ಕಲಬುರಗಿ: ‘ಏನ್ ಮಾಡಾಕ ಆಗತ್ತರೀ, ನಮಗೂ ಸಾಕಾಗೇತಿ. ಇದರಾಗ ಅಡ್ಯಾಡುದ ಅನಿವಾರ್ಯ ಆಗೇತಿ. ಸಂಜಿ ಆತಂದ್ರ ಸೊಳ್ಳಿ ಕಾಟ ಶುರು ಆಕ್ಕೇತಿ. ಕೆಟ್ಟ ವಾಸನಿಗೆ ನಾವ್ ಹೊಂದಕೊಂಡಬಿಟ್ಟೇವಿ’ ಎಂಬುದು ರಾಮ ನಗರ ಉದ್ಯಾನ ಸಮೀಪದ ನಿವಾಸಿಗಳ ನಿರಾಸೆಯ ನುಡಿ.
‘ಕಸ, ಮುಸುರೆಯನ್ನು ಬೇರೆ ಮಾಡಿ ಚೆಲ್ಲಿ ಎಂದರೂ ಹೋಟೆಲ್ ಮಾಲೀಕರು ಕೇಳುತ್ತಿಲ್ಲ. ಒಳಚರಂಡಿಗೆ ಒತ್ತಡ ಹೆಚ್ಚಾಗಿದ್ದರಿಂದ ನಿರ್ವಹಣೆಯೇ ದೊಡ್ಡ ತಲೆನೋವಾಗಿದೆ...’ ಎನ್ನುವುದು ಮಹಾನಗರ ಪಾಲಿಕೆ ಸದಸ್ಯರೊಬ್ಬರ ಅಸಹಾಯಕತೆ.
ರಾಮನಗರದ ಉದ್ಯಾನ, ಬಸವ ಮಂಟಪ ಸಮೀಪ, ಗುಬ್ಬಿ ಕಾಲೊನಿ, ವೆಂಕಟೇಶ್ವರ ನಗರ, ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆ, ರೈಲು ನಿಲ್ದಾಣ ಸಮೀಪ, ಎಸ್‌ವಿಪಿ ವೃತ್ತ... ಹೀಗೆ ನಗರದ ಯಾವ ಅಡ್ಡ ರಸ್ತೆಗೆ ಹೋದರೂ ಒಳಚರಂಡಿ ತುಂಬಿ ನೀರು ರಸ್ತೆ ಪಕ್ಕದಲ್ಲಿ ನಿಂತಿರುವುದು, ರಸ್ತೆಯಲ್ಲೇ ಹರಿಯುತ್ತಿರುವುದು ಅಥವಾ ರಸ್ತೆಯ ತಗ್ಗುಗಳಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ.
‘ಕೆಲ ದಿನಗಳ ಹಿಂದೆ ಪಾಲಿಕೆಯ ಪೌರಕಾರ್ಮಿಕರು ತಮ್ಮ ವೇತನ ಪಾವತಿಗೆ ಮುಷ್ಕರ ಮಾಡಿದಾಗ ಕಸದ ಜತೆ ಒಳಚರಂಡಿ (ಯುಜಿಡಿ) ಸಮಸ್ಯೆಯೂ ಸೇರಿ ಎರಡು ದಿನ ಅಸಹನೀಯ ವಾತಾವರಣ ನಿರ್ಮಾಣವಾಗಿತ್ತು. ಒಳ ಚರಂಡಿ ತುಂಬಿ ಹೊರ ಬಂದ ನೀರು ಕಸ ಸಂಗ್ರಹವಾದಲ್ಲಿ ಹರಿದುಹೋಗಿತ್ತು. ಕೆಲ ತ್ಯಾಜ್ಯಗಳು ನೀರಿನೊಂದಿಗೆ ಸೇರಿ ಕೊಳೆತು ದುರ್ವಾಸನೆ ಹಬ್ಬಿತ್ತು’ ಎಂದು ರಾಮನಗರದ ಅನಿತಾ ತಿಳಿಸಿದರು.
