ADVERTISEMENT

ಕಲಬುರಗಿ| ಅಕ್ರಮ ಸಾಗಣೆ: 55 ಕ್ವಿಂಟಲ್‌ ಪಡಿತರ ಅಕ್ಕಿ ವಶ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 8:27 IST
Last Updated 7 ಡಿಸೆಂಬರ್ 2025, 8:27 IST
ನಸಿರೋದ್ದೀನ್‌
ನಸಿರೋದ್ದೀನ್‌   

ಕಲಬುರಗಿ: ನಗರದ ಸಬರ್ಬನ್‌ ಮತ್ತು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಡಿ.2ರಂದು ಅಕ್ರಮವಾಗಿ ಸಾಗಿಸುತ್ತಿದ್ದ 55 ಕ್ವಿಂಟಲ್‌ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ.

ಆಳಂದ ಚೆಕ್‌ಪೋಸ್ಟ್‌ ಹತ್ತಿರ ಅಕ್ಕಿ ಸಾಗಣೆ ಮಾಡುತ್ತಿದ್ದ ಬೀದರ್‌ ಜಿಲ್ಲೆ ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯ ಆರೋಪಿ ನಸಿರೋದ್ದೀನ್‌ ಪಾಷಾಮಿಯಾ ಚಿದ್ರಿ ಎಂಬಾತನನ್ನು ಬಂಧಿಸಲಾಗಿದೆ. 30 ಕ್ವಿಂಟಲ್‌ ಅಕ್ಕಿ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಅಕ್ಕಿ ಚೀಲಗಳು ಮಲ್ಲಿಕಾರ್ಜುನ ಖೇಮಜಿ ಹಾಗೂ ಇತರರಿಗೆ ಸಂಬಂಧಿಸಿದ್ದು. ಗುಜರಾತ್‌ನ ಅಹಮದಾಬಾದ್‌ಗೆ ಸಾಗಿಸುತ್ತಿರುವುದಾಗಿ ಬಾಯಿಬಿಟ್ಟಿದ್ದಾನೆ.

ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್.ಡಿ. ಅವರ ನಿರ್ದೇಶನದಂತೆ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್‌, ಪ್ರವೀಣ ಎಚ್.ನಾಯಕ್‌ ಹಾಗೂ ಎಸಿಪಿ ಬಸವೇಶ್ವರ ಹೀರಾ ಅವರ ಮಾರ್ಗದರ್ಶನದಲ್ಲಿ ಎಎಸ್‌ಐ ಮಹ್ಮದ್‌ ಗೌಸ್‌, ಸಿಬ್ಬಂದಿ ಶಂಕರಲಿಂಗ, ಬೀರಣ್ಣ, ಲಕ್ಷ್ಮಿಕಾಂತ ಹಾಗೂ ದತ್ತಾತ್ರೇಯ ದಾಳಿ ನಡೆಸಿದ್ದರು. ಸಬರ್ಬನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಇನ್ನೊಂದು ಪ್ರಕರಣದಲ್ಲಿ ಸೇಡಂ ರಸ್ತೆಯ ಗೀತಾನಗರ ಹತ್ತಿರ ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯ ಆರೋಪಿ ರಾಜು ನರಸಿಂಗರಾವ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. 25 ಕ್ವಿಂಟಲ್‌ ಅಕ್ಕಿ ಜಪ್ತಿ ಮಾಡಲಾಗಿದೆ. ಈ ಅಕ್ಕಿ ಚೀಲಗಳು ದುಬಲಗುಂಡಿಯ ಜಾಕೀರ ಪಾಷಾಮಿಯಾ ಚಿದ್ರಿ ಎಂಬಾತನಿಗೆ ಸಂಬಂಧಿಸಿದ್ದು, ಯಾದಗಿರಿಯಿಂದ ಮಹಾರಾಷ್ಟ್ರ ಹಾಗೂ ಗುಜರಾತ್‌ ರಾಜ್ಯಕ್ಕೆ ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ.

ಸಿಬ್ಬಂದಿ ಜೈಭೀಮ, ಶಂಕರಲಿಂಗ, ಬೀರಣ್ಣ, ಲಕ್ಷ್ಮಿಕಾಂತ ಹಾಗೂ ದತ್ತಾತ್ರೇಯ ಅವರನ್ನೊಳಗೊಂಡ ತಂಡ ದಾಳಿ ನಡೆಸಿತ್ತು. ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.