ADVERTISEMENT

‘ಹಲ್ಲೆ ಮಾಡುವುದನ್ನು ಬಿಟ್ಟು ಅಕ್ರಮ ತಡೆಯಿರಿ’–ಶಾಮರಾವ್‌ ಸೂರನ್‌

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 15:19 IST
Last Updated 4 ಏಪ್ರಿಲ್ 2021, 15:19 IST

ಕಲಬುರ್ಗಿ: ‘ಸೇಡಂನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಪೊಲೀಸರು ಅದನ್ನು ತಡೆಯಬಹುದು. ಆದರೆ, ಏಕಾಏಕಿ ಯಾರ ಮೇಲೂ ಹಲ್ಲೆ ಮಾಡುವುದು ಸರಿಯಲ್ಲ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್‌ ಸೂರನ್‌ ಹೇಳಿದರು.

‘ಸೇಡಂ ಕ್ಷೇತ್ರದಲ್ಲಿ ಕ್ಲಬ್‍ಗಳಲ್ಲಿ ಜೂಜಾಟ, ಮದ್ಯ ಮಾರಾಟ ಸೇರಿದಂತೆ ಇತರ ಯಾವುದೇ ಅಕ್ರಮಗಳು ನಡೆಯುತ್ತಿದ್ದರೆ ಅದನ್ನು ತಡೆಯಲು ಯಾರದೂ ತಕರಾರು ಇಲ್ಲ. ಇಂಥ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ಚಟುವಟಿಗೆಳನ್ನು ಮಟ್ಟಹಾಕಲು ಪೊಲೀಸರು ಕಠಿಣ ಕ್ರಮ ಅನುಸರಿಸಲಿ. ಬಂಧಿಸಿ ಜೈಲಿಗಟ್ಟಲಿ. ಅದನ್ನು ಬಿಟ್ಟು ಮಾರಣಾಂತಿಕ ಹಲ್ಲೆ ಮಾಡುವುದು ಸರಿಯಲ್ಲ’ ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕ್ಲಬ್‍ಗಳ ಮೇಲೆ ದಾಳಿ ಮಾಡುವುದಾದರೆ ಅವುಗಳಿಗೆ ಪರವಾನಗಿ ನೀಡುವ ಉದ್ದೇಶವೇನು? ಕ್ಲಬ್‍ಗಳಿಂದ ಅನೇಕ ಜನ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಮಾಜ ಹಾಳು ಮಾಡುವ ಚಟುವಟಿಕೆಗಳನ್ನು ನಿಯಂತ್ರಿಸಬೇಕಾದರೆ ಸರ್ಕಾರ ಇಂಥ ಕ್ಲಬ್‌ಗಳಿಗೆ ಅನುಮತಿಯನ್ನೇ ನೀಡಬಾರದು. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಇದರ ವಿರುದ್ಧ ಹೋರಾಟ ಮಾಡಲಿದೆ’ ಎಂದರು.

ADVERTISEMENT

‘ಸೇಡಂನ ಕ್ಲಬ್‌ ಒಂದರ ಮೇಲೆ ಶನಿವಾರ ನಡೆದ ದಾಳಿಗೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳುವಂತೆ ಈಶಾನ್ಯ ವಲಯ ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ’ ಎಂದು ಜೆಡಿಎಸ್‌ ಮುಖಂಡ ಬಾಲರಾಜ ಗುತ್ತೇದಾರ್ ತಿಳಿಸಿದರು.

ಸೇಡಂನ ಕ್ಲಬ್‌ವೊಂದರಲ್ಲಿ ಜೂಜು ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ, ಅಲ್ಲಿದ್ದ ವ್ಯಕ್ತಿಗಳು ಹಾಗೂ ‍ಪೊಲೀಸರ ಮಧ್ಯೆ ಜಟಾಪಟಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.