ADVERTISEMENT

ಅಂತರ್ಜಲ ಬತ್ತಿದರೆ ವಿಷವೇ ಗತಿ

‘ಅಂತರ್ಜಲ ಚೇತನ’ಕ್ಕೆ ಚಾಲನೆ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ ತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 15:48 IST
Last Updated 5 ಜೂನ್ 2020, 15:48 IST

ಕಲಬುರ್ಗಿ: ‘ಈಗಿನಿಂದಲೇ ಅಂತರ್ಜಲ ವೃದ್ಧಿ ಮಾಡದೇ ಇದ್ದರೆ ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ನಾವೇ ವಿಷ ನೀಡಿದಂತಾಗುತ್ತದೆ. ಈ ಅಪಾಯದಿಂದ ಪಾರಾಗಲು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ‘ಅಂತರ್ಜಲ ಚೇತನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ನಾವೀಗ ಪರಿಸರಕ್ಕೆ ಧಕ್ಕೆ ಮಾತ್ರ ಮಾಡುತ್ತಿಲ್ಲ. ಅತ್ಯಾಚಾರ ಮಾಡುತ್ತಿದ್ದೇವೆ. ನಮ್ಮ ಹಿರಿಯರು ಹಚ್ಚಿದ ಮರಗಳನ್ನು ಸಂರಕ್ಷಿಸಿದ್ದರೆ ಇಂದು ನೀರಿಗಾಗಿ ಇಷ್ಟು ಪರದಾಡುವ ಸ್ಥಿತಿ ಬರುತ್ತಿರಲಿಲ್ಲ. ಜಲವೃದ್ಧಿಗೆ ಪ್ರತಿ ವರ್ಷವೂ ಆಂದೋಲನ ಹಮ್ಮಿಕೊಳ್ಳುವ ಸ್ಥಿತಿ ತಲುಪಿದ್ದು, ಸಮಾಜಕ್ಕೆ ಒಳ್ಳೆಯದಲ್ಲ. ಈಗಲಾದರೂ ಸಮಾಜ ಜಾಗೃತವಾಗಬೇಕು. ಮರಗಳನ್ನೂ ಮಕ್ಕಳಂತೆ ನೋಡುವ ಮನೋಭಾವ ಬೆಳೆಯದೇ ಇದ್ದರೆ ಯಾರಿಗೂ ಉಳಿಗಾಲವಿಲ್ಲ’ ಎಂದು ಎಚ್ಚರಿಸಿದರು.

‘ದಶಕದ ಹಿಂದೆ ಶೇಕಡ 40ರಷ್ಟು ಮಳೆ ನೀರು ಭೂಮಿಯಲ್ಲಿ ಇಂಗುತ್ತಿತ್ತು. ಆದರೆ, ಈಗ ಶೇಕಡ 5ರಷ್ಟು ಕೂಡ ಇಂಗುತ್ತಿಲ್ಲ. ಹೀಗಾಗಿ, ಅಂತರ್ಜಲ ಚೇತನ ಯೋಜನೆ ಮೂಲಕ ಮೂರು ವರ್ಷದಲ್ಲಿ ಅಂತರ್ಜಲ ಹೆಚ್ಚಳ ಮಾಡಲಾಗುವುದು. ಈ ನಿಟ್ಟಿನಲ್ಲಿ ದಿ ಆರ್ಟ್ ಆಫ್ ಲಿವಿಂಗ್ ಹಾಗೂ ಮೈರಾಡಾ ಸಂಸ್ಥೆಗಳು ಸರ್ಕಾರಕ್ಕೆ ಸಹಾಯ ಹಸ್ತ ನೀಡಿವೆ’ ಎಂದರು.

ADVERTISEMENT

ಖಾತ್ರಿಗೆ ಸಾಕಷ್ಟು ಅನುದಾನ: ‘ಉದ್ಯೋಗ ಖಾತ್ರಿಗಾಗಿ ಬಾಕಿ ಉಳಿದ್ದಿದ್ದ ₹ 1861 ಕೋಟಿ ಅನುದಾನ ಬಂದಿದೆ. ರಾಜ್ಯದೆಲ್ಲೆಡೆ ಕಾಮಗಾರಿಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. 9.36 ಲಕ್ಷ ಜನರಿಗೆ ಏಕಕಾಲಕ್ಕೆ ಕೆಲಸ ಕೊಟ್ಟಿದ್ದು ರಾಜ್ಯದ ದೊಡ್ಡ ಸಾಧನೆ’ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಆಯುಕ್ತ ಅನಿರುದ್ಧ ಶ್ರವಣ್ ಮಾತನಾಡಿ, ‘ರಾಜ್ಯದಲ್ಲಿ ಅಂತರ್ಜಲ ಚೇತನ ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ತಾಂತ್ರಿಕ ಜ್ಞಾನ ಸಹಾಯ ನೀಡಲು 24 ಸಂಸ್ಥೆಗಳು ಮುಂದೆ ಬಂದಿದ್ದವು. ಕೆಲ ಮಾನದಂಡಗಳನ್ನು ಅನುಸರಿಸಿ, 4 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಜಿಲ್ಲೆಯಲ್ಲಿ ದಿ ಆರ್ಟ್ ಆಫ್ ಲಿವಿಂಗ್ ಹಾಗೂ ಮೈರಾಡಾ ಸಂಸ್ಥೆಗಳು ಈ ಯೋಜನೆಗೆ ನೆರವಾಗಲಿವೆ ಎಂದರು.

‘ಅರಣ್ಯೀಕರಣ ಮಾಡುವ ಮೂಲಕ ಮಣ್ಣಿನ ಸವಕಳಿ ನಿಯಂತ್ರಿಸುವ ಜೊತೆಗೆ ಅಂತರ್ಜಲ ಹೆಚ್ಚಿಸುವುದು, ಬಾವಿಗಳ ಮರುಪೂರಣ, ಕಲ್ಲುಗುಂಡು ತಡೆ, ಕೆರೆಹೊಂಡಗಳು, ವಾಟರ್ ಶೆಡ್ ವರ್ಕ್ ಮುಂತಾದವುಗಳ ಯೋಜನಾ ವಿಸ್ತೃತ ವರದಿ ತಯಾರಿಸಿ, ಅನುಷ್ಠಾನಗೊಳಿಸಲು ಸಂಸ್ಥೆಗಳು ಸಹಕಾರ ನೀಡಲಿವೆ’ ಎಂದು ತಿಳಿಸಿದರು.

ಸಂಸದ ಡಾ.ಉಮೇಶ ಜಾಧವ, ಆರ್ಟ್ ಆಫ್ ಲಿವಿಂಗ್‍ನ ಪ್ರತಿನಿಧಿ ನಾಗರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮಾಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೇಂಗಳಿ, ಶಾಸಕರಾದ ಎಂ.ವೈ.ಪಾಟೀಲ, ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾಧಿಕಾರಿ ಶರತ್. ಬಿ, ಸಿಇಒ ಡಾ.ಪಿ.ರಾಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.