ADVERTISEMENT

ಯುನೈಟೆಡ್‌ನಲ್ಲಿ ರೋಗ ನಿರೋಧಕ ಶಕ್ತಿ ತಪಾಸಣೆ

ಕೋವಿಡ್‌ನಂಥ ಸೋಂಕುಗಳಿಂದ ಜೀವ ರಕ್ಷಣೆಗಾಗಿ ವಿಶೇಷ ಅಭಿಯಾನ: ಡಾ.ವಿಕ್ರಮ ಸಿದ್ದಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 1:20 IST
Last Updated 25 ಸೆಪ್ಟೆಂಬರ್ 2020, 1:20 IST
ಡಾ.ವಿಕ್ರಮ ಸಿದ್ದಾರೆಡ್ಡಿ
ಡಾ.ವಿಕ್ರಮ ಸಿದ್ದಾರೆಡ್ಡಿ   

ಕಲಬುರ್ಗಿ: ‘ದೇಹದಲ್ಲಿನ ರೋಗ ನಿರೋಧಕ ಶಕ್ತಿಯ ಪ್ರಮಾಣವನ್ನು ಪತ್ತೆ ಮಾಡುವಂಥ ನೂತನ ವಿಧಾನವನ್ನು ಇಲ್ಲಿನ ಯುನೈಟೆಡ್‌ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ. ಕೋವಿಡ್‌ ಉಪಟಳದ ನಡುವೆ ಈ ಪರೀಕ್ಷೆ ಜನರ ಪ್ರಾಣ ರಕ್ಷಣೆಗೆ ಹೆಚ್ಚಿನ ಅವಕಾಶ ನೀಡಲಿದೆ’ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ವಿಕ್ರಮ ಸಿದ್ದಾರೆಡ್ಡಿ ತಿಳಿಸಿದರು.

