ADVERTISEMENT

ಅಕ್ರಮ ಮರಳುಗಾರಿಕೆ; ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಭೀಮನಗೌಡ ಪರಗೊಂಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 2:58 IST
Last Updated 16 ನವೆಂಬರ್ 2021, 2:58 IST
ಭೀಮನಗೌಡ ಪರಗೊಂಡ
ಭೀಮನಗೌಡ ಪರಗೊಂಡ   

ಕಲಬುರಗಿ: ‘ಜೇವರ್ಗಿ ತಾಲ್ಲೂಕಿನ ಹುಲ್ಲೂರು ಗ್ರಾಮದಲ್ಲಿ ಅಕ್ರಮವಾಗಿ ಮರಳು ತೆಗೆಯುವ ದಂಧೆ ನಿರಂತರವಾಗಿ ನಡೆದಿದೆ. ಈ ಬಗ್ಗೆ ನಾನು ದೂರು ಕೊಟ್ಟ ಮೇಲೆ ಅಕ್ರಮ ಬಯಲಿಗೆ ಬಂದಿದೆ. ಆದರೂ ಅಧಿಕಾರಿಗಳು ಇದೂವರೆಗೆ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ’ ಎಂದು ಸಾಮಾಜಿಕ ಕಾರ್ಯಕರ್ತ ಭೀಮನಗೌಡ ಪರಗೊಂಡ ಹೇಳಿದರು.‌

‘ಭೀಮಾ ನದಿಯಲ್ಲಿ ಹಗಲು– ರಾತ್ರಿ ಮರಳು ಗಣಿಗಾರಿಕೆ ನಡೆದಿದೆ. ಸರ್ಕಾರವೇ ಜಾರಿ ಮಾಡಿದ ಮರಳು ನೀತಿಗೆ ವಿರುದ್ಧವಾಗಿ ಅಧಿಕಾರಿಗಳು ಪರವಾನಗಿ ನೀಡುತ್ತಿದ್ದಾರೆ. ಈ ಭಾಗದ ಶಾಸಕರು, ಸಂಸದರು, ಜಿಲ್ಲಾಮಟ್ಟದ ಅಧಿಕಾರಿಗಳು ಎಲ್ಲರಿಗೂ ಈ ವಿಷಯ ಗೊತ್ತಿದೆ. ಆದರೆ, ಯಾರೊಬ್ಬರೂ ಅಕ್ರಮ ತಡೆಯುವ ಮಾತನಾಡುತ್ತಿಲ್ಲ. ಇವರ ನಿರ್ಲಕ್ಷ್ಯದ ಕಾರಣ ಜಿಲ್ಲೆಯಿಂದ ಅಪಾರ ಪ್ರಮಾಣದ ಮರಳು ಸಾಗಣೆಯಾಗುತ್ತಿದೆ. ಹುಲ್ಲೂರು ಗ್ರಾಮದಲ್ಲಿ 300ಕ್ಕೂ ಹೆಚ್ಚು ಮಹಿಳೆಯರು ಭಾನುವಾರ ರಾತ್ರಿ ಮರಳು ತುಂಬಿದ ಲಾರಿಗಳನ್ನು ತಡೆದು ನಿಲ್ಲಿಸಿದ್ದೇ ಇದಕ್ಕೆ ಸಾಕ್ಷಿ’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸೆಪ್ಟೆಂಬರ್‌ ತಿಂಗಳಲ್ಲಿ 3,500 ಟನ್‌ ಮರಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, 15 ಸಾವಿರ ಟನ್‌ಗೂ ಹೆಚ್ಚು ಮರಳು ಪತ್ತೆಯಾಗಿದೆ. ಪ್ರತಿ ದಿನ ಮುನ್ನೂರಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ ಸಾಗಣೆಯಾಗಿದೆ. ಈ ಬಗ್ಗೆ ಹಾವೇರಿ ಜಿಲ್ಲೆಯ ಒಬ್ಬರು ಗುತ್ತಿಗೆದಾರರು ಹಾಗೂ ಹುಲ್ಲೂರು ಗ್ರಾಮದ ಕೆಲವರಿಗೆ ಜೇವರ್ಗಿ ತಹಶೀಲ್ದಾರ್ ನೋಟಿಸ್ ನೀಡಿದ್ದರು. ಅಲ್ಲದೇ, ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ವಶಕ್ಕೆ ಪಡೆದಿದ್ದರು. ಜಿಲ್ಲಾ ಮರಳು ಸಮಿತಿಗೆ ವರದಿ ಕೂಡ ನೀಡಿದ್ದರು. ಈ ಅಕ್ರಮ ಸಾಬೀತಾಗಿ ಮೂರು ತಿಂಗಳಾದರೂ ಯಾರ ಮೇಲೂ ಕ್ರಮ ವಹಿಸಿಲ್ಲ. ಅಧಿಕಾರಿಗಳ ಉದ್ದೇಶವೇನು’ ಎಂದೂ ಅವರು ಪ್ರಶ್ನಿಸಿದರು.

ADVERTISEMENT

‘ಈ ಎಲ್ಲ ಸಂಗತಿಗಳನ್ನೂ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರುವುದು ಅನಿವಾರ್ಯವಾಗಿದೆ. ಆಗಲಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬಹುದು’ ಎಂದರು.

ಸಾಮಾಜಿಕ ಕಾರ್ಯಕರ್ತರಾದ ಫಿರೋಜ್ ಪಟೇಲ್ ತವರಗೇರಾ, ರಾಜೇಂದ್ರ ರಾಜವಾಳ, ರಾಜಕುಮಾರ ಮಂಗಲಗಿ, ಆನಂದ ಕಡಕೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.