ಸೇಡಂ: ತಾಲ್ಲೂಕಿನ ಕೋಡ್ಲಾ ಗ್ರಾಮದ ಧಾರ್ಮಿಕ ಕ್ಷೇತ್ರ ಉರಿಲಿಂಗ ಪೆದ್ದೀಶ್ವರ ನವೀಕೃತ ಮಠದ ಉದ್ಘಾಟನಾ ಸಮಾರಂಭ ಜೂನ್ 15ರಂದು ಬೆಳಿಗ್ಗೆ 12 ಗಂಟೆಗೆ ನಡೆಯಲಿದೆ. ನವೀಕೃತ ಮಠವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಉದ್ಘಾಟಿಸಲಿದ್ದಾರೆ. ಅಂಬೇಡ್ಕರ್ ಗ್ರಂಥಾಲಯವನ್ನು ಸಚಿವ ಸತೀಶ ಜಾರಕಿಹೋಳಿ ಉದ್ಘಾಟಿಸಲಿದ್ದಾರೆ. ಸಚಿವರಾದ ಪ್ರಿಯಾಂಕ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ, ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಪಾಟೀಲ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಚಿತ್ತರಗಿ ಗುರುಮಹಾಂತ ಅಪ್ಪ, ಸಿದ್ಧರಾಮ ಬೆಲ್ದಾಳ, ಮಹಾದೇವ ಸ್ವಾಮೀಜಿ, ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಸೇರಿದಂತೆ ಸೇಡಂ ತಾಲ್ಲೂಕಿನ ವಿವಿಧ ಮಠ-ಮಂದಿರಗಳ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉರಿಲಿಂಗ ಪೆದ್ದೀಶ್ವರ ಮಠದ ಪೀಠಾಧಿಪತಿ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದ್ದಾರೆ.
ಮಠದ ಉದ್ಘಾಟನೆ ನಿಮಿತ್ತ ಗ್ರಾಮದ ವಿವಿಧ ಬಡಾವಣೆಗಳನ್ನು ಸ್ವಚ್ಛಗೊಳಿಸಲಾಗಿದೆ. ಮಠವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಮಳೆಗಾಲ ಇರುವುದರಿಂದ ಭಕ್ತರಿಗೆ ತೊಂದರೆಯಾಗದಂತೆ ಮಠದ ಆಡಳಿತ ಮಂಡಳಿ ಸಂಪೂರ್ಣ ವ್ಯವಸ್ಥೆ ಮಾಡಿದೆ. ಸಾವಿರಾರು ಭಕ್ತರು ಬರಲಿದ್ದು, ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮಕೈಗೊಳ್ಳಲಾಗಿದೆ ಎಂದು ಭಕ್ತ ಮಹಾಂತಪ್ಪ ಸಂಗಾವಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.