ ಖರ್ಗೆ ಅವರು ಫೋನ್​ನಲ್ಲಿ ಸಾರಿಗೆ ಇಲಾಖೆ ಅಧಿಕಾರಿ ಜತೆಗೆ ಮಾತಾಡುತ್ತ ಕೆಲಸ ಮಾಡದಿದ್ದರೆ ಡಿಪೋಗೆ ಬೆಂಕಿ ಹಚ್ಚುತ್ತೇನೆ ಎಂದು ಆವಾಜ್​ ಹಾಕಿದ್ದಾರೆ. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ​ ನರಿಬೋಳ ಪೊಲೀಸ್​ ಠಾಣೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಅವರ ವಿರುದ್ಧ ಕೇಸ್​ ಯಾಕೆ ಹಾಕಿಲ್ಲ’ ಎಂದು ಪ್ರಶ್ನಿಸಿದ ಸಿದ್ದಲಿಂಗ ಸ್ವಾಮೀಜಿ ವಿಡಿಯೊ ತುಣುಕುಗಳನ್ನು ಪ್ರದರ್ಶಿಸಿದರು.

‘ದಂಡಗುಂಡ ಶ್ರೀಗೆ ಬೆದರಿಕೆ’

‘ದಂಡಗುಂಡ ಬಸವೇಶ್ವರ ದೇವಸ್ಥಾನದ ಅನಧಿಕೃತ ಸಮಿತಿಯವರು ಮಠದ ಸಂಗನಬಸವ ಶಿವಾಚಾರ್ಯರು ದೇವಸ್ಥಾನಕ್ಕೆ ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ’ ಎಂದು ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು. ಸಂಗನಬಸವ ಶಿವಾಚಾರ್ಯರು ಮಾತನಾಡಿ ‘ಮಠದ ಗೋಡೆ ಉರುಳಿಸಿ ಚಿನ್ನಾಭರಣ ಕದ್ದಿದ್ದಾರೆ. ಅದನ್ನು ಮೊದಲಿನಂತೆ ಮಾಡಿಕೊಡಬೇಕು. ಆ.11ರಂದು ದೇವಸ್ಥಾನದ ರಥೋತ್ಸವವಿದ್ದು ಆಂದೋಲಾ ಶ್ರೀಗಳ ಜತೆಗೆ ಭಾಗವಹಿಸುತ್ತೇನೆ. ಅನಾಹುತಗಳಾದಲ್ಲಿ ಜಿಲ್ಲಾಡಳಿತವೇ ಹೊಣೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.