ADVERTISEMENT

ಅಕ್ರಮ ಮರಳು ದಂಧೆ: ವಾಲ್ಮೀಕ ನಾಯಕ ಸುಳ್ಳು ಆರೋಪ

ವಾಲ್ಮೀಕ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಮುಖಂಡರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 13:30 IST
Last Updated 16 ಡಿಸೆಂಬರ್ 2019, 13:30 IST
ಭೀಮಣ್ಣ ಸಾಲಿ
ಭೀಮಣ್ಣ ಸಾಲಿ   

ಚಿತ್ತಾಪುರ: ‘ತಾಲ್ಲೂಕಿನಲ್ಲಿ ಅಕ್ರಮ ಮರಳು ದಂಧೆಗೆ ಶಾಸಕ ಪ್ರಿಯಾಂಕ್ ಖರ್ಗೆ ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಶಾಸಕ ವಾಲ್ಮೀಕ ನಾಯಕ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು’ ಎಂದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವರುದ್ರ ಭೀಣಿ ಅವರು ಖಂಡಿಸಿದರು.

ಪಕ್ಷದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಕೆಡಿಪಿ ಸಭೆಯಲ್ಲಿ ಶಾಸಕ ಪ್ರಿಯಾಂಕ್ ಅವರು ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು, ಅದನ್ನು ತಡೆಯಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ದೂರಿದ್ದರು. ಅದನ್ನು ಅರಿಯದೆ ವಾಲ್ಮೀಕ ಸುಳ್ಳು ಆರೋಪ ಮಾಡಿದ್ದಾರೆ’ ಎಂದು ಅವರು ಟೀಕಿಸಿದರು.

ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದರೆ ಅವುಗಳ ವಿರುದ್ಧ ಪ್ರಕರಣ ದಾಖಲಿಸದಂತೆ ಈಗಿನ ಸಂಸದರು, ಮಾಜಿ ಶಾಸಕರು ಅಧಿಕಾರಿಗಳಿಗೆ ಕರೆ ಮಾಡಿ ಒತ್ತಡ ತಂದು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಮೇಲೆ ದರ್ಪ ಮೆರೆಯುತ್ತಿದ್ದಾರೆ ಎಂದು ಅವರು ಆರೋಪ ಮಾಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ್ ಅವರು ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿನ ನಂತರ ತಪ್ಪು ಮಾಡಿದೇವು ಎನ್ನುವ ಪಶ್ಚಾತ್ತಾಪದ ಭಾವನೆ ಜನರಿಗೆ ಕಾಡುತ್ತಿದೆ. ಜಿಲ್ಲೆಯಲ್ಲಿ ದೊಡ್ಡ ಅಭಿವೃದ್ಧಿ ಕಾಮಗಾರಿಗಳು ಆಗಿದ್ದರೆ ಅದು ಖರ್ಗೆ ಕುಟುಂಬದಿಂದ ಮಾತ್ರ. ಮಂಜೂರಾಗಿದ್ದ ₹70 ಕೋಟಿ ಅನುದಾನ ಈಗಿನ ಸರ್ಕಾರ ಹಿಂದಕ್ಕೆ ಪಡೆದಿದೆ. ಚಿತ್ತಾಪುರ ಕ್ಷೇತ್ರಕ್ಕೆ ಬಿಜೆಪಿ ಕೊಡುಗೆ ಏನಿದೆ ಎಂದು ವಾಲ್ಮೀಕ ಹೇಳಲಿ ಎಂದು ಸವಾಲು ಹಾಕಿದರು.

ಅಧಿಕಾರಿಗಳ ವರ್ಗಾವಣೆಗೆ ನಿಯಮಗಳಿವೆ. ಅವುಗಳನ್ನು ಉಲ್ಲಂಘನೆ ಮಾಡಿ ವರ್ಗಾವಣೆ ಮಾಡಲಾಗುತ್ತಿದೆ. ಬಹಳಷ್ಟು ಅಧಿಕಾರಿಗಳು ನಿಯಮ ಬಾಹಿರ ವರ್ಗಾವಣೆ ವಿರೋಧಿಸಿ ಕೆಎಟಿ ಪೀಠದ ಮೊರೆ ಹೋಗಿದ್ದಾರೆ. ಅದರ ಅರಿವಿಲ್ಲದೆ ಮಾತನಾಡುವುದು ಸರಿಯಲ್ಲ ಎಂದು ಅವರು ಟೀಕಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್, ಮುಖಂಡರಾದ ಮುಕ್ತಾರ್ ಪಟೇಲ್, ಹಣಮಂತ ಸಂಕನೂರು, ಈರಪ್ಪ ಭೋವಿ, ಸೂರ್ಯಕಾಂತ ಪೂಜಾರಿ, ಬಸವರಾಜ ಹೊಸಳ್ಳಿ, ಶೇಖ್ ಬಬ್ಲು, ಮಲ್ಲಿಕಾರ್ಜುನ ಕಾಳಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಪಾಶಾಮಿಯ್ಯ ಖುರೇಷಿ, ಶಿವಯೋಗಿ ರಾವೂರ, ನಾಗಯ್ಯ ಗುತ್ತೆದಾರ್, ಶರಣು ಡೋಣಗಾಂವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.