‘ಇಮ್ಯುನೊಆಸ್ಸೆ ವಿಧಾನದಿಂದ ಐಜಿಜಿ ಆ್ಯಂಟಿಬಾಡಿ ಸಿರೊ ಟೈಟ್ರೆ’ ಪರೀಕ್ಷೆ ಮೂಲಕ ರೋಗನಿರೋಧಕ ಶಕ್ತಿ ಪ್ರಮಾಣ ಅರಿಯಬಹುದಾಗಿದೆ. ಇದು ಅತ್ಯಂತ ನವೀನ ಹಾಗೂ ಪರಿಣಾಮಕಾರಿ ವಿಧಾನ. ಈ ರೀತಿ ರೋಗ ನಿರೋಧಕ ಶಕ್ತಿಯನ್ನು ಮುಂಚಿತವಾಗಿಯೇ ಅರಿಯುವುದರಿಂದ ಕೋವಿಡ್‌ ಮತ್ತಿತರ ಸೋಂಕುಗಳಿಂದ ಬಚಾವಾಗಬಹುದು’ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಐಜಿಜಿ ಪ್ರತಿಕಾಯ ಮಾನವನ ದೇಹದಲ್ಲಿನ ಕೋವಿಡ್-19 ವೈರಸ್ ಅನ್ನು ನಾಶಮಾಡುವ ಸಾಮರ್ಥ್ಯ ಹೊಂದಿದೆ. ಉತ್ತಮ ಮಟ್ಟದ ಐಜಿಜಿ ಪ್ರತಿಕಾಯಗಳು ಇರುವುದರಿಂದ ಕೋವಿಡ್-19 ವಿರುದ್ಧದ ರಕ್ಷಣೆ ಸುಲಭ. ಒಂದು ಬಾರಿ ಅಭಿವೃದ್ಧಿಪಡಿಸಿದ ನಂತರ, ಈ ಐಜಿಜಿ ಪ್ರತಿಕಾಯಗಳು ದೀರ್ಘಕಾಲದವರೆಗೆ ರಕ್ತ ಪರಿಚಲನೆಯಲ್ಲಿ ಉಳಿಯುತ್ತವೆ. ಇದರಿಂದಾಗಿ ವ್ಯಕ್ತಿಯು ಭವಿಷ್ಯದಲ್ಲಿ ಸೋಂಕಿನಿಂದ ಸಂಪೂರ್ಣ ರೋಗನಿರೋಧಕ ಶಕ್ತಿ ಹೊಂದಿರುತ್ತಾನೆ. ಇನ್ನೊಂದು ತರಹ ವಿವರಿಸುವುದಾದರೆ; ಉತ್ತಮ ಮಟ್ಟದ ಐಜಿಜಿ ಆ್ಯಂಟಿಬಾಡಿ ಸಿರೊ ಟೈಟ್ರೆ ಹೊಂದಿರುವ ವ್ಯಕ್ತಿ ಇತರರಿಗೆ ಸೋಂಕು ತಗುಲಿಸುವುದಿಲ್ಲ. ಭವಿಷ್ಯದಲ್ಲಿ ಇತರರಿಂದ ಸೋಂಕಿಗೆ ಒಳಗಾಗುವುದಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಐಜಿಜಿ ಆಂಟಿಬಾಡಿ ಸಿರೊ ಪರೀಕ್ಷೆಯು ಐಜಿಜಿ ಪ್ರತಿಕಾಯಗಳ ಉಪಸ್ಥಿತಿಯನ್ನು ದೃಢಪಡಿಸುತ್ತದೆ. ಕೋವಿಡ್-19ನಿಂದ ಶೇಕಡ 100ರಷ್ಟು ಯಾರು ಸುರಕ್ಷಿತರಾಗಿದ್ದಾರೆ ಎಂದು ನಿಖರ ಮಾಹಿತಿ ಸಿಗುತ್ತದೆ. ಜತೆಗೆ ಕೋವಿಡ್-19 ವಿರುದ್ಧದ ಪ್ರತಿರಕ್ಷೆಯನ್ನು ಈ ಪರೀಕ್ಷೆ ಖಚಿತ ಪಡಿಸುತ್ತದೆ’ ಎಂದೂ ಡಾ.ವಿಕ್ರಮ ವಿವರಿಸಿದರು.

‘ಆಸ್ಪತ್ರೆಯ ಯುನೈಟೆಡ್‌ ಡಯಾಗ್ನಾಸ್ಟಿಕ್ಸ್ ಕೋವಿಡ್-19 ಅನ್ನು ಪತ್ತೆಹಚ್ಚಲು ಆರ್‍ಟಿಪಿಸಿಆರ್ ಪರೀಕ್ಷೆ ಪ್ರಾರಂಭಿಸಿದ ಬೆಂಗಳೂರು ಹೊರಗಿನ ಮೊದಲ ಖಾಸಗಿ ಪ್ರಯೋಗಾಲಯವಾಗಿದೆ. ಸರ್ಕಾರಿ ಮತ್ತು ಖಾಸಗಿ ಮಾದರಿ ಒಳಗೊಂಡ 12,000ಕ್ಕೂ ಅಧಿಕ ಆರ್‌ಟಿ–ಪಿಸಿಆರ್‌ ‌ ಪರೀಕ್ಷೆ ಈವರೆಗೆ ನಡೆಸಿದೆ. ರೋಗ ಲಕ್ಷಣ ಇಲ್ಲದವರಿಗೆ ಚಿಕಿತ್ಸೆ ನೀಡಲು ವಿಶೇಷವಾದ ಕೋವಿಡ್-19 ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಯುನೈಟೆಡ್‌ನ ಐಸಿಯು, ಎಚ್‍ಡಿಯು ಸೇರಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕ 24 ಹಾಸಿಗೆಗಳ ಸೌಲಭ್ಯ ಹೊಂದಿದೆ’ ಎಂದರು.

ಮಾಹಿತಿಗೆ ಮೊಬೈಲ್ 9535601919, 9343382517ಗೆ ಸಂಪರ್ಕಿಸಲು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.