‘ನಾನು ಈ ಮಾರ್ಗದಲ್ಲಿ ನಿತ್ಯ ಓಡಾಡುತ್ತೇನೆ (ಬಸ್ ನಿಲ್ದಾಣ ರಸ್ತೆಯ ಜನತಾ ಲಾಡ್ಜ್ ಪಕ್ಕದ ರಸ್ತೆಯಿಂದ ಮೋಹನ್ ಬಾರ್ ಪಕ್ಕದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ). ಇಲ್ಲಿ ಯುಜಿಡಿ ಸಮಸ್ಯೆ ಹೆಚ್ಚಿದೆ. ಒಂದಂತೂ ಸದಾ ತುಂಬಿ ಹರಿಯುತ್ತಿರುತ್ತದೆ. ಕೊಳಚೆ ನೀರಿನಲ್ಲಿ ಸ್ವಲ್ಪ ವೇಗವಾಗಿ ಬೈಕ್ ಓಡಿಸಿದರೂ ಪಕ್ಕದವರಿಗೆ ನೀರು ಸಿಡಿಯುತ್ತದೆ. ಕೆಟ್ಟ ವಾಸನೆಯೂ ಹಬ್ಬಿರುತ್ತದೆ. ಯಾವಾಗ ಈ ರಸ್ತೆ ದಾಟುತ್ತೇನೋ ಎನಿಸುತ್ತದೆ’ ಎಂದು ವಾಹನ ಸವಾರ ಕೆ.ಸೂಗೂರೇಶ ಹೇಳಿದರು.
ಯುಜಿಡಿ ದೂರಿನ ಪ್ರಮಾಣ ಹೆಚ್ಚಳ: ಜನರ ಕುಂದುಕೊರತೆ ಆಲಿಸಿ ಅವುಗಳನ್ನು ಪರಿಹರಿಸಲು ಮಹಾನಗರ ಪಾಲಿಕೆ ಆರಂಭಿಸಿರುವ ಸಹಾಯವಾಣಿಗೆ ಯುಜಿಡಿ ಸಮಸ್ಯೆಗೆ ಸಂಬಂಧಿಸಿದ ಕರೆಗಳೇ ಹೆಚ್ಚು ಬರುತ್ತಿವೆ.
‘ಸಹಾಯವಾಣಿಗೆ ಬರುವ ಕರೆಗಳ ಸಮಸ್ಯೆ ನಿವಾರಣೆಗೆ 3 ವಲಯ ಸೇರಿ ಒಂದು ವಾಟ್ಸ್‌ಆಪ್ ಬಳಗವಿದ್ದು ಅಧಿಕಾರಿಯೊಬ್ಬರು ಇದನ್ನು ನಿರ್ವಹಿಸುತ್ತಾರೆ. ಸಹಾಯವಾಣಿ ಮೂಲಕ ಬಂದ ಯುಜಿಡಿ ಸಮಸ್ಯೆಯನ್ನು ಆ ವಲಯಕ್ಕೆ ಸಂಬಂದಪಟ್ಟವರಿಗೆ ತಿಳಿಸಿ ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಹೆಚ್ಚಿನ ಸಮಸ್ಯೆ ಇದ್ದರೆ ಸಂಬಂಧಿಸಿದ ಎಂಜಿನಿಯರ್ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಮಹಾನಗರ ಪಾಲಿಕೆ ಎಂಜಿನಿಯರ್ ಪುರುಷೋತ್ತಮ ತಿಳಿಸಿದರು.
8ನೇ ವಾರ್ಡ್‌ನ ಆರ್ಯ ನಗರ, ಸಂಜು ನಗರ, 44ನೇ ವಾರ್ಡ್‌ನ ಹೀರಾನಗರ ಬಡಾವಣೆ ಸೇರಿ ವಿವಿಧ ಹೊಸ ಬಡಾವಣೆಗಳಲ್ಲ ಇನ್ನೂ ಒಳ ಚರಂಡಿಗಳೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.