ADVERTISEMENT

₹ 8.31 ಲಕ್ಷ ಮೌಲ್ಯದ ಮರಂ, ಕಲ್ಲು ಅಕ್ರಮ ಬಳಕೆ

ವಾಡಿ–ಗದಗ ರೈಲ್ವೆ ಯೋಜನೆ ಕಾಮಗಾರಿ; ಗುತ್ತಿಗೆದಾರ, ವಾಹನ ಮಾಲೀಕರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 16:06 IST
Last Updated 29 ಜೂನ್ 2025, 16:06 IST

ಕಲಬುರಗಿ: ವಾಡಿ ಮತ್ತು ಗದಗ ನಡುವಿನ ರೈಲ್ವೆ ಯೋಜನೆಯ ಕಾಮಗಾರಿಯಲ್ಲಿ ಪರವಾನಗಿ ಇಲ್ಲದೆಯೇ ಅಕ್ರಮವಾಗಿ ಮರಂ ಹಾಗೂ ಸುಣ್ಣದ ಕಲ್ಲು ಬಳಸಿದ ಆರೋಪದಲ್ಲಿ ಗುತ್ತಿಗೆದಾರ, ವಾಹನಗಳ ಮಾಲೀಕರ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೇವರ್ಗಿ ತಾಲ್ಲೂಕಿನ ಬಿರಾಳ (ಬಿ) ಗ್ರಾಮ ವ್ಯಾಪ್ತಿಯಲ್ಲಿ ರೈಲ್ವೆ ಹಳಿ ಹಾಗೂ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಖನಿಜ ಪರವಾನಗಿ ಪಡೆಯದೆ ಅನಧಿಕೃತವಾಗಿ 450 ಮೆಟ್ರಿಕ್ ಟನ್ ಮರಂ ಹಾಗೂ 18,539 ಮೆಟ್ರಿಕ್ ಟನ್ ಸುಣ್ಣದ ತ್ಯಾಜ್ಯ ಕಲ್ಲುಗಳನ್ನು ಹಾಕಿದ್ದರು. ಅವುಗಳ ಮೊತ್ತ ₹ 8.31 ಲಕ್ಷದಷ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುತ್ತಿಗೆದಾರರು ಅನಧಿಕೃತವಾಗಿ ಗಣಿಗಾರಿಕೆ ಮಾಡಿ, ಪರವಾನಗಿ ಇಲ್ಲದೆ ಕಳ್ಳತನದಿಂದ ಮರಂ ಮತ್ತು ಕಲ್ಲುಗಳನ್ನು ತಂದು ದಾಸ್ತಾನು ಮಾಡಿದ್ದಾರೆ. ವಾಹನಗಳ ಮಾಲೀಕರು, ಚಾಲಕರು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಪ್ರವೀಣ್ ಕುಲಕರ್ಣಿ ಅವರು ದೂರು ದಾಖಲಿಸಿದ್ದಾರೆ.

ADVERTISEMENT

ಸಿಲಿಂಡರ್ ಅಕ್ರಮ ಮಾರಾಟ

ಗೃಹ ಬಳಕೆ ಅನಿಲ ಸಿಲಿಂಡರ್‌ಗಳನ್ನು ಅಕ್ರಮವಾಗಿ ಆಟೊಗಳಿಗೆ ತುಂಬಿಸುತ್ತಿದ್ದ ಆರೋಪದಡಿ ಕೈಸರ್ ಜಾಕಿರ್ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಜರ್ ನಗರದ ಶೆಡ್‌ ಒಂದರಲ್ಲಿ ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ಅಕ್ರಮವಾಗಿ ಆಟೊಗಳಿಗೆ ಭರ್ತಿ ಮಾಡುತ್ತಿದ್ದರು. ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಆರೋಪಿ ಕೈಸರ್, ಅಲ್ಲಿಂದ ಪಾರಾರಿಯಾಗಿದ್ದಾನೆ. ₹ 3,500 ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂಗಿಗೆ ವಂಚಿಸಿ ಅಕ್ರಮವಾಗಿ ಸ್ಕೂಟಿ ನೋಂದಣಿ

ತಂಗಿಯ ಸಹಿ ನಕಲು ಮಾಡಿ ಸ್ಕೂಟಿಯನ್ನು ತನ್ನ ಹೆಸರಿಗೆ ಅಕ್ರಮವಾಗಿ ನೋಂದಣಿ ಮಾಡಿದ ಆರೋಪದಡಿ ಮಹಿಳೆಯೊಬ್ಬರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣೇಶ ನಗರದ ನಿವಾಸಿ ಕಿರಣ್‌ಬೇಡಿ ನರೇಶ ಅವರು ನೀಡಿದ ದೂರಿನ ಅನ್ವಯ ಆಕೆಯ ಅಕ್ಕ ಹೀರಾಬಾಯಿ ಮಾರುತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಂದೆ ಹೆಸರಲ್ಲಿದ್ದ ದ್ವಿಚಕ್ರ ವಾಹನವನ್ನು ಕೆಲವು ವರ್ಷಗಳ ಹಿಂದೆ ಕಿರಣ್‌ಬೇಡಿ ಅವರ ಹೆಸರಿಗೆ ನೋಂದಣಿ ಆಗಿತ್ತು. ಕೆಲ ವರ್ಷಗಳ ಬಳಿಕ ಅನಾರೋಗ್ಯ ಕಾರಣದಿಂದಾಗಿ ಸ್ಕೂಟಿಯನ್ನು ಓಡಿಸಲು ಆಗದೆ ಮನೆಯಲ್ಲಿಯೇ ನಿಲ್ಲಿಸಿದ್ದರು. ಹೀರಾಬಾಯಿ ಅವರು ಸ್ಕೂಟಿಯನ್ನು ಓಡಿಸುವುದಾಗಿ ತೆಗೆದುಕೊಂಡು ಹೋದರು. ತಂಗಿಯ ಸಹಿ ನಕಲು ಮಾಡಿ ತನ್ನ ಹೆಸರಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.